ಬಾಗಲಕೋಟೆ: ಆಲೂಗಡ್ಡೆ ಬೀಜೋತ್ಪಾದನೆಯಲ್ಲಿ ರೈತರು ಎದುರಿಸುತ್ತಿದ್ದ ಬೀಜದ ಗಡ್ಡೆ ಸಮಸ್ಯೆಗೆ ಮುಕ್ತಿ ನೀಡಲು ಹಾಗೂ ರೋಗ ನಿರೋಧಕವಾಗಿರುವ ಹೊಸ ತಳಿಯ ಆಲೂಗಡ್ಡೆ ಚಿಗುರು ಕಾಂಡ ಸಸ್ಯೋತ್ಪಾದನೆ ತಾಂತ್ರಿಕತೆಯನ್ನು ಬಾಗಲಕೋಟೆಯ ತೋಟಗಾರಿಕೆ ವಿವಿಯ ವಿಜ್ಞಾನಿಗಳು ಸಂಶೋಧನೆ ಮಾಡಿದ್ದು, ಇದಕ್ಕೆ ವಿದೇಶಗಳಲ್ಲೂ ಬಲು ಬೇಡಿಕೆ ಬಂದಿದೆ.
ಹೌದು, ಬೆಂಗಳೂರು, ಕೋಲಾರ, ಹಾಸನ ಸೇರಿದಂತೆ ರಾಜ್ಯದ ಸುಮಾರು 7 ಜಿಲ್ಲೆಗಲ್ಲಿ ಅತಿಹೆಚ್ಚು ಆಲೂಗಡ್ಡೆ ಬೆಳೆಯಲಾಗುತ್ತಿದೆ. ಆದರೆ, ಪ್ರತಿವರ್ಷವೂ ಆಲೂಗಡ್ಡೆ ಬೆಳೆಗಾರರು, ಅಂಗಮಾರಿ, ಕೊಳೆರೋಗದ ಜತೆಗೆ ಬೀಜದ ಗಡ್ಡೆಯ ಸಮಸ್ಯೆ ತೀವ್ರವಾಗಿ ಎದುರಿಸುತ್ತಿದ್ದರು. ಅತಿಹೆಚ್ಚು ಆಲೂಗಡ್ಡೆ ಬೆಳೆಗಾರರಿದ್ದರೂ ಅವರಿಗೆ ಸಮಯಕ್ಕೆ ಸರಿಯಾಗಿ ಬೀಜದ ಗಡ್ಡೆ ಸಿಗದೆ ಪರದಾಡುತ್ತಿದ್ದರು. ಈ ಎಲ್ಲ ಸಮಸ್ಯೆ ಅರಿತ ಬಾಗಲಕೋಟೆ ತೋಟಗಾರಿಕೆ ವಿವಿ, ತನ್ನ ಅಧೀನದಲ್ಲಿರುವ ಬೆಂಗಳೂರಿನ (ಜಿಕೆವಿಕೆ) ಮತ್ತು ಹಾಸನದ ತೋಟಗಾರಿಕೆ ಕಾಲೇಜುಗಳ ಪ್ರಾದೇಶಿಕ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರದಿಂದ ಹೊಸ ಪ್ರಸ್ತಾವನೆ ಸಿದ್ಧಪಡಿಸಿ, 2019ರಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು.
