Advertisement

ಬಿ.ಸಿ.ರೋಡ್‌ ಸರ್ವೀಸ್‌ ರಸ್ತೆಯಲ್ಲಿ ಹೊಂಡ

12:35 PM Aug 19, 2022 | Team Udayavani |

ಬಂಟ್ವಾಳ: ಬಂಟ್ವಾಳ, ಪಾಣೆಮಂಗಳೂರು ಭಾಗದಿಂದ ಆಗಮಿಸಿ ಬಿ.ಸಿ.ರೋಡ್‌ ನಗರಕ್ಕೆ ಸಂಪರ್ಕಿಸುವ ವೇಳೆ ಫ್ಲೈ ಓವರ್‌ನ ಸರ್ವೀಸ್‌ ರಸ್ತೆಯ ಪ್ರಾರಂಭದಲ್ಲೇ ಅಪಾಯಕಾರಿ ಹೊಂಡವೊಂದು ಕಾಣಿಸಿಕೊಂಡು ತಿಂಗಳುಗಳೇ ಕಳೆದರೂ ಇನ್ನೂ ಕೂಡ ದುರಸ್ತಿಗೆ ಕಾಲ ಕೂಡಿ ಬಂದಿಲ್ಲ. ಪ್ರಸ್ತುತ ಹೊಂಡಕ್ಕೆ ಜಲ್ಲಿ ಹಾಕಿ ಮುಚ್ಚಿದ್ದರೂ, ಮಳೆ ಬಂದರೆ ಮತ್ತೆ ಹೊಂಡ ಹಿಂದಿನ ಸ್ಥಿತಿಗೆ ಮರಳುತ್ತದೆ.

Advertisement

ಬಿ.ಸಿ.ರೋಡ್‌ನ‌ ನಾರಾಯಣ ಗುರು ವೃತ್ತ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಈ ಹೊಂಡದ ದರ್ಶನವಾಗುತ್ತಿದ್ದು, ಪ್ರಾರಂಭದಲ್ಲಿ ಹೆದ್ದಾರಿ ಬದಿಯಲ್ಲಿ ಸಣ್ಣದಾಗಿದ್ದ ಹೊಂಡ ಪ್ರಸ್ತುತ ಹೆದ್ದಾರಿಯ ಬಹುತೇಕ ಅರ್ಧಕ್ಕೆ ಬಂದು ನಿಂತಿದೆ. ಅದನ್ನು ತೇಪೆ ಹಾಕಿ ದುರಸ್ತಿ ಪಡಿಸದೇ ಇದ್ದರೆ ಬಹುತೇಕ ಹೆದ್ದಾರಿಯನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಫ್ಲೈ ಓವರ್‌ನಲ್ಲಿ ನೇರವಾಗಿ ಹೋಗುವ ವಾಹನಗಳು ಹಾಗೂ ಸರ್ವೀಸ್‌ ರಸ್ತೆಗೆ ಇಳಿಯುವ ವಾಹನಗಳು ಇದೇ ಹೊಂಡ ಇರುವ ಸ್ಥಳದಲ್ಲೇ ಕವಲೊಡೆಯುತ್ತಿದ್ದು, ವೃತ್ತವನ್ನು ದಾಟಿ ಬರುವ ವಾಹನಗಳು ಸರ್ವೀಸ್‌ ರಸ್ತೆಗೆ ಹೋಗುವುದಾದರೆ ತೀರಾ ಎಡಕ್ಕೆ ಬಂದು ಸರ್ವೀಸ್‌ ರಸ್ತೆಗೆ ಇಳಿಯುತ್ತಿದ್ದವು.

