Advertisement
ಜನರಲ್ಲಿ ಮತ್ತೆ ಮಣ್ಣಿನ ಉತ್ಪನ್ನಗಳ ಬಳಕೆ ಬಗ್ಗೆ ಒಲವು ಹೆಚ್ಚುತ್ತಿದ್ದು, ಮಣ್ಣಿನ ಅಡುಗೆ ಸಾಮಗ್ರಿ, ಅಲಂಕಾರಕ ವಸ್ತುಗಳು, ದೇವರ ಸಣ್ಣ ಮೂರ್ತಿಗಳಿಗೆ ಬೇಡಿಕೆ ಬರತೊಡಗಿದೆ. ಇದಕ್ಕೆ ಪೂರಕವಾಗಿ ಮನೆಯಲ್ಲಿಯೇ ಇರುವ ಗೃಹಿಣಿಯರಿಂದ ಇಂತಹ ಉತ್ಪನ್ನಗಳ ತಯಾರಿಕೆಗೆ ಯೋಜಿಸಲಾಗಿದೆ.
Related Articles
Advertisement
ಮನೆ, ಮನೆಗಳಲ್ಲಿ ಕುಂಬಾರಿಕೆ ಯೋಜನೆಯ ಪ್ರಾಯೋಗಿಕ ಯತ್ನವನ್ನು ಖಾನಾಪುರ ತಾಲೂಕಿನಲ್ಲಿಯೇ ಕೈಗೊಳ್ಳಲು ಯೋಜಿಸಲಾಗಿದ್ದು, ನಂತರ ರಾಜ್ಯ ಹಾಗೂ ದೇಶದ ವಿವಿಧ ಕಡೆಗಳಲ್ಲಿ ವಿಸ್ತರಿಸಲು ಯೋಜಿಸಲಾಗಿದೆ. ಈ ಯೋಜನೆ ನಿರೀಕ್ಷಿತ ಯಶಸ್ಸಿನತ್ತ ಸಾಗಿದ್ದೆಯಾದರೆ ಮತ್ತೆ ಗ್ರಾಮೀಣ ಪ್ರದೇಶದಲ್ಲಿ ಕುಂಬಾರಿಕೆ ಹೊಸ ರೂಪ ಪಡೆದುಕೊಳ್ಳಲಿದೆ. ಜತೆಗೆ ಪಾರಂಪರಿಕವಾಗಿ ಕುಂಬಾರಿಕೆ ವೃತ್ತಿ ಮಾಡಿಕೊಂಡವರಷ್ಟೇ ಅಲ್ಲದೆ ಇತರರು ಸಹ ಕುಂಬಾರಿಕೆ ಕಾರ್ಯದಲ್ಲಿ ತೊಡಗಿಕೊಳ್ಳುವಂತಾಗಲಿದೆ.
ವಿಶೇಷವಾಗಿ ಗೃಹಲಂಕಾರ ವಸ್ತುಗಳು, ಸಣ್ಣ ಮೂರ್ತಿಗಳು ಚೀನಾದಲ್ಲಿ ತಯಾರಾದ ಹಾಗೂ ಪ್ಲಾಸ್ಟಿಕ್‌ನಿಂದ ಕೂಡಿದ್ದಾಗಿವೆ. ಇದಕ್ಕೆ ಪ್ರತಿಯಾಗಿ ಮಣ್ಣಿನ ಮೂರ್ತಿಗಳು, ವಸ್ತುಗಳ ತಯಾರಾದರೆ ಆತ್ಮನಿರ್ಭರತೆ ಪರಿಕಲ್ಪನೆಗೆ ದೊಡ್ಡ ಶಕ್ತಿ ಬಂದಂತಾಗಲಿದೆ. ಪರಿಸರಕ್ಕೂ ಪೂರಕವಾಗಲಿದೆ. ಈಗಾಗಲೇ ಕೆಲವೊಂದು ಮಹಿಳೆಯರಿಗೆ ಮಣ್ಣಿನಿಂದ ಗಣೇಶಮೂರ್ತಿಗಳ ತಯಾರಿಕೆ ತರಬೇತಿ ನೀಡಲಾಗುತ್ತಿದೆ.
500ರೂ.ಗೆ ಸಿಗುತ್ತೆ ಗ್ರಾಮೀಣ ಫ್ರಿಜ್: 1963ರಲ್ಲಿ ಖಾನಾಪುರದಲ್ಲಿ ಆರಂಭವಾದ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ವ್ಯಾಪ್ತಿಯ ಖಾದಿ ಮತ್ತು ಗ್ರಾಮೀಣಾಭಿವೃದ್ಧಿ ಆಯೋಗದ ಅಡಿಯ ಕೇಂದ್ರ ಗ್ರಾಮೀಣ ಕುಂಬಾರಿಕೆ ಸಂಸ್ಥೆ ಕುಂಬಾರಿಕೆ ಪುನರುತ್ಥಾನ ನಿಟ್ಟಿನಲ್ಲಿ ಸಂಶೋಧನೆ, ತರಬೇತಿ ಕಾರ್ಯದಲ್ಲಿ ತೊಡಗಿದೆ. ಇದುವರೆಗೆ ಸುಮಾರು 50 ಸಾವಿರಕ್ಕೂ ಅಧಿಕ ಯುವಕ-ಯುವತಿಯರಿಗೆ ತರಬೇತಿ ನೀಡಿದೆ.