2019ರಿಂದ ನಿರಂತರವಾಗಿ ಆಲೂಗಡ್ಡೆ ಚಿಗುರು ಕಾಂಡ ಸಸ್ಯೋತ್ಪಾದನೆ ತಾಂತ್ರಿಕತೆ ಸಂಶೋಧನೆ ಮಾಡಿ, ರೈತರ ಹೊಲಗಳಲ್ಲಿ ಪ್ರಾತಿಕ್ಷಿಕೆ ಕೂಡ ಮಾಡಿತ್ತು. ಅದೂ ಯಶಸ್ವಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೂತನ ಬಿತ್ತನೆ ಗಡ್ಡೆ ಉತ್ಪಾದನೆ ತಂತ್ರಜ್ಞಾನ ಅಭಿವೃದ್ಧಿಪಡಿಸಲು, ತೋಟಗಾರಿಕೆ ವಿವಿಗೆ ವಿಶೇಷ ಅನುದಾನ ಕೂಡ ನೀಡಿತ್ತು. ಅದೀಗ ಸಾಕಾರಗೊಂಡು ಹೊಸ ಆಲೂಗಡ್ಡೆ ಚಿಗುರು ಕಾಂಡ ಸಸಿ ಸಂಶೋಧಿಸಿ, ರೈತರಿಗೆ ಯಶಸ್ವಿಯಾಗಿ ಪೂರೈಸುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಮಾನ್ಯತೆ ನೀಡಿ, ರೈತರಿಗೆ ಸಬ್ಸಿಡಿ ರೂಪದಲ್ಲಿ ಸಸಿ ವಿತರಣೆಗೆ ಮುಂದಾಗಿದೆ.
ಈ ಚಿಗುರು ಕಾಂಡ ಸಸ್ಯೋತ್ಪಾದನೆ ನಾಲ್ಕು ಹಂತ ಹೊಂಡಿದ್ದು, ಅಂಗಾಂಶ ಕೃಷಿ ಮೂಲಕ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಶಿಮ್ಲಾದ ಕೇಂದ್ರೀಯ ಆಲೂಗಡ್ಡೆ ಸಂಶೋಧನೆ ಸಂಸ್ಥೆಯಿಂದ ಸುಧಾರಿತ ತಳಿಯ ಅಂಗಾಂಶ ಕೃಷಿ ವಿಧಾನಕ್ಕಾಗಿ ಮಾತೃ ಸಸಿ ತರಿಸಲಾಗಿತ್ತು. ಪಾಲಿಮನೆಗಳಲ್ಲಿ ತಾಯಿ ಮಡಿಗಳ ತಯಾರಿಕೆ, ಮಾತೃ ಸಸಿಗಳ ಬೆಳೆಸುವಿಕೆ ಮಾಡಿ, ರೈತರಿಗೆ ನೀಡಲಾಗುತ್ತಿದೆ.
ಕ್ಯಾಮರೂನ್ ದೇಶಕ್ಕೂ ಹೊಸ ತಂತ್ರಜ್ಞಾನ: ತೋಟಗಾರಿಕೆ ವಿವಿಯಿಂದ ಅಭಿವೃದ್ಧಿಪಡಿಸಿದ ಈ ನೂತನ ತಂತ್ರಜ್ಞಾನ, ಆಫ್ರೀಕಾ ಖಂಡದ ಪ್ರಮುಖ ಆಲೂಗಡ್ಡೆ ಬೆಳೆಯುವ ಕ್ಯಾಮರೂನ್ ದೇಶಕ್ಕೂ ತಲುಪಿದೆ. ಈ ಸಸ್ಯೋತ್ಪಾದನೆಯಿಂದ ಕೇಂದ್ರ ಸರ್ಕಾರ, ತೋಟಗಾರಿಕೆ ವಿವಿಯನ್ನು ಟೆಕ್ನಾಲಜಿ ಪಾರ್ಟನರ್ (ತಾಂತ್ರಿಕ ಸಲಹೆ ತಂಡದಲ್ಲಿ) ಎಂದು ಆಯ್ಕೆ ಮಾಡಿಕೊಂಡಿದ್ದು, ದೇಶೀಯ ಸಂಶೋಧನೆ, ಸಸ್ಯೋತ್ಪಾದನೆಗಳನ್ನು ವಿದೇಶಗಳಲ್ಲೂ ವಿಸ್ತರಿಸಲು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮೂಲಕ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಮರೂನ್ ದೇಶದ ತೋಟಗಾರಿಕೆ ವಿಜ್ಞಾನಿಗಳು, ಪ್ರಾಧ್ಯಾಪಕರು ಒಳಗೊಂಡ 10 ಜನರ ತಂಡ ಈಚೆಗೆ ಬೆಂಗಳೂರಿನ ಜಿಕೆವಿಕೆ, ಹಾಸನದ ಕಾಲೇಜು ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ನೂತನ ಆಲೂಗಡ್ಡೆ ಚಿಗುರು ಕಾಂಡ ಸಸ್ಯ ಉತ್ಪಾದನೆ ತಂತ್ರಜ್ಞಾನ ನೋಡಿಕೊಂಡು, ಅದನ್ನು ಮೆಚ್ಚಿ ತಮ್ಮ ದೇಶದಲ್ಲೂ ಇದನ್ನೇ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.
