ಬೀದರ್: ಕೋವಿಡ್ ದುಡಿಯುವ ಕೈಗಳನ್ನು ಕಟ್ಟಿ ಹಾಕಿದೆ. ಈ ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 15 ದಿನದ ಅಂತರದಲ್ಲಿ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡುವುದರ ಮೂಲಕ ರಾಜ್ಯದ ಎಲ್ಲ ವರ್ಗಗಳ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು,ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿದ್ದು ಆರ್ಥಿಕತೆಗೆ ಸಾಕಷ್ಟು ಪೆಟ್ಟು ಬಿದ್ದಿದೆ. ಕಳೆದ ತಿಂಗಳಿನಲ್ಲಿ ರಾಜ್ಯಸರ್ಕಾರ ರೂ.1250 ಕೋಟಿಯ ಪ್ಯಾಕೇಜ್ ಘೋಷಣೆ ಮಾಡಿತ್ತು. ಈ ಬಾರಿ ರೂ.500 ಕೋಟಿ ಪ್ಯಾಕೇಜ್ ಘೋಷಣೆ ಮಾಡುವುದರ ಮೂಲಕ ರಾಜ್ಯದ ಎಲ್ಲ ವರ್ಗಗಳ ಬೆನ್ನೆಲುಬಾಗಿ ನಿಂತಿದೆ ಎಂದಿದ್ದಾರೆ.
ಅಂದಾಜು 62,22,335 ಫಲಾನುಭವಿಗಳು ಈ ಪ್ಯಾಕೇಜ್ ನ ಲಾಭ ಪಡೆಯಲಿದ್ದಾರೆ. ಪವರ್ ಲೂಮ್, ಅಸಂಘಟಿತ ಚಲನಚಿತ್ರ ಕಾರ್ಮಿಕರು, ಮೀನುಗಾರರು, ಇನ್ ಲ್ಯಾಂಡ್ ಮೀನುಗಾರರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಾಲಾ ಮಕ್ಕಳಿಗೆ ಹಾಲಿನ ಪುಡಿ ನೀಡುವುದು, ನ್ಯಾಯವಾದಿಗಳಿಗೆ ಮತ್ತು ಕೈಗಾರಿಕೆಗಳಿಗೆ ಮಾಸಿಕ ನಿಗದಿತ ವಿದ್ಯುತ್ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಿ ರಾಜ್ಯದ ಎಲ್ಲ ವರ್ಗದ ಪರವಾಗಿ ನಿಂತಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಸಚಿವ ಪ್ರಭು ಚವ್ಹಾಣ್ ಧನ್ಯವಾದಗಳನ್ನು ತಿಳಿಸಿದ್ದಾರೆ.
ಹೈನೋದ್ಯಮಕ್ಕೂ ಉತ್ತೇಜನ :
ಲಾಕ್ಡೌನ್ ಹೈನೋದ್ಯವನ್ನು ಸಂಕಷ್ಟಕ್ಕೆ ದುಡಿತ್ತು ಆದರೆ ಈ ಬಾರಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಪ್ಯಾಕೇಜ್ ನಲ್ಲಿ ರೈತರು ನೀಡುತ್ತಿರುವ ಹಾಲನ್ನು ಕೆ.ಎಂ.ಎಫ್ ಹಾಲಿನ ಪುಡಿ ಮಾಡುತ್ತಿದ್ದು ಇದನ್ನು ಮಕ್ಕಳಿಗೆ ಆಹಾರ ಧಾನ್ಯಗಳ ಜೊತೆಗೆ ಉಚಿತವಾಗಿ ನೀಡುತ್ತಿರುವುದರಿಂದ ಒಂದೆಡೆ ರೈತರಿಂದ ನಿರಂತರ ಹಾಲಿನ ಖರೀದಿ ಮತ್ತೊಂದೆಡೆ ಶಾಲಾ ಮಕ್ಕಳಿಗೆ ಹಾಲಿನ ಪುಡಿ ನೀಡುವುದರ ಮೂಲಕ ಪೌಷ್ಟಿಕತೆ ಹೆಚ್ಚಿಸಿದಂತಾಗಿದೆ ಅಲ್ಲದೇ ಈ ಲಾಕ್ಡೌನ್ ಅವಧಿಯಲ್ಲಿ ಕೆ.ಎಂ.ಎಫ್ ನ್ನು ಆರ್ಥಿನ ಸಂಕಷ್ಟದಿಂದ ಪಾರು ಮಾಡಿದಂತಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ, ಹೈನೋದ್ಯಮಕ್ಕೆ ಉತ್ತೇಜನ ಮತ್ತು ಕೆ.ಎಂ.ಎಫ್ ನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತಿದಂತಾಗಿದೆ ಎಂದು ಹೇಳಿದ್ದಾರೆ.