ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ವಿದ್ಯುತ್ ಸಂಪರ್ಕ ಪಡೆದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಲಿಕಾನ್ ಸಿಟಿ, ಈಗ ಅತಿ ಹೆಚ್ಚು ವಿದ್ಯುತ್‌ಚಾಲಿತ ವಾಹನದ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣಕ್ಕೆ ವೇದಿಕೆ ಕಲ್ಪಿಸುವ ಮೂಲಕ ಮತ್ತೂಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ.
ಪ್ರಪಂಚದಾದ್ಯಂತ ಗಮನಸೆಳೆಯುತ್ತಿರುವ ವಿದ್ಯುತ್ ಚಾಲಿತ ವಾಹನಗಳ ಸಾರಿಗೆಗೆ ಅವಶ್ಯಕವಾದ ಚಾರ್ಜಿಂಗ್ ಸ್ಟೇಷನ್‌ಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಸ್ಥಾಪಿಸಲು ನಗರ ವೇದಿಕೆ ಕಲ್ಪಿಸುತ್ತಿದೆ. ಈ ಸಂಬಂಧ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸಮೀಕ್ಷೆ ನಡೆಸಿದ್ದು, ವಿವಿಧೆಡೆ ಒಟ್ಟಾರೆ 85 ಸ್ಥಳ ಗುರುತಿಸಿದೆ.
ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕೂಡ “ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್’ ಅಡಿ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಪ್ರತಿ 3ರಿಂದ 5 ಕಿ.ಮೀ.ಗೊಂದು ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಚಿಂತನೆ ನಡೆಸಿದ್ದು, ಈ ಸಂಬಂಧ ತನ್ನ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರವು ರಾಜ್ಯ ಇಂಧನ ಇಲಾಖೆಗೆ ಪತ್ರ ಬರೆದಿದ್ದು, ಪ್ರತಿ ಸ್ಟೇಷನ್‌ಗೆ 25 ಲಕ್ಷ ರೂ. ನೀಡುವುದಾಗಿ ಹೇಳಿದೆ. ಅಷ್ಟೇ ಅಲ್ಲ, ಯಾರು ಬೇಕಾದರೂ ಚಾರ್ಜಿಂಗ ಸ್ಟೇಷನ್ ಸ್ಥಾಪಿಸಲು ಮುಕ್ತ ಅವಕಾಶ ಕಲ್ಪಿಸಿದೆ. ಇದಕ್ಕೆ ಪ್ರತಿಕ್ರಿಯಾಗಿ ರಾಜ್ಯ ಇಂಧನ ಇಲಾಖೆ, “ಇದೊಂದು ಸ್ವಾಗತಾರ್ಹ ಬೆಳವಣಿಗೆ. ಸರ್ಕಾರ ಅನುದಾನ ನೀಡುವುದಾದರೆ, ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ತಾನು ಸಿದ್ಧ’ ಎಂದು ಪತ್ರ ಬರೆದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಕೆಲವೇ ತಿಂಗಳುಗಳಲ್ಲಿ ಈ ಸ್ಟೇಷನ್‌ಗಳು ತಲೆಯೆತ್ತಲಿವೆ.
ಸೌಕರ್ಯ ಬೆಸ್ಕಾಂ ಹೊಣೆ: ಚಾರ್ಜಿಂಗ್ ಸ್ಟೇಷನ್‌ಗಳಿಗೆ ಅಗತ್ಯವಿರುವ ಡಿಸಿ ಬಾಕ್ಸ್, ಎಸಿ ಚಾರ್ಜಿಂಗ್ ಸೇರಿ ಉಪಕರಣಗಳಿಗೆ ಮಾತ್ರ ಕೇಂದ್ರ ಅನುದಾನ ನೀಡಲಿದೆ. ಉಳಿದಂತೆ ಸ್ಟೇಷನ್‌ಗೆ ಅಗತ್ಯವಿರುವ ಭೂಮಿ, ಕೇಬಲ್ ಅಳವಡಿಕೆ, ವಾಹನಗಳ ಶೆಲ್ಟರ್, ಪಾರ್ಕಿಂಗ್ ಮತ್ತಿತರ ಮೂಲ ಸೌಕರ್ಯಗಳ ಖರ್ಚು-ವೆಚ್ಚ ಬೆಸ್ಕಾಂ ಭರಿಸಬೇಕಾಗುತ್ತದೆ. ಪ್ರತಿ ಸ್ಟೇಷನ್‌ಗೆ ಕನಿಷ್ಠ 30×40 ಅಡಿ ಜಾಗದ ಅವಶ್ಯಕತೆ ಇದೆ. ನಗರ ದಲ್ಲಿ ಭೂಮಿ ಬೆಲೆ ದುಬಾರಿಯಾಗಿದ್ದು, ಭೂಮಿ ಖರೀದಿಸಬೇಕೋ ಅಥವಾ ಗುತ್ತಿಗೆ ಪಡೆದು ಸ್ಥಾಪಿಸ ಬೇಕೋ ಎನ್ನುವುದರ ಮೇಲೆ ವೆಚ್ಚ ಅವಲಂಬನೆ ಆಗ ಲಿದೆ. ಪ್ರಸ್ತುತ 11 ಸ್ಟೇಷನ್‌ಗಳ ಸ್ಥಾಪನೆಗೆ ಕಂಪನಿ ಸಿದ್ಧತೆ ನಡೆಸಿದೆ. ಅದೇನೇ ಇರಲಿ, ವಿದ್ಯುತ್‌ಚಾಲಿತ ವಾಹನಗಳ ಬಳಕೆ ಹೆಚ್ಚಲು ಇದೊಂದು ಕ್ರಾಂತಿಕಾರಿ ಹೆಜ್ಜೆ ಆಗಲಿದೆ ಎಂದು ಬೆಸ್ಕಾಂನ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯ ಪಡುತ್ತಾರೆ.
ಈ ಎಲ್ಲ 85 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ವತಃ ಬೆಸ್ಕಾಂ ನಿರ್ಮಿಸಲಿದೆ. ಇದಕ್ಕೆ ಎನರ್ಜೀಸ್ ಎಫಿಸಿಯನ್ಸಿ ಸರ್ವಿಸಸ್ ಲಿ., ಉಪಕರಣಗಳನ್ನು ಪೂರೈಸಲಿದೆ. ಆದರೆ, ಇದು ಇನ್ನೂ ಅಂತಿಮವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯಕುಮಾರ್ ಚಂದರಗಿ