Advertisement

Karnataka;ಶಕ್ತಿ ಯೋಜನೆಯಿಂದ ಸಾರ್ವಜನಿಕ ಸಾರಿಗೆಗೆ ಬಲ: ಸಚಿವ ರಾಮಲಿಂಗಾ ರೆಡ್ಡಿ

09:39 PM Jun 24, 2023 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದ ಸಾರ್ವಜನಿಕ ಸಾರಿಗೆಗೆ ಬಲ ಬಂದಿದ್ದು, ಒಟ್ಟು ಪ್ರಯಾಣಿಕರ ಸಂಖ್ಯೆ ಪ್ರತಿ ದಿನ ಸರಾಸರಿ 84.15 ಲಕ್ಷವಿದ್ದು, ಇಂದು ಸರಾಸರಿ 1 ಕೋಟಿ 5 ಲಕ್ಷವಾಗಿರುವುದು ಶಕ್ತಿ ಯೋಜನೆ ಯಶಸ್ವಿಯಾಗಿದೆಯೆಂದು ಏಕ ಸದಸ್ಯ ಸಮಿತಿ ತಿಳಿಸಿತು.

Advertisement

ಶನಿವಾರ ಕೆಎಸ್‌ಆರ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಏಕ ಸದಸ್ಯ ಸಮಿತಿಯ ಅಧ್ಯಕ್ಷ ಎಂ.ಆರ್‌. ಶ್ರೀನಿವಾಸಮೂರ್ತಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರೊಡನೆ ಸಭೆ ನಡೆಸಿದರು.

ಏಕ ಸದಸ್ಯ ಸಮಿತಿಯು ಈಗಾಗಲೇ ಸಚಿವರಿಗೆ ಸಲ್ಲಿಸಿದ ವರದಿಯ ಪ್ರತಿಯನ್ನು ನೀಡಿದ ಅಧ್ಯಕ್ಷರು, ವರದಿಯ ಪ್ರಮುಖ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ, ಶಕ್ತಿ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂದುವರಿದ ದೇಶಗಳಲ್ಲಿ ಸಹ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಲು ಹಲವು ಮಹತ್ತರ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬಗೆಗಿನ ಮಾಹಿತಿಯನ್ನು ಹಂಚಿಕೊಂಡರು.

ನಂತರ ಮಾತನಾಡಿದ ಸಚಿವರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕೆ ಅನುಕೂಲವಾಗುವ ತುರ್ತು ಕ್ರಮಗಳಾದ ಹೊಸ ಬಸ್ಸುಗಳ ಸೇರ್ಪಡೆ, ಬಸ್ಸುಗಳ ಪುನಶ್ಚೇತನ ಕಾರ್ಯ, ಪರಿಣಾಮಕಾರಿ ಮಾಹಿತಿ ತಂತ್ರಜ್ಞಾನ ಬಳಕೆ, ಕಾರ್ಮಿಕ ಸ್ನೇಹಿ ಉಪಕ್ರಮಗಳು, ಸಿಬ್ಬಂದಿಗಳ ನೇಮಕ ಇತರೆ ವಿಷಯಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದರು.

ಹಾಗೆಯೇ ಸಂಪನ್ಮೂಲ ನಗದೀಕರಣದ ಬಗ್ಗೆ ಕೂಡಲೇ ಕ್ರಿಯಾ ಯೋಜನೆ ತಯಾರಿಸಿ, ನಾಲ್ಕು ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ವಾಣಿಜ್ಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಿ ಕೂಡಲೇ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಸೂಚಿಸಿದರು.

Advertisement

ಕೆಎಸ್‌ಆರ್‌ಟಿಸಿ ವ್ಯಾಪ್ತಿಯ ವಿಭಾಗ ಹಾಗೂ ಕಾರ್ಯಾಗಾರಗಳಲ್ಲಿ 460ಕ್ಕೂ ಹೆಚ್ಚು ಪುನಶ್ಚೇತನ ಬಸ್ಸುಗಳನ್ನು ನಿರ್ಮಿಸಿರುವುದಕ್ಕೆ ಪ್ರಶಂಸಿಸಿದರು. ಈ ಕಾರ್ಯವು ಎಲ್ಲಾ ಸಂಸ್ಥೆಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು. ಜತೆಗೆ ಬಸ್‌ ನಿಲ್ದಾಣಗಳಲ್ಲಿ ಸ್ವತ್ಛತೆ, ಆಸನಗಳ ವ್ಯವಸ್ಥೆ, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳ ಬಗ್ಗೆ ಗಮನಹರಿಸಲು ತಿಳಿಸಿದರು.

ಸಭೆಯಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ವಾಕರಸಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್‌. ಭರತ್‌, ಕೆಎಸ್‌ಆರ್‌ಟಿಸಿ ನಿರ್ದೇಶಕ (ಸಿಬ್ಬಂದಿ -ಜಾಗೃತ) ಪ್ರಶಾಂತ್‌ ಕುಮಾರ್‌ ಹಾಗೂ ಇಲಾಖಾ ಮುಖ್ಯಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next