ವಿಧಾನ ಪರಿಷತ್: ಸರ್ಕಾರಿ ಸ್ವಾಧೀನದ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಕುರಿತು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಪಾಂಡವಪುರ ಹಾಗೂ ಶ್ರೀರಾಮ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ಒಡೆತನಕ್ಕೆ ನೀಡುವುದಕ್ಕೆ ವಿರೋಧವಿಲ್ಲ.
ಆದರೆ, ಮಂಡ್ಯದ ಮೈಶುಗರ್ ಕಾರ್ಖಾನೆ ಖಾಸಗಿ ಒಡೆತನಕ್ಕೆ ನೀಡುವುದಕ್ಕೆ ರೈತರ ವಿರೋಧವಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಮೈಶುಗರ್ ಕಾರ್ಖಾನೆ ಅಭಿವೃದ್ಧಿಗೆ ಈಗಾಗಲೇ 410 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇದಾದ ನಂತರ ವರ್ಷಕ್ಕೆ 50, 100 ಕೋಟಿ ಅನುದಾನ ನೀಡಲಾಗಿತ್ತು. ಆದರೆ, ಯಾವುದೇ ಅಭಿವೃದ್ಧಿ ಕಂಡಿಲ್ಲ.
ಹೀಗಾಗಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಮೈ ಶುಗರ್ ಕಾರ್ಖಾನೆ ಅಭಿವೃದ್ಧಿಗೆ ಸಚಿವ ಸಂಪುಟದಿಂದ ಒಪ್ಪಿಗೆ ಸಿಕ್ಕಿದೆ. ಜೂನ್‌ನಲ್ಲಿ ಸಿದ್ಧವಾಗಲಿದ್ದು, ರೈತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ನೋಡಿಕೊಳ್ಳಲಿದ್ದೇವೆಂದರು. ಈಗಾಗಲೇ 176 ಮಂದಿ ವಿಎಸ್‌ಆರ್ ಪಡೆದಿದ್ದಾರೆ. ಸಿಬ್ಬಂದಿ ಇಲ್ಲದೇ ಕಾರ್ಖಾನೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ರೈತರ ಹಿತ ಕಾಪಾಡಲು, ಖಾಸಗಿ ಸಹಭಾಗಿತ್ವದಲ್ಲಿ ಅಭಿ ವೃದ್ಧಿಪಡಿಸಿ, ಜೂನ್ ಒಳಗಾಗಿ ಕಬ್ಬು ಅರೆಯಲು ಆರಂಭವಾಗಲಿದೆ ಎಂದು ವಿವರ ನೀಡಿದರು.
ಕೃಷಿಗೆ ಮಹತ್ವ ನೀಡಬೇಕು: ರಾಜ್ಯದಲ್ಲಿ ಕೃಷಿಗೆ ಹೆಚ್ಚಿನ ಮಹತ್ವ ನೀಡಿ. ರೈತರಿಗೆ ಮಣ್ಣಿನ ಫಲವತ್ತತೆ ತಿಳಿಸುವ ಕಿಸಾನ್ ಕಾರ್ಡ್ ಇನ್ನೂ ಸಿಕ್ಕಿಲ್ಲ. ಕೃಷಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಿ 20 ಕ್ವಿಂಟಲ್ ಖರೀದಿಗೆ ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸದಸ್ಯ ಬಸವರಾಜ್ ಇಟಗಿ ಮನವಿ ಮಾಡಿದರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉತ್ತರಿಸಿ, ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಲ್ಲದೆ, ಪತ್ರ ಬರೆದಿದ್ದೇವೆ. ಕೇಂದ್ರದಿಂದ ಉತ್ತರ ಬಂದ ನಂತರ ಈ ಸಂಬಂಧ ನಿರ್ಧಾರ ಮಾಡಲಿದ್ದೇವೆಂದರು.
ದ್ವೇಷ ರಾಜಕಾರಣ ಸರಿಯಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ, ಅದನ್ನೇ ಮುಂದುವರಿಸುತ್ತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ವಿಪಕ್ಷ ಒಳಗೊಂಡ ನಿಯೋಗವೊಂದನ್ನು ಕೇಂದ್ರಕ್ಕೆ ಕರೆದುಕೊಂಡು ಹೋಗಿ, ಈ ಅನ್ಯಾಯ ಸರಿಪಡಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು ಎಂದು ಜೆಡಿಎಸ್ ಸದಸ್ಯ ಟಿ.ಎ.ಶರವಣ ಆಗ್ರಹಿಸಿದರು.
ಸತ್ಯ ಶೋಧನಾ ಸಮಿತಿ ರಚಿಸಿ: ರಾಜ್ಯದಲ್ಲಿ 28 ಸಚಿವರಿದ್ದಾರೆ. ಆದರೆ, ಬೆಂಗಳೂರು ನಗರದ ಉಸ್ತುವಾರಿಗೆ ಸಚಿವರಿಲ್ಲ. 14 ಜಿಲ್ಲೆಗಳಿಗೆ ಸಚಿವ ಪ್ರಾತಿನಿಧ್ಯ ನೀಡಿಲ್ಲ. ನೆರೆ ಪರಿಹಾರ ಅನುದಾನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಇದಕ್ಕಾಗಿ ಸತ್ಯ ಶೋಧನಾ ಸಮಿತಿ ರಚನೆ ಮಾಡಬೇಕು ಅಥವಾ ಸದನ ಉಪಸಮಿತಿ ರಚನೆ ಮಾಡಬೇಕು. ಅಲ್ಲದೆ, ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಯೂ ಆಗಿಲ್ಲ ಎಂದು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಆಗ್ರಹಿಸಿದರು.