Advertisement

ಬಡತನವೇ ಸೇನೆಗೆ ಸೇರುವ ಛಲ ಹುಟ್ಟಿಸಿತು!

02:55 PM Feb 12, 2018 | |

ಪುತ್ತೂರು: ತೀರದ ಬಡತನ. ಈ ಕಾರಣಕ್ಕೆ ವಿದ್ಯಾರ್ಥಿಯಾಗಿದ್ದಾಗ ರಜಾ ದಿನಗಳಲ್ಲಿ ಅಡಿಕೆ ಸುಲಿಯುವುದು, ಗೊಬ್ಬರ ಹೊರಲು ಹೋದರು. ಕಾಲೇಜಿಗೆ ಹೋಗುವ ಉತ್ಸಾಹದಿಂದ 30 ಕಿ.ಮೀ. ಸೈಕಲ್‌ ತುಳಿದರು. ಇದೇ ಛಲ ಅವರನ್ನು ಗುರಿ ಮುಟ್ಟಿಸಿತು. ಭೂಸೇನೆಯ ಗುಪ್ತಚರ ದಳದ ಹೆಮ್ಮೆಯ ಯೋಧನಾದರು. ಜೀವಕ್ಕಂಜದೆ, ಶತ್ರುಗಳನ್ನೇ ಪಳಗಿಸಿ ಮಾಹಿತಿದಾರರನ್ನಾಗಿ ಮಾಡುವ ಸೇನೆಯ ಪ್ರತಿಷ್ಠಿತ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವವರು ಹಿರೇಬಂಡಾಡಿಯ ನೂಜಿ ನಿವಾಸಿ ಸುಧೀರ್‌ ಕುಮಾರ್‌ ಶೆಟ್ಟಿ.


ಸೇನಾ ಕ್ಯಾಂಪ್‌ನಲ್ಲಿ ಸಹವರ್ತಿಗಳ ಜತೆಗೆ

Advertisement

ಪರಿಶ್ರಮದ ಜೀವನ
8ನೇ ತರಗತಿಯಲ್ಲಿ ಸುಧೀರ್‌ ಅವರು ಕಲಿಯುತ್ತಿದ್ದಾಗಲೇ ಅವರ ತಂದೆ ವಿಶ್ವನಾಥ ಶೆಟ್ಟಿ ಅವರು ಅಗಲಿದ್ದರು. ಬಳಿಕ ತಾಯಿ ಉಷಾ ವಿ. ಶೆಟ್ಟಿ ಮಗನನ್ನು ಬೆಳೆಸಿದರು. ಬಡತನವಿದ್ದಾಗ ಪೆರ್ನೆಯ ಅಜ್ಜಿ ಮನೆಯಲ್ಲಿದ್ದೇ ವಿದ್ಯಾಭ್ಯಾಸ ಮುಂದುವರಿಸಿದರು. ಮಾವನವರ ಬೆಂಬಲದಿಂದಾಗಿ ಕಾಲೇಜು ಮೆಟ್ಟಿಲು ಹತ್ತುವಂತಾಯಿತು. ತನ್ನ ವಿದ್ಯಾಭ್ಯಾಸದ ಖರ್ಚು ತಾನೇ ನಿಭಾಯಿಸಲು ರಜಾ ದಿನಗಳಲ್ಲಿ ತೋಟದ ಕೆಲಸಕ್ಕೆ ಹೋದರು. ಕಾಲೇಜಿಗೆ ಹೋಗಲು ಪೆರ್ನೆಯಿಂದ
ಪುತ್ತೂರಿಗೆ ಸೈಕಲ್‌ ತುಳಿದರು. ಹೀಗೆ ಪ್ರತಿ ಹೆಜ್ಜೆಗೂ ಶ್ರಮವಹಿಸಿದ ಸುಧೀರ್‌ ಅವರು ದ್ವಿತೀಯ ಬಿಕಾಂನಲ್ಲಿದ್ದಾಗಲೇ ಸೇನೆಗೆ ಸೇರಿದರು. 

ಶಾಲಾ ದಿನಗಳಲ್ಲಿ ಎನ್‌ಸಿಸಿ ಕೆಡೆಟ್‌, ಕ್ರೀಡಾಪಟುವಾಗಿದ್ದದ್ದು ಇವರಿಗೆ ಸೇನೆಗೆ ಸೇರಲು ನೆರವು ನೀಡಿತು. ಇವರ ದೊಡ್ಡಣ್ಣ ಸುಜಿತ್‌ ಕುಮಾರ್‌ ಶೆಟ್ಟಿ , ಈಗ ಮುಂಬಯಿಯಲ್ಲಿ ಉದ್ಯಮಿಯಾಗಿದ್ದಾರೆ. ಅಕ್ಕ ಸುಚಿತ್ರಾ ಶೆಟ್ಟಿ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ. ಇವರು ರಾಜ್ಯ ಮಟ್ಟದ ವೈಟ್‌ಲಿಫ್ಟರ್‌.

