Advertisement

ಬಯಲಾಟದ ಸ್ವರೂಪ-ಸಮಯ ಬದಲಾಗಲಿ

01:00 PM Feb 15, 2017 | Team Udayavani |

ದಾವಣಗೆರೆ: ಸಾವಿರಾರು ವರ್ಷಗಳ ಸುಧೀರ್ಘ‌ ಇತಿಹಾಸದ ಬಯಲಾಟ ಕಣ್ಮರೆಯಾಗುತ್ತಿದ್ದು, ಮತ್ತೆ ಆ ಕಲೆಯನ್ನು ಮುಖ್ಯವಾಹಿನಿಗೆ ತರುವಂತಾಗಬೇಕಿದೆ ಎಂದು ಹರಿಹರದ ಎಸ್‌.ಜೆ.ವಿ.ಪಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ| ಎ.ಬಿ. ರಾಮಚಂದ್ರಪ್ಪ ಆಶಯ ವ್ಯಕ್ತಪಡಿಸಿದ್ದಾರೆ. 

Advertisement

ಹವ್ಯಾಸಿ ಗ್ರಾಮೀಣ ರಂಗಭೂಮಿ, ಜಾನಪದ ಮತ್ತು ಯಕ್ಷಗಾನ ಬಯಲಾಟ ಕಲಾವಿದರ ಸಂಘ, ಯಕ್ಷಗಾನ  ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನದಲ್ಲಿ ಬಯಲಾಟ ಅಂದು-ಇಂದು… ಕುರಿತು ಉಪನ್ಯಾಸ ನೀಡಿದರು.

ಬಯಲಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ತಮ್ಮನ್ನು ತೊಡಗಿಸಿಕೊಂಡು, ಆಧುನಿಕತೆಗೆ ತಕ್ಕಂತೆ ಕಥೆ, ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಬಯಲಾಟ ಪ್ರಾಕಾರವನ್ನು ಮತ್ತೆ ಮುಖ್ಯವಾಹಿನಿಗೆ ತರಬೇಕು ಎಂದರು. ಬಯಲಾಟ, ತೊಗಲುಗೊಂಬೆ… ಮುಂತಾದ ಜನಪದ ಕಲೆಗಳು ಸಂಸ್ಕೃತ ನಾಟಕಕ್ಕೆ ಮೂಲ ಪ್ರೇರಣೆ ನೀಡಿವೆ.

ಹಾಗಾಗಿ ಈ ಕಲಾ ಪ್ರಕಾರಗಳು ಒಂದನೇ ಶತಮಾನದ ಹಿಂದೆಯೇ ಚಾಲ್ತಿಯಲ್ಲಿದ್ದವು. ದೇವಾರಾಧನೆಯಾಗಿದ್ದ ಬಯಲಾಟ ಕೊನೆಗೆ ಮನೋರಂಜನಾ ಕಲೆಯಾಗಿ ಪರಿವರ್ತನೆಗೊಂಡಿದೆ. ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಬಯಲಾಟ ಕಾಣೆಯಾಗುತ್ತಿರುವುದು ಪ್ರಮುಖ ಕಾರಣ. ಬಯಲಾಟ ಆಯೋಜಿಸುವ ಸಂಘಟಕರು, ಕಲಾಸಕ್ತರ ಕೊರತೆ ಹಾಗೂ ಬಯಲಾಟ ಆಧುನಿಕತೆಗೆ ಒಗ್ಗಿಕೊಳ್ಳದೆ ಮೂಲ ಸ್ವರೂಪವನ್ನೇ ಮುಂದುವರೆಸಿಕೊಂಡು ಬರಲಾಗಿದೆ ಎಂದು ವಿಶ್ಲೇಷಿಸಿದರು.

ಕೆಲವೇ ಕೆಲ ಪರಿಕರಗಳ ಬಳಸಿ, ದೈವದತ್ತ ಘಟನಾವಳಿಯನ್ನು ಜನರಿಗೆ ಮುಟ್ಟಿಸುವಂತಹ ಗಂಡುಕಲೆ ಬಯಲಾಟಕ್ಕೆ ಯಕ್ಷಗಾನದಂತೆ ವಿದ್ಯಾವಂತರು ಪ್ರವೇಶಿಸುತ್ತಿಲ್ಲ. ಈಗಿನ ಕಾಲಕ್ಕೆ ತಕ್ಕಂತೆ ನಿಗದಿತ ಸಮಯದಲ್ಲಿ ಕಾರ್ಯಕ್ರಮ ಕಟ್ಟಿಕೊಡಲಾಗುತ್ತಿಲ್ಲ. ಆಧುನಿಕ, ಸಮಕಾಲೀನ ವಿಷಯದ ಕಥಾವಸ್ತುಗಳ ಆಯ್ಕೆ ಮಾಡಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಈ ಕಲೆ ಸೊರಗುತ್ತಿದೆ.

