ಹೊಸದಿಲ್ಲಿ: ದಶಕದ ಬಳಿಕ ಜಮ್ಮು- ಕಾಶ್ಮೀರ ದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಚುನಾಯಿತ ಸರ್ಕಾರ ಅಧಿ ಕಾರಕ್ಕೆ ಬರುತ್ತಿದೆ. ಆದರೆ, 370ನೇ ವಿಧಿ ರದ್ದು ಪೂರ್ವ ಮತ್ತು ನಂತರದ ಚುನಾಯಿತ ಸರ್ಕಾರ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸ ಆಗುವುದು ಸ್ಪಷ್ಟ. ಯಾಕೆಂದರೆ, ಈಗ ಕಣಿವೆ ರಾಜ್ಯ ಕೇಂದ್ರಾಡಳಿತ ಪ್ರದೇಶ. ದೆಹಲಿ ರಾಜ್ಯ ಸರ್ಕಾರಕ್ಕೆ ಇರುವಷ್ಟೇ ಅಧಿಕಾರಗಳು ಕಣಿವೆ ರಾಜ್ಯದ ಸರ್ಕಾರಕ್ಕೂ ದೊರೆಯಲಿದೆ. ಹಾಗಾಗಿ, ಸ್ವತಂತ್ರ ಚುನಾಯಿತ ಸರ್ಕಾರ ವೊಂದು ನಡೆಸಬಹುದಾದ ರೀತಿಯಲ್ಲಿ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಎಂಬುದು ಪಂಡಿತರ ಲೆಕ್ಕಾಚಾರವಾಗಿದೆ.
ದಿಲ್ಲಿ ರೀತಿಯಲ್ಲಿ ಕಣಿವೆ ರಾಜ್ಯದ ಲೆಫ್ಟಿನೆಂಟ್ ಗೌರ್ನರ್ ಬಳಿ ಆಡಳಿತಾತ್ಮಕ ಅಧಿಕಾರಗಳಿವೆ. ಹಾಗಾಗಿ, ದಿಲ್ಲಿಯಲ್ಲಾಗುವಂತೆ ಅಧಿಕಾರ ಸಂಘರ್ಷ ಮುನ್ನೆಲೆಗೆ ಬರಬಹುದು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗೌರ್ನರ್‌ರನ್ನು ನೇಮಕ ಮಾಡಿರುತ್ತದೆ. ಅಲ್ಲದೇ, ಕೇಂದ್ರವು ಅಪರಿಮಿತ ಅಧಿಕಾರವನ್ನು ಗೌರ್ನರ್‌ಗೆ ವಹಿಸಿದೆ.
ಆಡಳಿತ ನಡೆಸುವಾಗ ಅಧಿಕಾರ ವಿಭ ಜನೆಯು ಹೆಚ್ಚಿನ ಸಂಘರ್ಷಕ್ಕೆ ಎಡೆ ಮಾಡಿ ಕೊಡಬಹುದು. ಈಗಾಗಲೇ ನಾವು ದೆಹಲಿಯಲ್ಲಿ ಇದನ್ನು ಕಂಡಿದ್ದೇವೆ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಾಗ ಉಂಟಾಗುವ ಸಂಘರ್ಷವು ಕಾನೂನು ಹೋರಾಟಕ್ಕೂ ಎಡೆ ಮಾಡಿಕೊಡಬಹುದು. ಎಲ್ಲ ನಿರೀಕ್ಷೆಗಳನ್ನು ಮೀರಿ ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರವು ಲೆಫ್ಟಿನೆಂಟ್ ಗೌರ್ನರ್ ಜತೆ ಹೊಂದಾಣಿಕೆ ಮಾಡಿಕೊಂಡು ಸುಸೂತ್ರವಾಗಿ ಆಡಳಿತ ನಡೆಸಬಹುದು. ಈ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದರೆ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಈ ಸಾಧ್ಯತೆಯನ್ನು ನಿರೀಕ್ಷಿಸುವುದು ತುಸು ಕಷ್ಟವೇ ಸರಿ. ಹಾಗಾಗಿ, ದಿಲ್ಲಿಯಂತೆ ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಗೌರ್ನರ್ ನಡುವೆ ಅಧಿಕಾರ ಸಂಘರ್ಷವನ್ನು ನೋಡುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ರಾಜಕೀಯ ತಜ್ಞರು.