ಕುಂಬಾರಿಕೆ ಅದಕ್ಕೆ ಪೂರಕವಾದ ವೃತ್ತಿಗಳ ತರಬೇತಿ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ ಮಣ್ಣಿನಿಂದ ತಯಾರಾಗುವ ಉತ್ಪನ್ನಗಳ ಹೊಸ ವಿನ್ಯಾಸ, ಆಧುನಿಕತೆಗೆ ತಕ್ಕಂತಹ ಉತ್ಪನ್ನಗಳಲ್ಲಿ ಸುಧಾರಣೆ, ಬದಲಾವಣೆಯೊಂದಿಗೆ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಿಂದ ಕುಂಬಾರಿಕೆ ತರಬೇತಿಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಇದುವರೆಗೆ ತರಬೇತಿ ಪಡೆದ ಸುಮಾರು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಶೇ.90 ಜನರು ಸ್ವಂತ ಉದ್ಯಮ, ಉದ್ಯೋಗದಲ್ಲಿ ತೊಡಗಿದ್ದಾರೆ. ಉದ್ಯಮದಲ್ಲಿ ತೊಡಗಿದವರು ಮಾಸಿಕ 30-40ಸಾವಿರ ರೂ.ಗಳ ಆದಾಯ ಪಡೆಯುತ್ತಿದ್ದಾರೆ.
ಗ್ರಾಮೀಣದಲ್ಲಿ ಕೃಷಿ ಇನ್ನಿತರೆ ಕೆಲಸಕ್ಕೆಂದು ಹೋಗುವ ಜನರು ತಮಗಾಗಿ ತಯಾರಿಸಿಕೊಂಡ ಆಹಾರ ಕೆಡದಂತೆ ಇರಿಸಲು ಕೇಂದ್ರ ಗ್ರಾಮೀಣ ಕುಂಬಾರಿಕೆ ಸಂಸ್ಥೆ ಮಣ್ಣಿನಿಂದ ಫ್ರಿಜ್ ತಯಾರಿಸಿದ್ದು, ಇದಕ್ಕೆ ಗ್ರಾಮೀಣ ಫ್ರಿಜ್ ಎಂದು ಹೆಸರಿಸಿದೆ. ಇದಕ್ಕೆ ಯಾವುದೇ ವಿದ್ಯುತ್ ಸಂಪರ್ಕದ ಅವಶ್ಯಕತೆ ಇಲ್ಲವಾಗಿದೆ. ಗೋಲ ಹಾಗೂ ಚೌಕಾಕಾರದಲ್ಲಿ ಫ್ರಿಜ್ ತಯಾರಿಸಲಾಗಿದ್ದು, ಎರಡು ಭಾಗವಾಗಿಸಿ, ಒಂದರಲ್ಲಿ ನೀರು ಹಾಕಿ ಇನ್ನೊಂದು ಭಾಗದಲ್ಲಿ ತಯಾರಿಸಿದ ಆಹಾರ ಇರಿಸಬಹುದಾಗಿದೆ.
ಗ್ರಾಮೀಣ ಫ್ರಿಜ್ ನಲ್ಲಿ ಇರಿಸುವ ಆಹಾರ 2-3 ದಿನ ಕೆಲವೊಂದು ಕಡೆ 5-6 ದಿನಗಳವರೆಗೆ ಹಾಳಾಗಿಲ್ಲದಿರುವುದು ಕಂಡು ಬಂದಿದೆ. ಈ ಫ್ರಿಜ್ ಪರಿಸರಕ್ಕೆ ಪೂರಕವಾಗಿದ್ದು, ದುಡಿಯಲು ಹೋಗುವ ಜನರು ತಾವು ತಯಾರಿಸಿದ ಆಹಾರವನ್ನು ಇದರಲ್ಲಿರಿಸಿ ಹೋದರೆ ಅದು ಹಾಳಾಗದಂತೆ ನೋಡಿಕೊಳ್ಳಲಿದೆ. 500ರೂ.ಗೆ ಇದು ದೊರೆಯಲಿದ್ದು, ಸಾರಿಗೆ ವೆಚ್ಚ ಪ್ರತ್ಯೇಕವಾಗಿರಲಿದೆ. ವಿಶೇಷವಾಗಿ ಅಡುಗೆ ಮಾಡುವ ಮಣ್ಣಿನ ಪಾತ್ರೆಗಳಿಗೆ ಒಳ್ಳೆ ಬೇಡಿಕೆ ಬರತೊಡಗಿದೆ. ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತಿದ್ದು, ಅನೇಕರು ಮಣ್ಣಿನ ಪಾತ್ರೆಗಳಲ್ಲಿಯೇ ಅಡುಗೆ ಮಾಡಲು ಮುಂದಾಗುತ್ತಿದ್ದು, ಗ್ಯಾಸ್ ಮೇಲೆ ಅಡುಗೆ ಮಾಡಿದರೂ ಮಣ್ಣಿನ ಪಾತ್ರೆಗಳು ಏನು ಹಾನಿಯಾಗದ ರೀತಿಯಲ್ಲಿ ತಯಾರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ವಿವಿಧ ಕಡೆಗಳಲ್ಲಿ ನಡೆಯುತ್ತಿವೆ.