ಸುಧೀರ್‌ ಪ್ರಾಥಮಿಕ ಶಿಕ್ಷಣವನ್ನು ಪೆರ್ನೆ ಮಜೀದಿಯ ಸರಕಾರಿ ಶಾಲೆಯಲ್ಲಿ, ಪೆರ್ನೆ ಶ್ರೀರಾಮಚಂದ್ರ ಕಾಲೇಜಿನಲ್ಲಿ ಪ್ರೌಢಶಿಕ್ಷಣ ವನ್ನು, ಪುತ್ತೂರು ಜೂನಿಯರ್‌ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪೂರೈಸಿದ್ದರು. ದ್ವಿತೀಯ ವರ್ಷದ ಪದವಿಯಲ್ಲಿದ್ದಾಗ ಸ್ನೇಹಿತರಾದ ಸನತ್‌ ಕುಮಾರ್‌ ಹಾಗೂ ಪ್ರಶಾಂತ್‌ ಶೆಟ್ಟಿ ಜತೆ 2011ರಲ್ಲಿ ಮಂಗಳೂರಿನಲ್ಲಿ ನಡೆದ ಸೈನಿಕರ ನೇಮಕಾತಿಯಲ್ಲಿ ಪಾಲ್ಗೊಂಡು ಸ್ನೇಹಿತರೊಂದಿಗೆ ಆಯ್ಕೆಯಾಗಿದ್ದರು.

ಗುಪ್ತಚರ ವಿಭಾಗಕ್ಕೆ
ಸೇನೆಗೆ ಸೇರಿ ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ತರಬೇತಿ ಪಡೆಯುತ್ತಿದ್ದಾಗಲೇ ಡಿಐಪಿಆರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪುಣೆ ಹಾಗೂ ಬೆಂಗಳೂರಿನಲ್ಲಿ 1 ವರ್ಷದ ತರಬೇತಿ ಮುಗಿಸಿ, 2013ರಲ್ಲಿ ಹರಿಯಾಣದಲ್ಲಿ ನಿಯುಕ್ತಿಯಾದರು. 2016ರ ಜನವರಿಯಿಂದ ಕಾಶ್ಮೀರದ ಬಾರಾಮುಲ್ಲಾದಲ್ಲಿ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಸೋಪೋರ್‌ ರೋಚಕ ಕಾರ್ಯಾಚರಣೆ ನೆನಪು
ಬಾರಾಮುಲ್ಲಾ ಪಟ್ಟನ್‌ ಜಿಲ್ಲೆಯ ಸೋಪೋರ್‌ ತಾಲೂಕಿನಲ್ಲಿ ಜನರಿಗೆ ದೇಶಭಕ್ತಿ ಕಡಿಮೆ. ಉಗ್ರರ ಒಡನಾಟವೇ ಹೆಚ್ಚು. ಹಣಕ್ಕಾಗಿಯೇ ಕೆಲಸ ಮಾಡುತ್ತಾರೆ. ಇಂತಹವರನ್ನೇ ಆಯ್ದುಕೊಂಡು ಕೆಲಸ ಮಾಡಬೇಕಾಗುತ್ತದೆ. ಆತ ಕೊಡುವ ಮಾಹಿತಿ ಎಷ್ಟು ನಿಖರ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇಂತಹ ಮಾಹಿತಿಯಿಂದಲೇ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು ಎಂದು ಘಟನೆಯನ್ನು ಮೆಲುಕು ಹಾಕುತ್ತಾರೆ ಸುಧೀರ್‌.

ಶ್ರೀನಗರದ ಹೆಚ್ಚಿನ ಪ್ರದೇಶಗಳಲ್ಲಿ ಹೆಸರು ಬದಲಿಸಿ, ವಾಹನ ನಂಬರ್‌ ಬದಲಿಸಿ ಓಡಾಟ ನಡೆಸಬೇಕು, ಮಾಹಿತಿ ಸಂಗ್ರಹಿಸಬೇಕು. ಹೊಸ ವಾಹನ ಬಂದರೆ ಸಾಕು, ಉಗ್ರರಿಗೆ ತಿಳಿದುಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಎರಡು ಮನೆಗಳಲ್ಲಿ ಮೂವರು ಉಗ್ರರನ್ನು ಪತ್ತೆ ಮಾಡಿ ಕಾರ್ಯಾಚರಣೆ ದಳಕ್ಕೆ ತಿಳಿಸಲಾಯಿತು. ಬಳಿಕ ಸ್ಥಳೀಯರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳುತ್ತಾರೆ ಸುಧೀರ್‌. 

