Advertisement

ಪಂಪ್‌ಸೆಟ್‌ಗಳಿಗೆ ಸೋಲಾರ್‌ ಫೀಡರ್‌ ಮೂಲಕ ವಿದ್ಯುತ್‌: ಸಚಿವ ವಿ. ಸುನೀಲ್‌ಕುಮಾರ್‌

07:48 PM Oct 27, 2022 | Team Udayavani |

ಬೆಂಗಳೂರು: ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಸುವ ಸಲುವಾಗಿ ಪ್ರಧಾನಮಂತ್ರಿ ಕುಸುಮ್‌ (ಸಿ) ಯೋಜನೆ ಅಡಿಯಲ್ಲಿ 1,500 ಕಡೆ ಸೋಲಾರ್‌ ಫೀಡರ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಇಂಧನ ಸಚಿವ ವಿ. ಸುನೀಲ್‌ಕುಮಾರ್‌ ತಿಳಿಸಿದರು.

Advertisement

ಗುರುವಾರ “ಉದಯವಾಣಿ” ಕಚೇರಿಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದ ಅವರು,  ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಮಾಡಲು ಸೋಲಾರ್‌ ಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಪ್ರಧಾನಮಂತ್ರಿ ಕುಸುಮ್‌ (ಸಿ) ಯೋಜನೆ ಅಡಿಯಲ್ಲಿ ರಾಜ್ಯದ 1,500 ಕಡೆ ಒಟ್ಟಾರೆ 1 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಸೋಲಾರ್‌ ಫೀಡರ್‌ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಈ ಯೋಜನೆಯಿಂದಾಗಿ 3.5 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈಗಿರುವ ಎಲೆಕ್ಟ್ರಿಕ್‌ ಫೀಡರ್‌ಗಳಿಗೆ ಸೋಲಾರ್‌ ಫೀಡರ್‌ ಸಂಪರ್ಕ ಕಲ್ಪಿಸಲಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರೈತರು ಯಾವುದೇ ಹಣ ಪಾವತಿಸುವ ಅವಶ್ಯಕತೆಯಿಲ್ಲ ಎಂದರು.

ಪ್ರಾರಂಭಿಕವಾಗಿ ಬೆಸ್ಕಾಂ ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿನ ಜಿಲ್ಲೆಗಳಲ್ಲಿ ಸೋಲಾರ್‌ ಫೀಡರ್‌ ಸ್ಥಾಪಿಸಲಾಗುತ್ತಿದೆ. ಈಗಾಗಲೆ ತುಮಕೂರಿನ ಕೆಲ ಹಳ್ಳಿಯಲ್ಲಿ ಫೀಡರ್‌ ಸ್ಥಾಪಿಸಿ ರೈತರ ಪಂಪ್‌ಸೆಟ್‌ಗೆ ವಿದ್ಯುತ್‌ ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಹೆಸ್ಕಾಂ ವ್ಯಾಪ್ತಿಗೆ ಯೋಜನೆ ವಿಸ್ತರಿಸಲಾಗುವುದು. ರೈತರ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್‌ ಪೂರೈಸುವುದಷ್ಟೇ ಸರ್ಕಾರದ ಉದ್ದೇಶ ಮತ್ತು ಗುರಿ ಎಂದು ಹೇಳಿದರು.

ಇಂಧನ ಇಲಾಖೆ ಜಾರಿಗೆ ತಂದಿರುವ ಅಮೃತಜ್ಯೋತಿ ಯೋಜನೆ ಅಡಿ ರಾಜ್ಯದ ಎಸ್ಸಿ/ಎಸ್ಟಿ ಕುಟುಂಬಗಳಿಗೆ ಉಚಿತವಾಗಿ 75 ಯುನಿಟ್‌ ವಿದ್ಯುತ್‌ ನೀಡಲು ನಿರ್ಧರಿಸಲಾಗಿದೆ. ಅದರಂತೆ ಆರಂಭಿಕವಾಗಿ 2 ಲಕ್ಷ ಕುಟುಂಬಗಳಿಗೆ ವಿದ್ಯುತ್‌ ನೀಡಲಾಗುವುದು. ಬಾಡಿಗೆ ಮನೆಯಲ್ಲಿ ವಾಸವಿರುವ ಎಸ್ಸಿ/ಎಸ್ಟಿ ಕುಟುಂಬಗಳೂ ಸಮರ್ಪಕ ದಾಖಲೆ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಬಹುದು. ನವೆಂಬರ್‌ನಲ್ಲಿ ಅರ್ಜಿ ಸ್ವೀಕಾರ ಸೇರಿ ಫ‌ಲಾನುಭವಿಗಳಲ್ಲಿನ ಗೊಂದಲ ನಿವಾರಣೆಗೆ ಅಭಿಯಾನ ನಡೆಸಲಾಗುವುದು. ಯೋಜನೆಯಿಂದ 25ರಿಂದ 28 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.

