ಮಂಗಳೂರು: ಹಸುರು ಉಪಕ್ರಮವಾಗಿ ದೇಶದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲವನ್ನು ಸಂಯೋಜಿಸುವ ಕಾರ್ಯತಂತ್ರಗಳ ಬಗ್ಗೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳೂರಿನಲ್ಲಿ ಶುಕ್ರವಾರ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಿದರು.
ಇಂಧನ ಕ್ಷೇತ್ರದ ವಿವಿಧ ಘಟಕಗಳ ಪ್ರಮುಖರು, ವೃತ್ತಿಪರರು ಮತ್ತು ಇಂಧನ ಇಲಾಖಾ ಅಧಿಕಾರಿಗಳೊಂದಿಗೆ ಮಂಗಳೂರಿನಲ್ಲಿ ಶುಕ್ರವಾರ ಸಭೆ ನಡೆಸಿದ ಅವರು ವಿವಿಧ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ಇಂಧನ ಕ್ಷೇತ್ರವು ಸಶಕ್ತವಾಗಿ ಜಾಗತಿಕವಾಗಿ ಬೆಳೆದು ನಿಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಜಾಗತಿಕ ಇಂಧನ ಕೇಂದ್ರವಾಗಿ ಭಾರತ ದಾಪುಗಾಲಿಟ್ಟಿದೆ. ಈ ವಲಯವು ಅಭೂತಪೂರ್ವ ಬೆಳವಣಿಗೆಯನ್ನು ಕಾಣುತ್ತಿದೆ. ಹೇರಳವಾದ ಹೂಡಿಕೆ ಮತ್ತು ಉದ್ಯೋಗಾವಕಾಶ ಈ ಕ್ಷೇತ್ರದಲ್ಲಿದೆ. ಹಸುರು ಇಂಧನಕ್ಕೆ ಪರಿವರ್ತನೆ ಆಗುವ ಕಾಲಘಟ್ಟದಲ್ಲಿದ್ದೇವೆ ಎಂದವರು ತಿಳಿಸಿದರು.
ಇಂಧನ ಕ್ಷೇತ್ರದ ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಸ್ಥಳೀಯ, ಇಂಧನೇತರ ಚಿಲ್ಲರೆ ಚಟುವಟಿಕೆಗಳ ಅನುಷ್ಠಾನ ವಲಯದಲ್ಲಿ ಎದುರಾಗುವ ವಿವಿಧ ಸವಾಲುಗಳ ಬಗ್ಗೆ ಕೇಂದ್ರ ಸಚಿವರು ಚರ್ಚಿಸಿದರು.
ಭಾರತವು ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿದ್ದು, ಈ ಅಭೂತಪೂರ್ವ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮುಂದಿನ ಎರಡು ದಶಕಗಳಲ್ಲಿ ಜಾಗತಿಕ ಇಂಧನ ಬೇಡಿಕೆಯ ಕೇಂದ್ರವಾಗಿ ಭಾರತ ಹೊರಹೊಮ್ಮಲಿದೆ ಎಂದರು.