Advertisement

ಬಿಬಿಎಂಪಿ ಚುನಾವಣೆ ಮತ್ತೂಮ್ಮೆ ಮುಂದೂಡಿಕೆ?

03:33 PM May 08, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಆಡಳಿತಾತ್ಮಕ ಹಲವು ವಿಷಯಗಳಿಗೆ ಹಿನ್ನೆಡೆ ಉಂಟಾಗಿದೆ. ಈ ಮಧ್ಯೆ ಈ ವರ್ಷ ನಡೆಯಬೇಕಾಗಿದ್ದ ಬಿಬಿಎಂಪಿ ಚುನಾವಣೆ ಮುಂದೂಡುವುದು ಬಹುತೇಕ ಖಚಿತವಾಗಿದೆ.

Advertisement

ಮೇಯರ್‌ ಎಂ. ಗೌತಮ್‌ ಕುಮಾರ್‌ ಅವರ ಅಧಿಕಾರ ಅವಧಿ ಸೆ. 10ಕ್ಕೆ ಮುಗಿಯಲಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್‌ ಕೊನೆ ವಾರದೊಳಗೆ ಬಿಬಿಎಂಪಿಗೆ ಚುನಾವಣೆ ನಡೆದು ಸೆಪ್ಟೆಂಬರ್‌ನಲ್ಲಿ ನೂತನ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆಯಾಗಬೇಕಾಗಿತ್ತು. ಬಿಬಿಎಂಪಿ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ಮುಂದೂಡುವ ಪ್ರಯತ್ನ ನಡೆದಿತ್ತು. ಹೀಗಾಗಿ, ವಾರ್ಡ್‌ ಮರುವಿಂಗಡಣೆ ಕಾರ್ಯದಲ್ಲೂ ವಿಳಂಬ ಆಗಿತ್ತು. ನಿಗದಿತ ಅವಧಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಹಾಗೂ ಕೂಡಲೇ ವಾರ್ಡ್‌ ಮರುವಿಂಗಡಣೆಗೆ ಹೈಕೋರ್ಟ್‌ ಸಹ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು.

ಆದರೆ, ಸದ್ಯ ಕೋವಿಡ್  ವ್ಯಾಪಕವಾಗಿದ್ದು, ಕೆಲವು ವಾರ್ಡ್‌ಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದು ಮುಗಿದ ಮೇಲೆ ವಾರ್ಡ್‌ ಮರುವಿಂಗಡಣೆ, ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕಾಗುತ್ತದೆ. ಹೀಗಾಗಿ, ಕನಿಷ್ಠ ಆರು ತಿಂಗಳಿಂದ ಒಂದು ವರ್ಷಗಳ ಕಾಲ ಬಿಬಿಎಂಪಿ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಆಗಸ್ಟ್‌ನಲ್ಲಿ ಬಿಬಿಎಂಪಿಯ ಚುನಾವಣೆ ನಡೆಯಬೇಕಾದರೆ, 2011ರ ಜನಗಣತಿ ಪ್ರಕಾರ ವಾರ್ಡ್‌ಗಳ ಮರುವಿಂಗಡಣೆ ಮಾಡಬೇಕು ಮತ್ತು ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಬೇಕು. ಇದಾದ ಮೇಲೆ ಮೀಸಲಾತಿ ಪಟ್ಟಿ ಪ್ರಕಟಿಸಿ, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಆದರೆ, ಈ ಪ್ರಕ್ರಿಯೆಗಳನ್ನು ಸರ್ಕಾರ ಇನ್ನೂ ಕೈಗೊಂಡಿಲ್ಲ. ಅಲ್ಲದೆ, ವಾರ್ಡ್‌ ಮರುವಿಂಗಡಣೆಯ ಬಗ್ಗೆ ಪ್ರತಿಪಕ್ಷದ ಸದಸ್ಯರು ಆಕ್ಷೇಪಣೆ ವ್ಯಕ್ತಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಚುನಾವಣೆ ಬಹುತೇಕ ಮುಂದೂಡಿಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next