ಬೆಂಗಳೂರು: ಬೀದರ್ ಜಿಲ್ಲೆಯ ಔರಾದ್ ವಿಧಾನಸಭಾ ಕ್ಷೇತ್ರದ ಬಲ್ಲೂರ್(ಜೆ) ಗ್ರಾಮದಲ್ಲಿ 90 ಕೋಟಿ ವೆಚ್ಚದಲ್ಲಿ ಸಿಪೆಟ್ ಕೇಂದ್ರ ಆರಂಭಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 50:50 ಅನುಪಾತದಲ್ಲಿ ಸ್ಥಾಪನೆಯಾಗಲಿರುವ ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ (ಸಿಪೆಟ್) ಕೇಂದ್ರ ಆರಂಭಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಹಿಂದುಳಿದ ತಾಲ್ಲೂಕಾಗಿರುವ ಔರಾದ್ ತಾಲ್ಲೂಕು ಅಭಿವೃದ್ಧಿಗೆ 2008ರಿಂದ ಸಂಕಲ್ಪ ಮಾಡಿದ್ದೆ. 2009ರಿಂದ ನಿರಂತರ ಪ್ರಯತ್ನ ಮಾಡಿದ್ದರಿಂದ ಸಿಪೆಟ್ ಕೇಂದ್ರ ಔರಾದ್ ತಾಲ್ಲೂಕಿಗೆ ಬಂದಿರುವುದು ಈ ದಿನ ಸಾಕಾರಗೊಂಡಿದೆ. ಸಿಪೆಟ್ ಕೇಂದ್ರ ಸ್ಥಾಪನೆಯಿಂದ ವಾರ್ಷಿಕ 2000 ಉದ್ಯೋಗ ಸೃಷ್ಠಿಗೆ ತರಬೇತಿ ನೀಡುವುದರಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಯುವ ಜನತೆಗೆ ಸ್ವಯಂ ಉದ್ಯೋಗಪ್ರಾರಂಭಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕ
ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ 180 ಡಿಪ್ಲೋಮಾ ಕೋರ್ಸ್ ನಡೆಸಲು ಉದ್ದೇಶಿಸಲಾಗಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗುವುದರಿಂದ ಹೈದಾರಾಬಾದ್, ಗೋವಾ, ಬೆಂಗಳೂರಿಗೆ ಉದ್ಯೋಗ ಹರಸಿ ಗುಳೆ ಹೋಗುವುದನ್ನು ತಡೆಗಟ್ಟುವುದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಪ್ಲಾಸ್ಟಿಕ್, ಪೆಟ್ರೋ ಕೆಮಿಕಲ್ಸ್ ಕೈಗಾರಿಕೆಗಳಿಗೆ ನುರಿತ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ಯುವ ಜನಾಂಗಕ್ಕೆ ಅತ್ಯಾಧುನಿಕ ತರಬೇತಿ ಮೂಲಕ ತಾಂತ್ರಿಕ ನೈಪುಣ್ಯತೆ ಒದಗಿಸಲಿದೆ.
ಔರಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಲ್ಲಾರ(ಜೆ) ಗ್ರಾಮದಲ್ಲಿ 10 ಎಕರೆ ಜಮೀನು ಕಾಯ್ದಿರಿಸಿ, ಈ ಭಾಗ ಅಭಿವೃದ್ಧಿಯಾಗಲು ಸಹಕರಿಸಿದ ಜಿಲ್ಲಾಡಳಿತಕ್ಕೆ ಪ್ರಭು ಚವ್ಹಾಣ್ ಧನ್ಯವಾದ ಹೇಳಿದ್ದಾರೆ.
ಬಸವಣ್ಣನ ಜನ್ಮಭೂಮಿ ಬಸವಕಲ್ಯಾಣವು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದುತ್ತಿದೆ. ಬೀದರ್ ಜಿಲ್ಲೆ ಐತಿಹಾಸಿಕ ಜಿಲ್ಲೆ ಆಗುತ್ತಿರುವುದು ಸಂತೋಷದಾಯಕವಾಗಿದೆ. ಅನುಭವ ಮಂಟಪ ಮತ್ತು ಇತರೆ ಕಾಮಗಾರಿಗಳಿಗಾಗಿ ಒಟ್ಟಾರೆ ರೂ.612 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಗೆ ರೂ.10 ಕೋಟಿಯನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಿರುವುದಕ್ಕೆ ಸಚಿವ ಪ್ರಭು ಚವ್ಹಾಣ್ ಮಂತ್ರಿ ಮಂಡಲಕ್ಕೆ ಧನ್ಯವಾದ ತಿಳಿಸಿದ್ದಾರೆ.