ಬೆಂಗಳೂರು: ಅಧಿಕಾರದ ಹತೋಟಿಗಾಗಿ ದೋಸ್ತಿ ಸರ್ಕಾರದ ನಡುವೆ ಕಿತ್ತಾಟ ನಡೆಯುತ್ತಿದ್ದು ಯಾವ ಕ್ಷಣದಲ್ಲಾದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ “ಜೆಡಿಎಸ್-ಕಾಂಗ್ರೆಸ್ ಸಮಿಶ್ರ’ ಸರ್ಕಾರ ಪತನವಾಗಬಹುದು. ಹೀಗಾಗಿ ಅಧಿಕಾರ ಹಿಡಿಯಲು ಬಿಜೆಪಿಗೆ ಆಪರೇಷನ್ ಕಮಲದ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯಲ್ಲಿ ಶನಿವಾರ ನಡೆದ ಹಿರಿಯ ಬ್ಯಾಂಕ್ ಅಧಿಕಾರಿಗಳ ಸಾಮಾನ್ಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಆಂತರಿಕ ಕಚ್ಚಾಟ ಸಾಮಾನ್ಯವಾಗಿದ್ದು, ಅಪ್ಪ-ಮಕ್ಕಳು ಇಡೀ ರಾಜ್ಯವನ್ನು ತಮ್ಮ ಕುಟುಂಬದ ಹಿಡಿತದಲ್ಲಿಟ್ಟುಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಟೀಕಿಸಿದರು. ಲೋಕಸಭಾ ಚುನಾವಣೆಗೂ ಮೊದಲೇ ಕುಮಾರಸ್ವಾಮಿ ಸರ್ಕಾರ ಪತನವಾದರೂ ಆಗಬಹುದು. ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸುವ ಅಗತ್ಯ ಬಿಜೆಪಿ ಮುಖಂಡರಿಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂಬೈಗೆ ಹೋದವರೆಲ್ಲಾ ಬಿಜೆಪಿ ಸೇರ್ತಾರ?: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಕಾರ್ಯವೈಖರಿಗೆ ಬೇಸತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮಹಾರಾಷ್ಟ್ರದ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಗೆ ಹೋದವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಿ ಮಾತಕುತೆ ನಡೆಸುತ್ತಿದ್ದಾರೆ. ಹಾಗೇ ಮುಂಬೈಗೆ ಹೋದವರನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡರೊಂದಿಗೆ ಕಮಲ ಸೇರಲು ಚರ್ಚೆ ನಡೆಸಿದ್ದಾರೆ ಎಂದು ಕತೆ ಕಟ್ಟಲಾಗುತ್ತಿದೆ. ದೆಹಲಿ ಮತ್ತು ಮುಂಬೈ ಭೇಟಿ ನೀಡಿದವರೆಲ್ಲ ಬಿಜೆಪಿ ಸೇರಲು ಸಾಧ್ಯವೆ ಎಂದರು.
ಮೇಕೆದಾಟು ಯೋಜನೆ ಕಾರ್ಯಗತ: ಮೇಕೆದಾಟು ಯೋಜನೆ ಕಾರ್ಯಗತದ ಬಗ್ಗೆ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ದೆಹಲಿಯಲ್ಲಿ ಮಾತುಕತೆ ನಡೆಸಿರುವುದು ಹಾಗೂ ಇದೇ ವಿಚಾರವಾಗಿ ತಮಿಳುನಾಡು ಸರ್ಕಾರವನ್ನು ಮಾತುಕತೆಗೆ ಆಹ್ವಾನಿಸಿರುವುದು ಉತ್ತಮ ನಡೆ ಎಂದು ಪ್ರಶಂಸಿಸಿದರು. ಮೇಕೆದಾಟು ಯೋಜನೆ ಕಾರ್ಯಗತ ಸಂಬಂಧ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂಬ ಭರವಸೆ ನೀಡಿದರು.
“ಮೀನು ಹಿಡಿಯುವುದನ್ನು ಕಲಿಸಬೇಕು’: ರೈತರ ಸಾಲಮನ್ನಾ ವಿಚಾರವಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಯಾವುದೇ ಪ್ರಸ್ತಾಪವಿಲ್ಲ. ರೈತರ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಅನುಕಂಪವಿದ್ದು, ಕೃಷಿಯ ಅಭಿವೃದ್ಧಿಗಾಗಿಯೇ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ರೈತರ ಸಾಲಮನ್ನಾ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಅಲ್ಲ. ಯಾವಾಗಲೂ ಮೀನು ತಿನ್ನುವುದನ್ನು ಕಲಿಸಬಾರದು, ಅದಕ್ಕೂ ಮೊದಲು ಮೀನು ಹಿಡಿಯುವುದು ಹೇಗೆ ಎಂಬುದನ್ನು ಕಲಿಸಬೇಕು ಎಂದು ಸದಾನಂದಗೌಡ ಮಾರ್ಮಿಕವಾಗಿ ನುಡಿದರು.