Advertisement

ಬಯಲಾಟದ ಸಮಯವನ್ನು 2ರಿಂದ 3 ಗಂಟೆಗೆ ಮಿತಗೊಳಿಸುವ ಬಗ್ಗೆ ಚಿಂತನೆಯೂ ನಡೆದಿದೆ ಎಂದು ತಿಳಿಸಿದರು. ಹಿಂದಿನ ಕಾಲದಲ್ಲಿ ಸುಗ್ಗಿ, ಹಬ್ಬದ ಕಾಲ, ಮಳೆ ಬರದೇ ಇದ್ದಾಗ ಮಳೆಗಾಗಿ ಪ್ರಾರ್ಥಿಸಿ ಬಹುತೇಕ ಎಲ್ಲ ಗ್ರಾಮದಲ್ಲಿ ಬಯಲಾಟ ಆಯೋಜಿಸಲಾಗುತ್ತಿತ್ತು. ಕೆಲವಾರು ಕಡೆ ಸಾಮಾಜಿಕ ಪ್ರತಿಷ್ಟೆಗಾಗಿಯೂ ಬಯಲಾಟ ನಡೆಸಲಾಗುತ್ತಿತ್ತು. ರಾತ್ರಿಯಿಡೀ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ, ಇಂದು ಅಂತಹ ವಾತಾವರಣವೇ ಇಲ್ಲ.

ಈಗಲೂ ಅನಕ್ಷರಸ್ಥರೇ ಬಯಲಾಟ  ಪ್ರದರ್ಶಿಸುತ್ತಿದ್ದಾರೆ. ಆಧುನಿಕತೆಗೆ ಒಗ್ಗಿಕೊಳ್ಳುತ್ತಿಲ್ಲ. ಹಾಗಾಗಿಯೇ ಈಗಲೂ ಬಯಲಾಟ ತನ್ನ ಮೂಲಾವಸ್ಥೆಯಲ್ಲೇ ಇದೆ ಎಂದು ತಿಳಿಸಿದರು. ಸಿನಿಮಾ ಮತ್ತು ಟಿವಿ ಮಾಧ್ಯಮದೆಡೆಗೆ ಜನರ ಆಸಕ್ತಿ ಹೆಚ್ಚಾಗುತ್ತಿದ್ದಂತೆ ಬಯಲಾಟ ಒಳಗೊಂಡಂತೆ ಎಲ್ಲಾ ಜಾನಪದ ಕಲೆಗಳು ಕಾಣೆಯಾಗುತ್ತಿವೆ. ಬಯಲಾಟಕ್ಕೆ ದೃಶ್ಯ ಮಾಧ್ಯಮವೇ ಈ ಕ್ಷಣಕ್ಕೂ ಬಹು ದೊಡ್ಡ ಸವಾಲಾಗಿದೆ.

ಇಂತಹ ಕಾಲಘಟ್ಟದಲ್ಲಿ  ಬಯಲಾಟವನ್ನು ಉಳಿಸಿ, ಬೆಳೆಸಿ, ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ. ಅದಕ್ಕಾಗಿ ಕಲಾವಿದರನ್ನು ಉಳಿಸುವಂತಾಗಬೇಕು. ಕಲಾವಿದರ ಸಾಮಾಜಿಕ, ಆರ್ಥಿಕ ಸುಧಾರಣೆಗೆ ಸರ್ಕಾರ, ಅಕಾಡೆಮಿಗಳೊಟ್ಟಿಗೆ ಕಲಾಸಕ್ತರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವಿನೋದ ಅಜಗಣ್ಣನವರ್‌ ಮಾತನಾಡಿ, ಕಲೆ ದೇವರು ನೀಡಿರುವಂತಹ ವರ. 

ಹೃದಯ, ಮನಸ್ಸು ಅರಳಿಸುವಂತಹ ಕಲೆಗಳನ್ನು ಉಳಿಸುವುದು ಎಲ್ಲರ ಕರ್ತವ್ಯ. ಸರ್ಕಾರ ಕಲಾವಿದರಿಗೆ ಆರ್ಥಿಕ ನೆರವು, ಮಕ್ಕಳ ಶಿಕ್ಷಣ, ಉದ್ಯೋಗ ಅವಕಾಶ ಮಾಡಿಕೊಡಬೇಕು ಎಂದರು. ಸಾಹಿತಿ ಎಸ್‌.ಟಿ. ಶಾಂತಗಂಗಾಧರ್‌ ಅಧ್ಯಕ್ಷತೆ, ನೀಲಗುಂದ ಗುಡ್ಡದ ಸಂಸ್ಥಾನದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು.

ಹರಿಹರ ಕಸಾಪ ಖಜಾಂಚಿ ಕೆ.ಎನ್‌. ಹನುಮಂತಪ್ಪ, ಪಿ.ಜಿ. ಪರಮೇಶ್ವರಪ್ಪ, ಬಿ. ದಿಳೆÂಪ್ಪ, ಹಿರಿಯ ಪತ್ರಕರ್ತ ಬಸವರಾಜ್‌ ಐರಣಿ ಇತರರು ಇದ್ದರು. ವಿಠೊಬರಾವ್‌ ನಲ್ಲೋಡೆ ಪ್ರಾರ್ಥಿಸಿದರು. ಎನ್‌.ಎಸ್‌. ರಾಜು ಸ್ವಾಗತಿಸಿದರು. ಪಿ.ಕೆ. ಖಾದರ್‌ ನಿರೂಪಿಸಿದರು. ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿಯ ಬಿ. ಶಿವಣ್ಣ ಮತ್ತು ಸಂಗಡಿಗರು, ಕರಿ ಬಂಟನ ಕಾಳಗ ಬಯಲಾಟ ಪ್ರದರ್ಶಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next