Advertisement

ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪ್ರಭಾಕರ ಚಿಣಿ

07:16 PM Feb 13, 2023 | Team Udayavani |

ಕುಷ್ಟಗಿ: ಕುಷ್ಟಗಿ ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರಿಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಕ್ಕಾ ಹಿನ್ನೆಲೆಯಲ್ಲಿ ನಿವೃತ್ತ ಪ್ರಧಾನ ಇಂಜಿನಿಯರ್ ಪ್ರಭಾಕರ್ ಚಿಣಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಯನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಸಲ್ಲಿಸಿದ್ದಾರೆ.

Advertisement

ಸರ್ಕಾರದ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕೆ.ಬಿ.ಜೆ.ಎನ್.ಎಲ್. ಪ್ರಧಾನ ಇಂಜಿನಿಯರ್ ಆಗಿ ಸೇವಾ ನಿವೃತ್ತಿಯಾಗಿದ್ದರು. 34 ವರ್ಷಗಳ ಸರ್ಕಾರಿ ಸೇವೆಯ ಬಳಿಕ ಕಾಂಗ್ರೆಸ್ ಸೇರಿದ್ದ ಪ್ರಭಾಕರ ಚಿಣಿ ಅವರು, ಕಳೆದ ನವೆಂಬರ್ 10ರಂದು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರು. ರಾಜ್ಯದಲ್ಲಿ ಉಪ್ಪಾರ ಸಮಾಜಕ್ಕೆ ಮೂರು ಟಿಕೆಟ್ ನೀಡುವುದಾಗಿ ಮಾಜಿ ಸಿ.ಎಂ. ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈ ಭರವಸೆಯ ಮೇರೆಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿ, ಕಾಂಗ್ರೆಸ್ ಪಕ್ಷದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಕುಷ್ಟಗಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಸತತವಾಗಿ ಗೆದ್ದಿರುವ ಉದಾಹರಣೆ ಇಲ್ಲ. ಹೀಗಾಗಿ ಪ್ರಸ್ತುತ ಹಾಲಿ ಶಾಸಕರು ಪುನಾರಾಯ್ಕೆಯಾಗುವುದು ಅನುಮಾನದ ಹಿನ್ನೆಲೆಯಲ್ಲಿ ಹೊಸ ಮುಖಕ್ಕೆ ಆದ್ಯತೆ ನೀಡಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದರು.

ಟಿಕೆಟ್ ಸಿಗುವ ಸಂಭವ ಇರಲಿಲ್ಲ:

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಪ್ರಸ್ತುತ ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿರುವ ಸುಳಿವಿನ ಮೇರೆಗೆ ಈ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರಿಂದ ಸ್ಥಳೀಯವಾಗಿ ಪಕ್ಷದಲ್ಲಿ ಬಂಡಾಯ ಎದ್ದವರಂತೆ ಬಿಂಬಿತವಾಗಿ ಪಕ್ಷದಲ್ಲಿ ಕಡೆಗಾಣಿಸುತ್ತಾ ಬರಲಾಗಿತ್ತು. ನಿಷ್ಠವಂತರಿಗೆ ಬೆಲೆ ಇಲ್ಲ ಈ ಪಕ್ಷದಲ್ಲಿ ದುಡಿದವರಿಗೆ ಸರಿಯಾದ ಕೂಲಿ ಇಲ್ಲ. ಪಕ್ಷದ ವರಿಷ್ಠರು, ಹಾಲಿ ಶಾಸಕ ಬಯ್ಯಾಪೂರ ಒಟ್ಟಿಗೆ ಇರಲು ಸೂಚಿಸಿದ್ದರಿಂದ ಟಿಕೆಟ್ ಸಂಭವ ಇರಲಿಲ್ಲ. ಅಲ್ಲಿ ನಮಗೆ ನ್ಯಾಯ ಇಲ್ಲ ಮರ್ಯಾದೆಯೂ ಇಲ್ಲ ಸ್ಥಳೀಯ ಮಟ್ಟದಲ್ಲೂ ರಾಜ್ಯ ಮಟ್ಟದಲ್ಲೂ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಈ ರಾಜೀನಾಮೆ ನೀಡಬೇಕಾಯಿತು. ಇನ್ನೂ ಕೆಲವೇ ದಿನಗಳಲ್ಲಿ ನನ್ನ ಮುಂದಿನ ನಡೆ ಏನೆಂಬುದನ್ನು ತಿಳಿಸುವುದಾಗಿ ಪ್ರಭಾಕರ ಚಿಣಿ ಉದಯವಾಣಿ ವೆಬ್ ಪ್ರತಿನಿಧಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next