ಉಡುಪಿ: ಮಹಿಳಾ ಉದ್ಯಮಿಗಳ ಅಭಿವೃದ್ಧಿ ವೇದಿಕೆ (ಪವರ್) ವತಿಯಿಂದ ಮಹಿಳಾ ಉದ್ದಿಮೆದಾರರ ಸಮಾವೇಶವು ರವಿವಾರ ಉಡುಪಿ ಕಡಿಯಾಳಿಯ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಬೆಂಗಳೂರಿನ ಫುಡ್ ಅಸೋಸಿಯೇಟ್ಸ್ ಸ್ಥಾಪಕಿ ಡಾ| ಮಧುರಾ ಛತ್ರಪತಿ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮಹಿಳಾ ಉದ್ಯಮಿಗಳು ಹೆಚ್ಚಬೇಕು. ಯೋಚನೆ, ಯೋಜನೆಗಳ ಮೂಲಕ ಉದ್ದಿಮೆ ಸ್ಥಾಪಿಸಬೇಕಿದೆ. ಜಿಡಿಪಿಯಲ್ಲಿ ಮಹಿಳಾ ಉದ್ಯಮಿಗಳ ಪಾತ್ರವೂ ಇದೆ. ಉದ್ಯಮಶೀಲತೆಗೆ ಒತ್ತು ಕೊಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಎಸ್‌ಐಡಿಬಿಐನ ಜನರಲ್ ಮ್ಯಾನೇಜರ್ ಎ.ಸಿ. ಸಾಹು ಅವರು ಮಾತನಾಡಿ, ಸಮಾಜದಲ್ಲಿ ಅಸಾಧ್ಯ ಎನ್ನುವುದು ಇಲ್ಲ. ಮಹಿಳೆಯರಿಗೂ ಅವಕಾಶಗಳು ಬೇಕಾದಷ್ಟಿವೆ. ಸರಕಾರವು ವಿವಿಧ ಯೋಜನೆಗಳನ್ನು ಮಹಿಳಾ ಉದ್ದಿಮೆದಾರರಿಗಾಗಿ ಜಾರಿಗೆ ತಂದಿದೆ. ಸಬ್ಸಿಡಿ, ಕಡಿಮೆ ಬಡ್ಡಿದರಲ್ಲಿ ಸಾಲ ಕೂಡ ಇದೆ. ಪಾಲ್ಗೊಳ್ಳುವಿಕೆಯ ಮೂಲಕ ಅವುಗಳನ್ನು ಉಪಯೋಗಿಸಿಕೊಳ್ಳಬೇಕು. ಜಗತ್ತಿನ ಜನಸಂಖ್ಯೆಯ ಅನುಪಾತ ಗಮನಿಸಿದರೆ ಶೇ. 50 ಮಹಿಳೆಯರಿದ್ದಾರೆ. ಆದರೆ ಮಹಿಳಾ ಉದ್ದಿಮೆದಾರರು ವಿರಳ. ಮಹಿಳೆಯರು ಹೆಚ್ಚೆಚ್ಚು ಮಂದಿ ಉದ್ಯಮದಲ್ಲಿ ತೊಡಗಿಸಿಕೊಂಡು ಜಿಡಿಪಿ ಪ್ರಮಾಣ ಏರಿಕೆಯಲ್ಲಿ ಪಾತ್ರ ವಹಿಸಬೇಕಿದೆ. ಆಫ್ರಿಕಾದಲ್ಲಿ ಉದ್ಯೋಗವನ್ನು ಅರಸುವುದಲ್ಲ. ಉದ್ಯೋಗ ಸೃಷ್ಟಿಗೆ ಒತ್ತು ಕೊಡುತ್ತಾರೆ ಎಂದರು.
ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್, ನಿಟ್ಟೆಯ ಜ| ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಶನ್ ಆಫ್ ಮ್ಯಾನೇಜ್‌ಮೆಂಟ್‌ನ
ಕಾರ್ಪೊರೇಟ್ ಡೀನ್ ಡಾ| ಎ.ಪಿ. ಆಚಾರ್ ಮುಖ್ಯ ಅತಿಥಿಗಳಾಗಿದ್ದರು.
ಪ್ರಶಸ್ತಿ ಪ್ರದಾನ: ಸಾಧಕರಿಗೆ ಬ್ಯುಸಿನೆಸ್ ಎಕ್ಸಲೆನ್ಸ್ ಅವಾರ್ಡ್ ನೀಡಲಾಯಿತು. ಪವರ್ ಉಪಾಧ್ಯಕ್ಷೆ ಡಾ| ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.
ಪವರ್ ಸಂಸ್ಥೆಯ ಅಧ್ಯಕ್ಷೆ ಸರಿತಾ ಸಂತೋಷ್, ಕಾರ್ಯದರ್ಶಿ ಶ್ರುತಿ ಶೆಣೈ, ಸಮ್ಮೇಳನದ ಕೋ-ಆರ್ಡಿನೇಟರ್ ರಿತು ಚೌಧರಿ, ಕೋಶಾಧಿಕಾರಿ ನಿವೇದಿತಾ ಶೆಟ್ಟಿ, ವಾಕಥಾನ್ ಸಂಚಾಲಕಿ ಪುಷ್ಪಾ ಜಿ. ರಾವ್, ರೇಣು ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.