ಹೊಸದಿಲ್ಲಿ: ʼಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮುನ್ನ ನಾನು ಸಾಯುವುದಿಲ್ಲʼ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ (ಸೆ.30) ಟೀಕಿಸಿದ್ದು, ʼಇದು ಕಹಿ ದ್ವೇಷದ ಪ್ರದರ್ಶನʼ ಎಂದು ಬಣ್ಣಿಸಿದ್ದಾರೆ.
ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅಸ್ವಸ್ಥಗೊಂಡಿದ್ದ ಖರ್ಗೆ ಅವರು ಬಳಿಕ ಈ ಹೇಳಿಕೆ ನೀಡಿದ್ದರು.
ಖರ್ಗೆಯವರ ಹೇಳಿಕೆಗಳು ಕಾಂಗ್ರೆಸ್ ಮತ್ತು ಅದರ ನಾಯಕರು ಪ್ರಧಾನಿಯ ಬಗ್ಗೆ ಹೊಂದಿರುವ “ದ್ವೇಷ ಮತ್ತು ಭಯ” ವನ್ನು ಪ್ರತಿಬಿಂಬಿಸುತ್ತವೆ ಎಂದು ಶಾ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥರು ಅನಗತ್ಯವಾಗಿ ಪ್ರಧಾನಿ ಮೋದಿಯನ್ನು ತಮ್ಮ ವೈಯಕ್ತಿಕ ಆರೋಗ್ಯ ವಿಷಯಗಳಿಗೆ ಎಳೆದುಕೊಂಡು, ದ್ವೇಷ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಜಮ್ಮು ಕಾಶ್ಮೀರದ ಕತುವಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥರಾಗಿ ಕುಸಿದಿದ್ದರು. ಇದಾದ ಬಳಿಕ ಖರ್ಗೆ ಅವರು ʼನಾನು ಇಷ್ಟು ಬೇಗ ಸಾಯುವುದಿಲ್ಲ, ಕನಿಷ್ಠ ಮೋದಿಯವರನ್ನು ಸೋಲಿಸದೆ ಸಾಯುವುದಿಲ್ಲʼ ಎಂದಿದ್ದರು.
ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಇಂದು ಟ್ವೀಟ್ ಮೂಲಕ ಅಮಿತ್ ಶಾ ಟೀಕೆ ಮಾಡಿದ್ದಾರೆ. ಅಲ್ಲದೆ, “ಈ ಕಾಂಗ್ರೆಸ್ಸಿಗರಿಗೆ ಪ್ರಧಾನಿ ಮೋದಿಯವರ ಬಗ್ಗೆ ಎಷ್ಟು ದ್ವೇಷ ಮತ್ತು ಭಯವಿದೆ. ಅವರು ನಿರಂತರವಾಗಿ ಮೋದಿಯವರ ಬಗ್ಗೆ ಯೋಚಿಸುತ್ತಿದ್ದಾರೆ” ಎಂದಿದ್ದಾರೆ.
“ಖರ್ಗೆಯವರ ಆರೋಗ್ಯ ಸುಧಾರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರು ಹಲವು ವರ್ಷಗಳ ಕಾಲ ಬಾಳಲಿ ಎಂದು ನಾವೆಲ್ಲಾ ಪ್ರಾರ್ಥನೆ ಮಾಡುತ್ತೇವೆ. ಅವರು ಇನ್ನಷ್ಟು ವರ್ಷಗಳ ಕಾಲ ಬದುಕಬೇಕು, ಅವರು 2047ರ ವಿಕಾಸ ಭಾರತ ನೋಡುವಂತಾಗಲಿ” ಎಂದು ಹೇಳಿದ್ದಾರೆ.