Advertisement

ತ್ಯಾಜ್ಯ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ

11:51 AM Jul 17, 2017 | Team Udayavani |

ಬೆಂಗಳೂರು: ಬಿಬಿಎಂಪಿ ವತಿಯಿಂದ ನಿರ್ಮಿಸಿರುವ ಏಳು ಹೊಸ ತ್ಯಾಜ್ಯ ಸಂಸ್ಕರಣಾ ಘಟಕಗಳ ಪೈಕಿ ಎರಡರಲ್ಲಿ ಗೊಬ್ಬರದ ಬದಲು ವಿದ್ಯುತ್‌ ಉತ್ಪಾದಿಸಲು ಬಿಬಿಎಂಪಿ ಮುಂದಾಗಿದೆ. ಇದಲ್ಲದೆ, ಹೊಸ ತ್ಯಾಜ್ಯ ಸಂಸ್ಕರಣಾ ಘಟಕವೊಂದರನ್ನು ಆರಂಭಿಸಲು ನೆದರ್‌ಲ್ಯಾಂಡ್‌ ಮೂಲದ ಸಂಸ್ಥೆಯನ್ನು ಗುರುತಿಸಿದೆ.

Advertisement

ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಕೋಟ್ಯಂತರ ರೂ. ವೆಚ್ಚದಲ್ಲಿ, ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಏಳು ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಘಟಕಗಳ ನಿರ್ವಹಣೆ ಸಮರ್ಪಕವಾಗಿ ನಡೆಸದ ಹಿನ್ನೆಲೆಯಲ್ಲಿ ಘಟಕಗಳ ಸುತ್ತ ಹಲವು ಸಮಸ್ಯೆಗಳು ಸೃಷ್ಟಿಯಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಗೊಬ್ಬರದ ಬದಲು ವಿದ್ಯುತ್‌ ಉತ್ಪಾದನೆ ಮಾಡುವ ಕುರಿತಂತೆ ಹಲವು ಬಾರಿ ಟೆಂಡರ್‌ ಕರೆಯಲಾಗಿತ್ತಾದರೂ ಗುತ್ತಿಗೆದಾರರು ಭಾಗವಹಿಸದೆ ನಿರಾಸಕ್ತಿ ತೋರಿದ್ದಾರೆ. ಇದೀಗ ಎರಡು ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸಲು ಗುತ್ತಿಗೆದಾರರು ಮುಂದೆ ಬಂದಿದ್ದು, ಅದರಂತೆ ಸುಬ್ಬರಾಯನಪಾಳ್ಯ ಮತ್ತು ಮಾವಳ್ಳಿಪುರ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ವಿದ್ಯುತ್‌ ಉತ್ಪಾದನೆ ಘಟಕಗಳನ್ನಾಗಿ ಪರಿವರ್ತಿಸಲಾಗುತ್ತಿದೆ. 

ಇದರ ಜತೆಗೆ ನೆದರ್‌ಲ್ಯಾಂಡ್‌ ಮೂಲದ ಸಂಸ್ಥೆ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಹೊಸ ಘಟಕ ಸ್ಥಾಪಿಸಲು ಮುಂದೆ ಬಂದಿದ್ದು, ಆ ಕುರಿತು ಈಗಾಗಲೇ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತಾದರೂ, ಜಾಗದ ಸಮಸ್ಯೆಯಿಂದಾಗಿ ಕಾರ್ಯಗತಗೊಂಡಿರಲಿಲ್ಲ. ಇದೀಗ ಬಾಗಲೂರಿನಲ್ಲಿನ ಕಲ್ಲು ಕ್ವಾರಿ ಜಾಗದಲ್ಲಿ ಹೊಸ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸಫ್ರಾಜ್‌ ಖಾನ್‌, “ತ್ಯಾಜ್ಯದಿಂದ ಗೊಬ್ಬರ ತಯಾರಿಸುತ್ತಿರುವ 7 ಘಟಕಗಳ ಪೈಕಿ ಎರಡನ್ನು ವಿದ್ಯುತ್‌ ಉತ್ಪಾದನೆ ಘಟಕಗಳಾಗಿ ಪರಿವರ್ತಿಸಲು ಗುತ್ತಿಗೆದಾರರನ್ನು ಗುರುತಿಸಲಾಗಿದೆ. ಜತೆಗೆ ಬಾಗಲೂರಿನಲ್ಲಿ ವಿದ್ಯುತ್‌ ಉತ್ಪಾದನೆ ಘಟಕ ಸ್ಥಾಪಿಸುವ ಸಂಬಂಧ ನೆದರ್‌ಲ್ಯಾಂಡ್‌ ಮೂಲದ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ,’ ಎಂದು ತಿಳಿಸಿದ್ದಾರೆ. 

Advertisement

ಇಂದಿನಿಂದ ನಿವೃತ್ತ ಯೋಧರ ಪಹರೆ: ಬಿಬಿಎಂಪಿ ವತಿಯಿಂದ ತ್ಯಾಜ್ಯ ವಿಲೇವಾರಿಗಾಗಿ ಗುರುತಿರುವ ಮೂರು ಕ್ವಾರಿಗಳ ಬಳಿ ಸೋಮವಾರದಿಂದ ನಿವೃತ್ತ ಯೋಧರು ಪಹರೆ ನಡೆಸಲಿದ್ದಾರೆ. ಕ್ವಾರಿಗಳಿಗೆ ಅತಿಕ್ರಮ ಪ್ರವೇಶ ಹಾಗೂ ಅನಧಿಕೃತ ತ್ಯಾಜ್ಯ ವಿಲೇವಾರಿಗೆ ಕಡಿವಾಣ ಹಾಕುವ ಉದ್ದೇಶದಿಂದ 20 ನಿವೃತ್ತ ಯೋಧರನ್ನು ನೇಮಿಸಿಕೊಳ್ಳಲಾಗಿದೆ. ನೂತನವಾಗಿ ನೇಮಕಗೊಂಡಿರುವ ನಿವೃತ್ತ ಯೋಧರು ಮೂರು ಪಾಳಿಯಲ್ಲಿ ಕ್ವಾರಿ ಕಾಯುವ ಕಾರ್ಯ ನಿರ್ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next