ಮಹದೇವಪುರ: ರಾಜ್ಯವು 2018ರ ವೇಳೆಗೆ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಮೂಲಕ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಗಳಿಸಿಕೊಳ್ಳಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಹೂಡಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನೂತನ ಸಭಾಂಗಣ, ವಸತಿ ನಿಲಯ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ ಮತ್ತು ಸುರಕ್ಷತಾ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಪಾವಗಡದಲ್ಲಿ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದೆ.
ರೈತರ ಬರಡು ಭೂಮಿಗೂ ಬಾಡಿಗೆ ನೀಡುವ ಮೂಲಕ, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಈ ಯೋಜನೆಯಲ್ಲಿ ಅವಕಾಶವಿದೆ. ಹಾಗಾಗಿ ಪ್ರತಿ ತಾಲೂಕಿನಲ್ಲೂ ಯೋಜನೆ ಜಾರಿಗೊಳಿಸಿ ಪ್ರತಿ ಕೇಂದ್ರದಲ್ಲಿ 20 ಮೆಗಾವ್ಯಾಟ್ ಉತ್ಪಾದನೆ ಸಾಮರ್ಥ್ಯದ ಸೋಲಾರ್ ಪಾರ್ಕ್ ನಿರ್ಮಿಸಲು ನಿರ್ಧರಿಸಲಾಗಿದ್ದು ಮುಂಬರುವ ವರ್ಷಗಳಲ್ಲಿ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ನ್ನು ಸ್ಥಳೀಯವಾಗಿ ಉತ್ಪಾದಿಸಿಕೊಳ್ಳುವ ಸಾಮರ್ಥಯ ಗಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಬ್ರಿಟೀಷರ ಕಾಲದಿಂದಲೂ ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಚಾಲ್ತಿಯಲ್ಲಿದ್ದ ಲೈನ್‌ಮನ್ ಹೆಸರು ಬದಲಿಸಿ ಕಾರ್ಡ್‌ಲೆಸ್ ಪವರ್ ಮ್ಯಾನ್ ಎಂಬುದಾಗಿ ಕರೆಯಲು ಚಿಂತಿಸಲಾಗಿದೆ ಎಂದು ಹೇಳಿದರು.
ವಿದ್ಯುತ್ ಪ್ರಸರಣ ನಿಗಮದಲ್ಲಿ ಪಾರದರ್ಶಕವಾಗಿ 22,000 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಯಾವುದೇ ಅಕ್ರಮಕ್ಕೂ ಅವಕಾಶವಿಲ್ಲದೇ ಪೂರ್ಣಗೊಳಿಸಲಾಗಿದೆ. ಹೊಸದಾಗಿ ನೇಮಕಗೊಂಡಿರುವ ಎಂಜಿನಿಯರ್‌ಗಳು ಕೇವಲ ಉದ್ಯೋಗ, ವೇತನಕ್ಕಷ್ಟೇ ಕಾರ್ಯ ನಿರ್ವಹಿಸದೆ ದೇಶ ಸೇವೆ ಎಂಬ ಮನೋಭಾವದಿಂದ ತಾಳ್ಮೆಯಿಂದ ದುಡಿಯಬೇಕು ಎಂದು ಸಲಹೆ ನೀಡಿದರು.
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಮಹದೇವಪುರ ಕ್ಷೇತ್ರದ ಬಹಳಷ್ಟು ಪ್ರದೇಶಗಳಿಂದಲೇ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ಈ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಂಚಾರ ದಟ್ಟಣೆಯೂ ತೀವ್ರವಾಗಿದೆ. ಹಾಗಾಗಿ ಎಂ.ಜಿ.ರಸ್ತೆಯ ಟ್ರಿನಿಟಿ ವೃತ್ತದಿಂದ ಐಟಿಪಿಎಲ್‌ವರೆಗೆ ಎಕ್ಸ್‌ಪ್ರೆಸ್ ಹೈವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ನಾರಾಣಸ್ವಾಮಿ, ಪಾಲಿಕೆ ಸದಸ್ಯ ನಿತೀಶ್ ಪುರುಷೋತ್ತಮ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಖ್ತರ್, ನಿರ್ದೇಶಕ (ತಾಂತ್ರಿಕ) ಎಚ್.ನಾಗೇಶ್, ಬೆಸ್ಕಾಂ ನಿರ್ದೇಶಕ ಜೋಪ್ರಕಾಶ್ ಇತರರು ಉಪಸ್ಥಿತರಿದ್ದರು.