ಫ್ಲೈ ಓವರ್‌ನಲ್ಲಿ ಸಾಗುವ ವಾಹನಗಳು ಬಲಕ್ಕೆ ಚಲಿಸಿ ನೇರವಾಗಿ ಸಾಗುತ್ತಿದ್ದವು. ಆದರೆ ಪ್ರಸ್ತುತ ಹೆದ್ದಾರಿಯಲ್ಲಿ ಹೊಂಡ ಇದೆ ಎಂಬ ಕಾರಣಕ್ಕೆ ಸರ್ವೀಸ್‌ ರಸ್ತೆಗೆ ಸಾಗುವ ವಾಹನಗಳು ಕೂಡ ಬಲ ಭಾಗದಲ್ಲೇ ಆಗಮಿಸಿ ಹೊಂಡ ಕಳೆದ ಬಳಿಕ ಮತ್ತೆ ಎಡಕ್ಕೆ ತೆಗೆದುಕೊಳ್ಳುತ್ತವೆ. ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಾಗುವುದರಿಂದ ವಾಹನ ಚಾಲಕರು ಗೊಂದಲಕ್ಕೆ ಒಳಗಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಸಾಮಾನ್ಯವಾಗಿ ನಿತ್ಯ ಆಗಮಿಸುವ ಚಾಲಕರಿಗೆ ಹೊಂಡ ಇರುವುದು ತಿಳಿದಿರುವುದಿಂದ ವೃತ್ತ ದಾಟಿ ಬರುತ್ತಿದ್ದಂತೆ ನಿಧಾನಕ್ಕೆ ಬರುತ್ತಾರೆ. ಆದರೆ ಹೆದ್ದಾರಿಯಲ್ಲಿ ನಿತ್ಯ ದೂರದೂರುಗಳ ನೂರಾರು ವಾಹನಗಳು ಸಂಚರಿಸುವುದರಿಂದ ಅವರಿಗೆ ಹೊಂಡ ಇರುವುದು ತಿಳಿಯದೆ ಏಕಾಏಕಿ ಬ್ರೇಕ್‌ ಹಾಕಿ ಅಪಾಯವನ್ನು ತಂದುಕೊಳ್ಳುವ ಸಾಧ್ಯತೆ ಇದೆ.

Advertisement

ಜತೆಗೆ ಎಡ-ಬಲಕ್ಕೆ ತಿರುಗುವ ಸಂದರ್ಭದಲ್ಲೂ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇದೆ. ಸುಮಾರು ಒಂದು ತಿಂಗಳ ಹಿಂದೆ ಹೆದ್ದಾರಿ ಇಲಾಖೆಯು ಬಿ.ಸಿ.ರೋಡ್‌ನ‌ ನಾರಾಯಣ ಗುರು ವೃತ್ತದ ಬಳಿಯಿಂದ ಪಾಣೆಮಂಗಳೂರು ಸೇತುವೆವರೆಗಿನ ಹೊಂಡಗಳಿಗೆ ಡಾಮರು ತೇಪೆ ಹಾಕಿತ್ತು. ಆದರೆ ವೃತ್ತದ ಪಕ್ಕದಲ್ಲೇ ಇದ್ದ ಈ ಹೊಂಡವನ್ನು ಹಾಗೇ ಬಿಡಲಾಗಿದೆ. ಪ್ರಸ್ತುತ ಅದಕ್ಕೆ ಜಲ್ಲಿ ಹಾಕಿ ಮುಚ್ಚಲಾಗಿದ್ದು, ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ಹಾಗೇ ಉಳಿದುಕೊಂಡಿದೆ. ಆದರೆ ಜೋರಾಗಿ ಒಂದು ಮಳೆ ಬಂದರೂ ಎದ್ದು ಹೋಗುವ ಸಾಧ್ಯತೆಯೇ ಹೆಚ್ಚಿದೆ.ಈ ಹಿಂದೆಯೂ ಅದೇ ರೀತಿ ಹಾಕಿದ ಜಲ್ಲಿ ಪೂರ್ತಿ ಎದ್ದು ಹೋಗಿತ್ತು. ಹೀಗಾಗಿ ಹೆದ್ದಾರಿ ಇಲಾಖೆ ಈ ಕುರಿತು ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡ

ಮಂಗಳೂರು-ಬಿ.ಸಿ.ರೋಡ್‌ ಚತುಷ್ಪಥ ಹೆದ್ದಾರಿ ಮಧ್ಯೆ ಅಲ್ಲಲ್ಲಿ ಹೊಂಡಗಳಿದ್ದು, ಅದಕ್ಕೂ ಕೂಡ ತೇಪೆ ಕಾರ್ಯ ನಡೆದಿಲ್ಲ. ಹೆದ್ದಾರಿ ಚೆನ್ನಾಗಿದೆ ಎಂದು ವೇಗವಾಗಿ ಸಾಗುವ ವಾಹನಗಳು ಹೊಂಡವನ್ನು ಕಂಡು ಏಕಾಏಕಿ ಗೊಂದಲಕ್ಕೆ ಒಳಗಾಗಿ ವಾಹನದ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದ ಉದಾಹರಣೆಗಳು ಸಾಕಷ್ಟಿದೆ. ಜತೆಗೆ ಕೆಲದಿನಗಳ ಹಿಂದೆ ಬ್ರಹ್ಮರಕೂಟ್ಲು ಟೋಲ್‌ ಬಳಿಯ ಹೊಂಡದ ವೀಡಿಯೋ ವೈರಲ್‌ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next