ಹೊಸದಿಲ್ಲಿ : ಹ್ಯಾಂಡ್ ಗ್ರೆನೇಡ್ ವಿನ್ಯಾಸದ ಪವರ್ ಬ್ಯಾಂಕ್ ಉಪಕರಣ ಹೊಂದಿದ್ದ ಗೋ ಏರ್ ವಿಮಾನ ಪ್ರಯಾಣಿಕ, ತಾನು ಈ ‘ಹ್ಯಾಂಡ್ ಗ್ರೆನೇಡ್’ ಗಾಗಿಎಷ್ಟೊಂದು ಕಷ್ಟ-ಕಿರುಕುಳ ಎದುರಿಸಬೇಕಾದೀತು ಎಂಬದನ್ನು ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ.
ದಿಲ್ಲಿ -ಅಹ್ಮದಾಬಾದ್ ಹಾರಾಟದ ಗೋ ಏರ್ ವಿಮಾನದಲ್ಲಿ ಪ್ರಯಾಣಿಸಲಿದ್ದ ವ್ಯಕ್ತಿಯ ಬ್ಯಾಗನ್ನು ಪರೀಕ್ಷಿಸಿದ ಭದ್ರತಾ ಸಿಬಂದಿಗಳಿಗೆ ಆತನ ಬ್ಯಾಗಲ್ಲಿ ಅದೇನೋ ಹ್ಯಾಂಡ್ ಗ್ರೆನೇಡ್ ಹೋಲುವ ವಸ್ತು ಕಂಡು ಬಂತು. ಪರಿಣಾವಾಗಿ ಆತ ವಿಮಾನ ಏರುವುದನ್ನು ತಡೆಯಲಾಯಿತು.
ಕೂಲಂಕಷವಾಗಿ ಪರೀಕ್ಷಿಸಿದ ಭದ್ರತಾ ಸಿಬಂದಿಗಳಿಗೆ ತಾವು ಹ್ಯಾಂಡ್ ಗ್ರೆನೇಡ್ ಎಂದು ಭಾವಿಸಿದ್ದ ವಸ್ತು “ಪವರ್ ಬ್ಯಾಂಕ್’ ಉಪಕರಣ ಎಂದು ಗೊತ್ತಾಯಿತು.
ಆ ಬಳಿಕ ಆ ಪ್ರಯಾಣಿಕನಿಗೆ ವಿಮಾನ ಏರಲು ಭದ್ರತಾ ಸಿಬಂದಿಗಳು ಬಿಟ್ಟರು ಎಂದು ಗೋ ಏರ್ ವಕ್ತಾರ ಹೇಳಿದರು. ಈ ಘಟನೆ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು.
ಇದೇ ರೀತಿಯ ಘಟನೆ 2017ರಲ್ಲಿ ದಿಲ್ಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಸಂಭವಿಸಿತ್ತು. ಆಗ ಇಂಡಿಗೋ ದೇಶೀಯ ಕಾರ್ಗೋ ಟರ್ಮಿನಲ್‌ನಲ್ಲಿ ಹ್ಯಾಂಡ್ ಗ್ರೆನೇಡ್ ವಿನ್ಯಾಸದ ಪವರ್ ಬ್ಯಾಂಕ್ ಉಪಕರಣ ಭದ್ರತಾ ಸಿಬಂದಿಗಳಲ್ಲಿ ತಲ್ಲಣ ಮೂಡಿಸಿತ್ತು.