ಭಾಗ್ಯ ನುಗ್ಗೆ ಬಿತ್ತನೆ ಬೀಜ ಸಂಶೋಧನೆಯ ಬಳಿಕ ಆಲೂಗಡ್ಡೆ ಚಿಗುರು ಕಾಂಡ ಸಸ್ಯ ಉತ್ಪಾದನೆಯಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿವಿ, ವಿದೇಶದಲ್ಲೂ ಗಮನ ಸೆಳೆಯುವ ಕಾರ್ಯ ಮಾಡಿದೆ. ಇದಕ್ಕೆ ಕೇಂದ್ರದ ನೆರವು, ರಾಜ್ಯ ಸರ್ಕಾರದ ಸಬ್ಸಿಡಿ ಕೂಡ ದೊರೆಯುತ್ತಿದೆ. ಇಡೀ ರಾಜ್ಯದಲ್ಲಿ ಆಲೂಗಡ್ಡೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಜಿಲ್ಲೆಗಳಲ್ಲಿ ಪ್ರಸಕ್ತ ವರ್ಷದಿಂದ ಆಲೂಗಡ್ಡೆ ಹೊಸ ಚಿಗುರು ಕಾಂಡ ಸಸ್ಯೋತ್ಪಾದನೆ ತಾಂತ್ರಿಕತೆ, ಎಲ್ಲೆಡೆ ಬಲು ಬೇಡಿಕೆ ಪಡೆಯುತ್ತಿದೆ.
ತೋಟಗಾರಿಕೆ ವಿವಿಯಿಂದ ಆಲೂಗಡ್ಡೆ ಚಿಗುರು ಕಾಂಡ ಸಸ್ಯೋತ್ಪಾದನೆ ತಾಂತ್ರಿಕೆ ಸಂಶೋಧನೆ ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ಕೂಡ ಮಾನ್ಯತೆ ಜತೆಗೆ ನೆರವು ನೀಡಿದೆ. 2019ರಿಂದ ಸಂಶೋಧನೆ ಆರಂಭಗೊಂಡು, ಎರಡು ವರ್ಷ ರೈತರ ಹೊಲಗಳಲ್ಲಿ ಟ್ರಯಲ್ ಮಾಡಲಾಗಿತ್ತು. 2022ರಿಂದ ರಾಜ್ಯ ಸರ್ಕಾರ, ಈ ಹೊಸ ತಾಂತ್ರಿಕೆಯ ಸಸ್ಯಗಳನ್ನು ಸಬ್ಸಿಡಿ ಮೂಲಕ ರೈತರಿಗೆ ನೀಡುತ್ತಿದೆ. ಮುಖ್ಯವಾಗಿ ಇದನ್ನು ಕ್ಯಾಮರೂನ್ ದೇಶದ ವಿಜ್ಞಾನಿಗಳೂ ಇಲ್ಲಿಗೆ ಬಂದು, ಅಧ್ಯಯನ ಮಾಡಿ, ಅವರ ದೇಶದಲ್ಲೂ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ತೋಟಗಾರಿಕೆ ವಿವಿಯ 10 ವರ್ಷಗಳ ಹಾದಿಯಲ್ಲೆ ಹೆಮ್ಮೆ ತರಿಸಿದೆ. –
ಡಾ|ಕೆ.ಎಂ. ಇಂದಿರೇಶ, ಕುಲಪತಿ, ತೋಟಗಾರಿಕೆ ವಿವಿ, ಬಾಗಲಕೋಟೆ
ಶ್ರೀಶೈಲ ಕೆ. ಬಿರಾದಾರ