ಬೆಂಗಳೂರು: ಕಲ್ಲಿದ್ದಲು ದರ ಏರಿಕೆ ಹಿನ್ನೆಲೆಯಲ್ಲಿ ಇಂಧನ ವೆಚ್ಚ ಹೊಂದಾಣಿಕೆ (ಎಫ್ಸಿಎ) ಯಡಿ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಎಸ್ಕಾಂಗಳು ಗ್ರಾಹಕರಿಂದ ಪರಿಷ್ಕೃತ ದರದಲ್ಲಿ ಶುಲ್ಕ ಸಂಗ್ರಹಿಸಲು ಅವಕಾಶ ಕಲ್ಪಿಸಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಅ.1ರಿಂದಲೇ ಪರಿಷ್ಕೃತ ದರಗಳನ್ನು ಅನ್ವಯಿಸಿ ಆದೇಶ ಹೊರಡಿಸಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‌ಗೆ 14 ಪೈಸೆ, ಮೆಸ್ಕಾಂ ವ್ಯಾಪ್ತಿಯಲ್ಲಿ 4 ಪೈಸೆ, ಸೆಸ್ಕ್ ವ್ಯಾಪ್ತಿಯಲ್ಲಿ 5 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ 8 ಪೈಸೆ ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ 5 ಪೈಸೆ ಎಫ್ಸಿಎ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಿದೆ.
ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಳಸುವ ಕಲ್ಲಿದ್ದಲಿನ ದರ ಏರಿಕೆಗೆ ಪೂರಕವಾಗಿ ಇಂಧನ ವೆಚ್ಚ ಏರಿಕೆಯಾಗಲಿದೆ. ಅದರ ಮೇಲೆ ದರ ಅವಲಂಬಿತವಾಗಿರುತ್ತದೆ. ಹಾಗಾಗಿ ಎಸ್ಕಾಂಗಳ ವ್ಯಾಪ್ತಿಯಲ್ಲಿ ಎಫ್ಸಿಎ ದರ ಏರಿಕೆ ಪ್ರಮಾಣ ಭಿನ್ನವಾಗಿದೆ.ಕಲ್ಲಿದ್ದಲು ದರ ಏರಿಕೆ ಹಿನ್ನೆಲೆಯಲ್ಲಿ ಎಸ್ಕಾಂಗಳಿಗೂ ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತದೆ. ಕೇಂದ್ರ ದರ ನೀತಿಯಡಿ ಇಂತಹ ಸಂದರ್ಭದಲ್ಲಿ ಹೆಚ್ಚುವರಿ ಹೊರೆ ಪ್ರಮಾಣ ಹೊಂದಿಸಿಕೊಳ್ಳಲು ಇಂಧನ ವೆಚ್ಚ ಹೊಂದಾಣಿಕೆಗೆ ತಾತ್ಕಾಲಿಕವಾಗಿ ಅವಕಾಶ ನೀಡಲಾಗುತ್ತದೆ. ಕಳೆದ ತ್ತೈಮಾಸಿಕದಲ್ಲಿನ ಹೊರೆಯನ್ನು ಭರಿಸಲು ಮುಂದಿನ ತ್ತೈಮಾಸಿಕ ಅವಧಿಗೆ ದರ ಪರಿಷ್ಕರಿಸಿ ಅವಕಾಶ ನೀಡಲಾಗುತ್ತದೆ. ಅದರಂತೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಜಾರಿಯಲ್ಲಿರುವಂತೆ ದರ ಪರಿಷ್ಕರಿಸಲಾಗಿದೆ. ಈ ತ್ತೈಮಾಸಿಕ ಮುಗಿದ ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ಆದೇಶ ಹೊರಡಿಸಲಾಗುವುದು. ಆಗ ದರ ಹೆಚ್ಚಳ ಇಲ್ಲವೇ ಇಳಿಕೆಯೂ ಆಗಬಹುದು ಎಂದು ಕೆಇಆರ್‌ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಹೇಳಿದರು.
ಕಳೆದ ಮೇ ತಿಂಗಳಿನಿಂದ ಜಾರಿಗೆ ಬರುವಂತೆ ಕೆಇಆರ್‌ಸಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು 25 ಪೈಸೆಯಿಂದ 38 ಪೈಸೆವರೆಗೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ ಇಂಧನ ವೆಚ್ಚ ಹೊಂದಾಣಿಕೆಯಡಿ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ.