Advertisement

‘ಕಾಂತಾರ’ ಗೆ ಬಹುಪರಾಕ್ ಎಂದ ಬಾಹುಬಲಿ ಸ್ಟಾರ್ ಪ್ರಭಾಸ್

09:42 AM Oct 02, 2022 | Team Udayavani |

ರಿಷಭ್‌ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ “ಕಾಂತಾರ’, ಶುಕ್ರವಾರವಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಧ್ಯೆ, ಪ್ಯಾನ್‌ ಇಂಡಿಯಾ ಸ್ಟಾರ್‌ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್‌ ಸಹ ಈ ಚಿತ್ರವನ್ನು ನೋಡಿದ್ದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Advertisement

ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಂತೋಷದಿಂದ ಬರೆದುಕೊಂಡಿರುವ ನಟ ಪ್ರಭಾಸ್‌, “ಕಾಂತಾರ’ ಚಿತ್ರ ನೋಡಿ ಬಹಳ ಎಂಜಾಯ್‌ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಇಂಥದ್ದೊಂದು ಚಿತ್ರವನ್ನು ಕಟ್ಟಿಕೊಟ್ಟ ಚಿತ್ರತಂಡಕ್ಕೆ ಶುಭವಾಗಲಿ ಮತ್ತು ಚಿತ್ರ ದೊಡ್ಡ ಯಶಸ್ಸು ಗಳಿಸಲಿ’ ಎಂದು ಹಾರೈಸಿದ್ದಾರೆ.

“ಕೆಜಿಎಫ್’, “ಯುವರತ್ನ’ ಮುಂತಾದ ಹಿಟ್‌ ಚಿತ್ರಗಳನ್ನು ನಿರ್ಮಿಸಿರುವ ವಿಜಯ್‌ ಕುಮಾರ್‌ ಕಿರಗಂದೂರು, “ಕಾಂತಾರ’ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್‌ ನಡಿ ನಿರ್ಮಿಸಿದ್ದು, ಅದರ ಜೊತೆಗೆ ಪ್ರಭಾಸ್‌ ಅಭಿನಯದ “ಸಲಾರ್‌’ ಎಂಬ ಪ್ಯಾನ್‌ ಇಂಡಿಯಾ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಪ್ರಭಾಸ್‌ ಅಲ್ಲದೆ ರಮ್ಯಾ, ರಕ್ಷಿತ್‌ ಶೆಟ್ಟಿ, ಅಮೂಲ್ಯ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕರಾವಳಿ ಭಾಗದ ವಿಶಿಷ್ಟ ಆಚರಣೆಗಳನ್ನು ಕಟ್ಟಿಕೊಟ್ಟಿರುವ ರೀತಿಯ ಜೊತೆಗೆ, ಕ್ಲೈಮ್ಯಾಕ್ಸ್ ರೂಪಿಸಿರುವ ರೀತಿ ಮತ್ತು ಅದರಲ್ಲಿ ರಿಷಭ್‌ ಶೆಟ್ಟಿ ನಟಿಸಿರುವ ರೀತಿಯ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

“ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಭ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್‌, ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ ಮತ್ತು ಅರವಿಂದ್‌ ಕಶ್ಯಪ್‌ ಛಾಯಾಗ್ರಹಣವಿದೆ

Advertisement

Udayavani is now on Telegram. Click here to join our channel and stay updated with the latest news.

Next