ಹದ್ದಿನ ಕಣ್ಣಿಡುವ ಕೆಲಸ
ವಿರೋಧಿ ದೇಶ, ಪಾಳಯದವರು ನಮ್ಮ ಮಾಹಿತಿ ಸಂಗ್ರಹಿಸುವುದನ್ನು ತಡೆಯುವುದು ಹಾಗೂ ಸೈನ್ಯದ ರಕ್ಷಣಾ ಕಾರ್ಯವನ್ನು ನಡೆಸುವ ಮಹತ್ತರ ಜವಾಬ್ದಾರಿ ಗುಪ್ತಚರ ವಿಭಾಗಕ್ಕಿದೆ. ತರಬೇತಿ ಹೊರತುಪಡಿಸಿ, ಬೇರಿನ್ನಾವುದೇ ಸಮಯದಲ್ಲಿ ಇವರು ಸಮವಸ್ತ್ರ ಧರಿಸುವುದಿಲ್ಲ. ಸೇನೆ ದಾಳಿ ನಡೆಸಬೇಕಾದರೆ ಪೂರ್ವಭಾವಿಯಾಗಿ ಗುಪ್ತಚರ ವಿಭಾಗ ಹದ್ದಿನ ಕಣ್ಣಿಟ್ಟು ಮಾಹಿತಿ ಸಂಗ್ರಹಿಸಿರುತ್ತದೆ. ಸೈನಿಕರ ರಕ್ಷಣೆ, ದಾಳಿ ಯೋಜನೆ ಕುರಿತು ನೆರವು ಸಂಪೂರ್ಣ ನೀಡಬೇಕಾಗುತ್ತದೆ. ಇದರೊಂದಿಗೆ ಸ್ಥಳೀಯ ಭಾಷೆಗಳನ್ನೂ ಕಲಿತು ಗುಪ್ತಚರ ಮಾಹಿತಿ ಸಂಗ್ರಹ ಮಾಡಬೇಕಾಗುತ್ತದೆ. 

ಬಂಡಿಪೊರಾದಲ್ಲಿ  ಸೈನಿಕರ ಕಳೆದುಕೊಂಡ ವ್ಯಥೆ 
ಬಂಡಿಪೊರಾದಲ್ಲಿ ಲಷ್ಕರ್‌-ಎ- ತಯ್ಯಬಾ ಕಮಾಂಡರ್‌ ಮೊಹಮ್ಮದ್‌ ಷಾ ಪಾಕಿಸ್ಥಾನದಲ್ಲಿ ಹತ್ಯೆಯಾದ ಬಗ್ಗೆ ಸುದ್ದಿಯಾಗಿತ್ತು. ಮರುದಿನ ಈತ ಬೈಕ್‌ ರ್ಯಾಲಿ ಮಾಡಿ ಬದುಕಿದ್ದೇನೆ ಎಂದು ತೋರಿಸಿಕೊಂಡಿದ್ದ. ಆತ ಹಾಜನ್‌
ಎಂಬಲ್ಲಿ ಮನೆಯಲ್ಲಿರುವ ಮಾಹಿತಿ ತಿಳಿದಿತ್ತು. ರಾತ್ರಿ ಹೊತ್ತು ದಾಳಿಗೆ ಯೋಜನೆ ರೂಪಿಸಲಾಯಿತು. ಅಷ್ಟೊತ್ತಿಗೆ ಆತ ಪಕ್ಕದ ಮನೆಗೆ ವಾಸ ಬದಲಿಸಿದ. ಸೇನೆ ದಾಳಿ ನಡೆಸುತ್ತಲೇ ಹಿಂದಿನಿಂದ ಉಗ್ರರು ದಾಳಿ ನಡೆಸಿದರು.

