ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದು ಪ್ರಾಣಿ ಕ್ರೌರ್ಯ ತಡೆಗಟ್ಟಲು ಗೃಹ, ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸಭೆಯಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಸರಿಯಾಗಿ ನೀವು ಮಾಹಿತಿ ನೀಡಿಲ್ಲ ಎಂದು ತಮ್ಮದೇ ಇಲಾಖೆ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಮಂಜುನಾಥ್ ಪಾಳೆಗಾರ್ ವಿರುದ್ಧ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಗರಂ ಆದರು.
ವಿಕಾಸಸೌಧದಲ್ಲಿ ಆಯೋಜಿಸಿದ್ದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸರ್ವ ಸದಸ್ಯರ ಸಭೆಗೆ ಗೃಹ ಇಲಾಖೆ, ಸಾರಿಗೆ ಇಲಾಖೆ, ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಭಾಗವಹಿಸದಿದ್ದರಿಂದ ಈ ಸಭೆಗೆ ಮುಖ್ಯವಾದರೆ ಭಾಗಿಯಾಗದಿದ್ದರೆ ಬೆಂಗಳೂರು ಮತ್ತು ರಾಜ್ಯದಲ್ಲಿ ಗೋಹತ್ಯೆ ತಡೆಗಟ್ಟುವುದು ಹೇಗೆ ಎಂದು ಪಶು ಸಂಗೋಪನೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಾಹೀಮ್ ಅವರನ್ನು ಸಚಿವರು ಪ್ರಶ್ನಿಸಿದ ಪ್ರಸಂಗ ಜರುಗಿತು.
ಗೋಹತ್ಯೆ ತಡೆಗಟ್ಟುವುದು ನನ್ನೊಬ್ಬನಿಂದ ಸಾಧ್ಯವಿಲ್ಲ. ನೀವೆಲ್ಲರೂ ಸಹಕಾರ ನೀಡಿದಾಗ ಮಾತ್ರ ರಾಜ್ಯದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿ ಗೋಹತ್ಯೆ ತಡೆಗಟ್ಟಲು ಸಾಧ್ಯವಿದೆ ಮುಂದಿನ ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಖುದ್ದಾಗಿ ತಾವೇ ಎಲ್ಲರಿಗೂ ಆಹ್ವಾನಿಸಿ. ಹಾಗೊಂದು ವೇಳೆ ಕರ್ನಾಟಕ ಪ್ರಾಣಿ ಕಲ್ಯಾ ಮಂಡಳಿಯ ಸರ್ವ ಸದಸ್ಯರ ಸಭೆಗೆ ಅಧಿಕಾರಿಗಳು ಭಾಗವಹಿಸದಿದ್ದರೇ ಕೂಡಲೇ ನೋಟಿಸ್ ನೀಡಿ ಎಂದು ಸಚಿವರು ಕಾರ್ಯದರ್ಶಿಗೆ ತಾಕೀತು ಮಾಡಿದರು.
ಇದನ್ನೂ ಓದಿ : ಹರ್ಷ ಕುಟುಂಬಕ್ಕೆ 10 ಲಕ್ಷ ರೂ. ನೆರವು ಘೋಷಿಸಿದ ಸಚಿವ ಅಶ್ವತ್ಥನಾರಾಯಣ
ರಾಜ್ಯದಲ್ಲಿ ಅನಧಿಕೃತ ಗೋ ವಧೆ, ಗೋ ಮಾಂಸ ಸಾಗಾಣಿಕೆ ಮತ್ತು ಶೇಖರಣೆಯನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಕೆಲವು ಕಡೆಗಳಲ್ಲಿ ಸಹಕಾರ ನೀಡುತ್ತಿದ್ದರೆ, ಇನ್ನು ಕೆಲಯ ಕಡೆಗಳಲ್ಲಿ ದೂರು ನೀಡಿದರೂ ಎಫ್.ಐ.ಆರ್ ದಾಖಲಿಸದೇ ಅಸಹಕಾರ ತೋರುತ್ತಿದೆ ಎಂದು ಸದಸ್ಯರುಗಳಿಂದ ಕೇಳಿ ಬಂದು ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಭು ಚವ್ಜಾಣ್ ಅವರು, ಗೃಹ ಇಲಾಖೆಯ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಬಗ್ಗೆ ಗಮನ ಹರಿಸಲು ಕೂಡಲೇ ಗೃಹ ಸಚಿವರು, ಗೃಹ ಇಲಾಖೆ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿಪಡಿಸಿ ಎಂದು ಪಶು ಸಂಗೋಪನೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಾಹೀಮ್ ಅವರಿಗೆ ಸಚಿವರು ಇದೇ ವೇಳೆ ಸೂಚಿಸಿದರು.
ಬೆಂಗಳೂರಿನಲ್ಲಿ ಪೆಟ್ ಶಾಪ್(ನಾಯಿ ಮಾರಾಟ ಮಳಿಗೆ) ತೆರೆಯಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ಅರ್ಜಿ ಸಲ್ಲಿಸಿದರೆ, ಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅನುಮತಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸದಸ್ಯರ ಮನವಿಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಶೀಲಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿರುವ ಮಾಂಸ ಮಾರಾಟ ಮಳಿಗೆಗಳು ಬಿಬಿಎಂಪಿಯಿಂದ ಮಾರಾಟ ಪರವಾನಗಿ ಪಡೆಯುತ್ತಿರುವ ಮಾದರಿಯಲ್ಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಿಂದ ಶುಲ್ಕ ನಿಗದಿಪಡಿಸಿದರೆ ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ಸಹಕಾರಿಯಾಗುತ್ತದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುಂದಿನ ಮಂಡಳಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಕಾರ್ಯದರ್ಶಿ ಅವರಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ ನೀಡಿದರು.