Advertisement

ರಾಜ್ಯದ 206 ಕಡೆ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ ಸ್ಥಾಪಿಸಲಾಗಿದೆ. 200 ಕಡೆ ಟಿಸಿ ದುರಸ್ತಿ ಕೇಂದ್ರಗಳನ್ನು ತೆರೆಯಲಾಗಿದೆ. ಅದರ ಜತೆಗೆ ಫೀಡರ್‌ ಮತ್ತು ಟಿಸಿ ನಿರ್ವಹಣಾ ಅಭಿಯಾನ ಮಾಡಲಾಗುತ್ತಿದೆ. ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್‌ ಅದಾಲತ್‌ ನಡೆಸಿ ಸ್ಥಳದಲ್ಲೇ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ. ಸರ್ಕಾರಿ ಕಟ್ಟಡಗಳಿಂದ ವಿದ್ಯುತ್‌ ಬಿಲ್‌ ಬಾಕಿ ಹೆಚ್ಚುತ್ತಿರುವ ಕಾರಣ ಪ್ರೀಪೇಡ್‌ ಮೀಟರ್‌ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಕಳೆದೊಂದು ವರ್ಷದಲ್ಲಿ ಕಿರಿಯ ಎಂಜಿನಿಯರ್‌, ಲೈನ್‌ ಮೆನ್‌ ಸೇರಿ ವಿವಿಧ ಹುದ್ದೆಗಳಿಗೆ 1,800 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದರ ಜತೆಗೆ 2,500 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಶೀಘ್ರದಲ್ಲಿ ಫ‌ಲಿತಾಂಶ ಪ್ರಕಟಿಸಲಾಗುವುದು ಎಂದರು.

ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಕ್ರಮ :

ರಾಜ್ಯದಲ್ಲಿ ವಾರ್ಷಿಕ ಸರಾಸರಿ 30 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು, 14,800 ಮೆಗಾ ವ್ಯಾಟ್‌ ಬೇಡಿಕೆಯಿದೆ. ಮುಂದಿನ 10 ವರ್ಷಗಳಲ್ಲಿ 10 ಸಾವಿರ ಮೆಗಾ ವ್ಯಾಟ್‌ ಬೇಡಿಕೆ ಜಾಸ್ತಿಯಾಗುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕ ಹಾಗೆ 21 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,500 ಕೋಟಿ ರೂ. ಮೊತ್ತದ ವಿದ್ಯುತ್‌ ಮಾರಾಟ ಮಾಡಲಾಗಿದೆ. ಅದರ ಜತೆಗೆ ತುಮಕೂರು, ಗದಗ, ಬಾಗಲಕೋಟೆ, ಚಿತ್ರದುರ್ಗ, ವಿಜಯಪುರ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಸೋಲಾರ್‌ ಮತ್ತು ವಿಂಡ್‌ ಮೂಲಕ ವಿದ್ಯುತ್‌ ಉತ್ಪಾದಿಸುವ ಹೈಬ್ರಿಡ್‌ ಪಾರ್ಕ್‌ ಸ್ಥಾಪಿಸಲಾಗುತ್ತದೆ. ಇನ್ನು ಮುಂದೆ ಕಲ್ಲಿದ್ದಲಿನಿಂದ ವಿದ್ಯುತ್‌ ಉತ್ಪಾದನೆ ಮಾಡುವ ವಿಧಾನವನ್ನು ಕಡಿಮೆ ಮಾಡಿ ಸೋಲಾರ್‌, ವಿಂಡ್‌ ಸೇರಿ ಪರಿಸರ ಸ್ನೇಹಿ ವಿದ್ಯುತ್‌ ಉತ್ಪಾದಿಸಲು ಹೆಚ್ಚಿನ ಗಮನ ಹರಿಸಲಾಗುವುದು ಎಂದು ಸಚಿವ ಸುನೀಲ್‌ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next