ಒಂದು ಹಂತದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ಗುಪ್ತಚರ ವಿಭಾಗದಲ್ಲಿದ್ದ
ನಾವು ಜತೆಗೆ ಇದ್ದರೂ ಸ್ವಲ್ಪ ಹಿಂದೆ ಸರಿದೆವು. ಡಬ್ಬಿ ಶೀಟ್‌ನ ಹಿಂಬದಿಯಲ್ಲಿ ಅವಿತುಕೊಂಡೆವು. ಅಷ್ಟರಲ್ಲಿ ಗನ್‌ನ ಸದ್ದು ಶೀಟ್‌ ಹಿಂಬದಿಯಿಂದ ಕೇಳಿಬಂದಿತು. ಸಂಶಯವೇ ಇಲ್ಲ, ನಮ್ಮ ಹಿಂದೆಯೇ ಗುರಿ ಇಟ್ಟು ಕಾಯುತ್ತಿದ್ದಾರೆ ಉಗ್ರರು. ಅಷ್ಟರಲ್ಲಿ ಎಲ್ಲಿಂದಲೋ ನಾಯಿಯೊಂದು ಬೊಗಳುತ್ತಾ ಬಂದಿತು. ಉಗ್ರರು ಸ್ಥಳದಿಂದ ಕಾಲ್ಕಿತ್ತು, ಸಮೀಪದ ಕಾಡಿನಲ್ಲಿ ಮರೆಯಾದರು.

ಘಟನೆಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿ 16 ಮಂದಿ ಗಾಯಗೊಂಡರು. ಇಬ್ಬರು ಉಗ್ರರನ್ನು ಹೊಡೆದುರುಳಿಸಿದರೂ ಕೂದಲೆಳೆಯಷ್ಟು ಮಾಹಿತಿ ವೈಫ‌ಲ್ಯದಿಂದಾಗಿ ನಮ್ಮವರನ್ನು ಕಳೆದುಕೊಂಡೆವು
ಎಂದು ಬೇಸರಿಸುತ್ತಾರೆ ಸುಧೀರ್‌. 

ನಮ್ಮ ಮನೆಯಲ್ಲೇ ಭಗತ್‌ ಸಿಂಗ್‌ ಹುಟ್ಟಲಿ
ಭಗತ್‌ ಸಿಂಗ್‌ ಹುಟ್ಟಬೇಕು. ಆದರೆ ನಮ್ಮ ಮನೆಯಲ್ಲಿ ಅಲ್ಲ ಎಂಬ ಧೋರಣೆಯಿಂದ ನಾವು ಹೊರಬರಬೇಕಾಗಿದೆ.
ನಮ್ಮ ದೇಶವನ್ನು ನಾವೇ ಕಾಯಬೇಕು. ದೇಶಕ್ಕೆ ಮೊದಲ ಆದ್ಯತೆ. ಮಿಕ್ಕೆಲ್ಲವೂ ಮತ್ತೆ. ಜೀವನಕ್ಕೆ ಒಂದು ಗುರಿ
ತೋರಿಸುವುದರ ಜತೆಗೆ, ಹೆತ್ತವರಿಗೆ, ಊರಿಗೆ, ಕುಟುಂಬಿಕರಿಗೆ ನಮ್ಮ ಬಗ್ಗೆ ಹೆಮ್ಮೆ ಇರುತ್ತದೆ. ಸೇನೆಯ ಗುಪ್ತಚರ ವಿಭಾಗ ಪ್ರತಿಷ್ಠಿತ ಸ್ಥಾನಮಾನ ಹೊಂದಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು. ಸೇನೆಯಲ್ಲಿ ಹಲವಾರು ಹುದ್ದೆಗಳಿವೆ. ಸೇನೆಗೆ ಸೇರುವ ಬಗ್ಗೆ ಯುವಕರಿಗೆ ತಿಳಿಹೇಳಬೇಕಿದೆ.
– ಸುಧೀರ್‌ ಕುಮಾರ್‌ ಶೆಟ್ಟಿ

ಮಗ ಸೇನೆಗೆ ಸೇರಿದ ಬಗ್ಗೆ ಮೊದಲಿಗೆ ತುಂಬ ಬೇಸರವಿತ್ತು. ಈಗ ದೇಶಕ್ಕಾಗಿ ದುಡಿವ ಬಗ್ಗೆ ಹೆಮ್ಮೆ ಇದೆ. ಊರಿನವರು ಸೇನೆಯಲ್ಲಿರುವುದು ತುಂಬ ಕಡಿಮೆ. ಅಂಥದ್ದರಲ್ಲಿ ಮಗ ಸೇನೆಯಲ್ಲಿದ್ದಾನೆ ಎನ್ನುವುದು ಸಂತೋಷದ ವಿಚಾರ.
-ಉಷಾ ವಿ. ಶೆಟ್ಟಿ,
 (ಸುಧೀರ್‌ ತಾಯಿ)

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next