Advertisement

ಕುಂಜೂರು: ರಸ್ತೆಗೆ ಉರುಳಿ ಬಿದ್ದ ವಿದ್ಯುತ್‌ ಕಂಬಗಳು; ತಪ್ಪಿದ ಭಾರೀ ದುರಂತ

01:08 PM Apr 24, 2022 | Team Udayavani |

ಕಾಪು: ಗಾಳಿ- ಮಳೆಯಿಂದಾಗಿ ಉಚ್ಚಿಲ ಪಣಿಯೂರು ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿದ ಘಟನೆ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದೆ. ರಸ್ತೆ ಬದಿಯ ಆರು ವಿದ್ಯುತ್‌ ಕಂಬಗಳು ಉರುಳಿ ಬಿದ್ದು ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಮೆಸ್ಕಾಂಗೆ ಭಾರೀ ನಷ್ಟವುಂಟಾಗಿದೆ.

Advertisement

ಪಣಿಯೂರು ರೈಲ್ವೇ ಬ್ರಿಡ್ಜ್ ಬಳಿಯಿಂದ ಈಸ್ಟ್‌ ವೆಸ್ಟ್‌ ನರ್ಸರಿಯವರೆಗೆ ಉರುಳಿ ಬಿದ್ದ ವಿದ್ಯುತ್‌ ಕಂಬಗಳ ಜತೆಗೆ ವಯರ್‌ಗಳು ಕೂಡ ತುಂಡಾಗಿ ನೆಲಕ್ಕೆ ಬಿದ್ದಿದ್ದು, ಮಧ್ಯ ರಾತ್ರಿ ಘಟನೆ ಸಂಭವಿಸಿದ ಪರಿಣಾಮ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ವಿದ್ಯುತ್‌ ಕಂಬಗಳು ಹಗಲು ಹೊತ್ತಿನಲ್ಲಿ ಬೀಳುತ್ತಿದ್ದರೆ ಭಾರೀ ಪ್ರಮಾಣದ ನಷ್ಟ ಉಂಟಾಗುವ ಸಾಧ್ಯತೆಗಳಿದ್ದವು.

ಸ್ಥಳೀಯ ಯುವಕರ ಮೆಚ್ಚುವ ಕಾರ್ಯ

ಮಧ್ಯರಾತ್ರಿ ದೊಡ್ಡ ಸದ್ದಿನೊಂದಿಗೆ ವಿದ್ಯುತ್‌ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದು ಸ್ಥಳೀಯರಲ್ಲಿ ಭಾರೀ ಆತಂಕವುಂಟಾಗಿತ್ತು. ಕೆಲವು ಹೊತ್ತಿನ ಬಳಿಕ ಸ್ಥಳೀಯ ನಿವಾಸಿಗಳಾದ ಮಂಜುನಾಥ ಆಚಾರ್ಯ ಮತ್ತು ರತ್ನಾಕರ ಆಚಾರ್ಯ ಅವರು ಮನೆಯಿಂದ ಹೊರಗೆ ಬಂದು ನೋಡಿದಾಗ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿರುವ ದೃಶ್ಯ ಕಂಡು ಬಂದಿತ್ತು. ಈ ಬಗ್ಗೆ ಸ್ಥಳೀಯ ಉದ್ಯಮಿ ನಯೇಶ್‌ ಶೆಟ್ಟಿ ಅವರ ಮೂಲಕವಾಗಿ ಮೆಸ್ಕಾಂ ಸಿಬಂದಿಗೆ ಮಾಹಿತಿ ನೀಡಿದ್ದು, ಮೆಸ್ಕಾಂ ಸಿಬಂದಿ ಸ್ಥಳಕ್ಕೆ ಆಗಮಿಸುವವರೆಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ವಾಹನ ಸವಾರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಮೆಸ್ಕಾಂ ಸಿಬಂದಿ

Advertisement

ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ಮೆಸ್ಕಾಂನ ಅಧಿಕಾರಿಗಳು ಮತ್ತು ಸಿಬಂದಿ ಸ್ಥಳಕ್ಕೆ ಆಗಮಿಸಿ, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿ ಬಳಿಕ ಕಂಬಗಳನ್ನು ರಸ್ತೆಯಿಂದ ಬದಿಗೆ ಸರಿಸುವ ಪ್ರಯತ್ನ ಮಾಡಿದ್ದಾರೆ.

ಮುಂಜಾನೆಯವರೆಗೂ ಶಿಫ್ಟಿಂಗ್‌ ಕೆಲಸ ಮಾಡಿದ್ದು, ಬೆಳಗ್ಗೆಯಿಂದ ವಿದ್ಯುತ್‌ ಕಂಬಗಳನ್ನು ನಿಲ್ಲಿಸಿ, ಕರೆಂಟ್‌ ಪೂರೈಸುವ ಕಾಮಗಾರಿ ನಡೆಸುತ್ತಿದ್ದಾರೆ. ವಿದ್ಯುತ್‌ ಕಂಬಗಳು ಉರುಳಿ ಬಿದ್ದ ಪರಿಣಾಮ ಪಣಿಯೂರು-ಕುಂಜೂರು ಮತ್ತು ಬೆಳಪು ಪರಿಸರದಲ್ಲಿ ಶನಿವಾರ ಸಂಜೆಯವರೆಗೂ ಕರೆಂಟ್‌ ಕೈ ಕೊಟ್ಟಿದೆ.

ಕಳಪೆ ಕಾಮಗಾರಿ ಕಾರಣ?

ಉಚ್ಚಿಲ – ಪಣಿಯೂರು ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್‌ ಕಂಬಗಳನ್ನು ರಸ್ತೆಗಿಂತ ದೂರಕ್ಕೆ ಹಾಕಲಾಗಿತ್ತು, ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಕಂಬಗಳ ಬುಡದಲ್ಲೇ ಅಲ್ಲಲ್ಲಿ ಚರಂಡಿ ತೆಗೆಯಲಾಗಿತ್ತು. ನೆಲಕ್ಕಿಂತ ಕನಿಷ್ಠ ಅಂತರದ ಹೊಂಡ ತೆಗೆದು ವಿದ್ಯುತ್‌ ಕಂಬಗಳನ್ನು ನೆಟ್ಟಿದ್ದು ಗಾಳಿ-ಮಳೆ ಒಟ್ಟಿಗೆ ಸುರಿದ ಪರಿಣಾಮ ವಿದ್ಯುತ್‌ ಕಂಬಗಳು ಧರಾಶಾಯಿಯಾಗಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next