ಕೆಲ ಸಂಶೋಧನೆಗಳ ಪ್ರಕಾರ ಅಲ್ಯುಮಿನಿಯಂ, ಸ್ಟೀಲ್ ಕುಕ್ಕರ್‌ಗಳಲ್ಲಿ ಅಡುಗೆ ಮಾಡಿದರೆ ಆಹಾರದಲ್ಲಿ ಪೌಷ್ಟಿಕಾಂಶ ಶೇ.3 ಮಾತ್ರ ಉಳಿಯುತ್ತದೆ. ಅದೇ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ ಆಹಾರದ ಪೌಷ್ಟಿಕಾಂಶ (ನ್ಯೂಟ್ರಿಶನ್ ವ್ಯಾಲ್ಯು) ಶೇ.97 ಉಳಿಯುತ್ತದೆ. ಪಿಎಚ್ ವ್ಯಾಲ್ಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ನಮ್ಮಲ್ಲಿ ತರಬೇತಿ ಪಡೆದ ಅನೇಕರು ಕುಂಬಾರಿಕೆ ಉದ್ಯಮ ಆರಂಭಿಸಿದ್ದು, ಅಡುಗೆ ಪಾತ್ರೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.
ಆಧುನಿಕ ಜೀವನ ಶೈಲಿಯಿಂದ ಗ್ರಾಮೀಣ ವೃತ್ತಿಗಳಲ್ಲಿ ಒಂದಾಗಿದ್ದ ಕುಂಬಾರಿಕೆ ಕಳೆಗುಂದಿದಂತಾಗಿತ್ತು. ಆದರೆ ಇದೀಗ ಮತ್ತೆ ಕುಂಬಾರಿಕೆ ತನ್ನ ವೈಭವದ ದಿನಗಳತ್ತ ಸಾಗುತ್ತಿದೆ ಎಂದೆನಿಸುತ್ತಿದೆ. ವಿಶೇಷವಾಗಿ ನಗರವಾಸಿಗಳು ಮಣ್ಣಿನ ಪಾತ್ರೆ, ಸಾಮಗ್ರಿಗಳ ಕಡೆ ಒಲವು ತೋರುತಿದ್ದರಿಂದ ಅದರ ಬೇಡಿಕೆ ಹೆಚ್ಚುತ್ತಿದೆ. ಕೇಂದ್ರ ಗ್ರಾಮೀಣ ಕುಂಬಾರಿಕೆ ಸಂಸ್ಥೆಯಲ್ಲಿ ಒಟ್ಟು ಆರು ತಿಂಗಳ ತರಬೇತಿ ನೀಡಲಾಗುತ್ತದೆ. ಶಿಬಿರಾರ್ಥಿಗಳಿಗೆ ಶಿಷ್ಯವೇತನ ನೀಡಿಕೆಯೊಂದಿಗೆ ತರಬೇತಿ ನೀಡಲಾಗುತ್ತದೆ. ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಅದೇ ರೀತಿ ಹವ್ಯಾಸಕ್ಕಾಗಿ ಕಲಿಯ ಬಯಸುವವರಿಗೆ ಒಂದು ತಿಂಗಳ, ಮೂರು ದಿನಗಳ ತರಬೇತಿಯೂ ದೊರೆಯಲಿದೆ. –ನಾಗೇಶ ಗೋವರ್ಧನ, ಸಹಾಯಕ ನಿರ್ದೇಶಕ, ಕೇಂದ್ರ ಗ್ರಾಮೀಣ ಕುಂಬಾರಿಕೆ ಸಂಸ್ಥೆ
- ಖಾಲಿ ಇರುವ ಸಮಯದಲ್ಲಿ ಅರೆಕಾಲಿಕ ಉದ್ಯೋಗವಾಗಿ ತೊಡಗಿಸಲು ಚಿಂತನೆ
- ಕೇಂದ್ರ ಗ್ರಾಮೀಣ ಕುಂಬಾರಿಕೆ ಸಂಸ್ಥೆ ಸಹಾಯಕ ನಿರ್ದೇಶಕ ನಾಗೇಶ ಪ್ರಯತ್ನ