ಹೈದರಾಬಾದ್: ಸ್ಟಾರ್ ನಟ ಪ್ರಭಾಸ್ ಅವರು ನಟಿಸಿರುವ “ಆದಿಪುರುಷ್” ಚಿತ್ರ ಶುಕ್ರವಾರ ಬಿಡುಗಡೆಯಾಗಿದ್ದು, ವಿವಿಧ ರೀತಿಯಲ್ಲಿ ಸುದ್ದಿಯಾಗುತ್ತಿದೆ. ಚಿತ್ರದ ಕುರಿತಾಗಿ ಚಿತ್ರ ಮಂದಿರದ ಎದುರು ಋಣಾತ್ಮಕವಾಗಿ ಪ್ರೇಕ್ಷಕನೊಬ್ಬ ಮಾಡಿದ ಟೀಕೆಗಳಿಂದ ಕೆರಳಿದ ಅಭಿಮಾನಿಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಓಂ ರಾವುತ್ ಅವರ ನಿರ್ದೇಶನ ಮತ್ತು ರಾಘವ ಪಾತ್ರದಲ್ಲಿ ಪ್ರಭಾಸ್ ಅವರ ಅಭಿನಯದಲ್ಲಿನ ನ್ಯೂನತೆಗಳನ್ನು ಹೇಳಿದ ನಂತರ ಯುವಕನನ್ನು ಅಭಿಮಾನಿಗಳ ಗುಂಪು ಥಳಿಸುತ್ತಿರುವುದನ್ನು ಕಾಣಬಹುದಾಗಿದೆ.
ರಾಮನ ಅವರತಾರ ಪ್ರಭಾಸ್ ಅವರಿಗೆ ಸೂಟ್ ಆಗಲಿಲ್ಲ. ರಾಜನಂತಿದ್ದ ಅವರ ‘ಬಾಹುಬಲಿ’ ಸಿನಿಮಾದಲ್ಲಿ ರಾಯಲ್ಟಿ ಇತ್ತು. ಅವರ ಅಭಿನಯವನ್ನು ನೋಡಿಯೇ ಅವರನ್ನು ರಾಮನ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಭಾಸ್ ಅವರನ್ನು ಸರಿಯಾಗಿ ತೋರಿಸಲು ಓಂ ರಾವುತ್ ವಿಫಲರಾಗಿದ್ದಾರೆ,ಹನುಮಾನ್ ಮತ್ತು ಹಿನ್ನೆಲೆ ಸಂಗೀತವನ್ನು ಒಳಗೊಂಡ ಕೆಲವು ದೃಶ್ಯಗಳನ್ನು ಹೊರತುಪಡಿಸಿ ಚಿತ್ರ ನಮಗೆ ಹೆಚ್ಚು ಇಷ್ಟವಾಗಲಿಲ್ಲ ಎಂದು ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮಗಳ ಎದುರು ಯುವಕ ಹೇಳಿಕೊಂಡಿದ್ದಾನೆ. ಈ ಕಾಮೆಂಟ್‌ಗಳು ಅವರ ಮತ್ತು ತೆಲುಗು ಸ್ಟಾರ್‌ನ ಇತರ ಅಭಿಮಾನಿಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಇದು ವಾಗ್ವಾದಕ್ಕೆ ತಿರುಗಿ ಹಿಗ್ಗಾ ಮುಗ್ಗಾ ಹಲ್ಲೆ ಮಾಡಲು ಕಾರಣವಾಯಿತು.
ಪ್ರತ್ಯೇಕ ಘಟನೆಯಲ್ಲಿ, ಥಿಯೇಟರ್‌ನಲ್ಲಿ ಹನುಮಂತನಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತಿದ್ದಕ್ಕಾಗಿ ಪ್ರೇಕ್ಷಕರೊಬ್ಬರನ್ನು ಥಳಿಸಲಾಗಿದೆ. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ಸೈಫ್ ಅಲಿ ಖಾನ್ ನಟಿಸಿರುವ “ಆದಿಪುರುಷ್” ಪೌರಾಣಿಕ ಮಹಾಕಾವ್ಯ “ರಾಮಾಯಣ” ದ ಕಥಾ ಹಂದರವಾಗಿದೆ.
ಟಿ-ಸೀರೀಸ್ ನಿರ್ಮಿಸಿದ ಬಹುಭಾಷಾ ಚಿತ್ರವು ದೇಶದಾದ್ಯಂತ ಹಿಂದಿ, ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್‌ಗಳ ಹೊರಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿರುವುದು ಕಂಡು ಬಂದಿದೆ.