Advertisement

ಪ್ರಧಾನಿ ಮೋದಿ ‘ದ ಲೈ ಲಾಮಾ’: ದಿಲ್ಲಿಯಲ್ಲಿ ಪೋಸ್ಟರ್‌, ಕೇಸು ದಾಖಲು

04:27 PM May 11, 2018 | udayavani editorial |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯ ಹಲವೆಡೆಗಳಲ್ಲಿ ಕೈಮುಗಿದ, ನಗುಮೊಗದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ ಪೋಸ್ಟರ್‌ಗಳು ಹಚ್ಚಲ್ಪಟ್ಟಿದ್ದು ಇವುಗಳಲ್ಲಿ ‘ದ ಲೈ ಲಾಮಾ’ ಎಂಬ ಲೇವಡಿಯ ಶೀರ್ಷಿಕೆ ಇರುವುದು ಕಂಡು ಬಂದಿದೆ. 

Advertisement

ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟರ್‌ನ ಚಿತ್ರಗಳು ವೈರಲ್‌ ಆದುದನ್ನು ಗಮನಿಸಿ ಎಚ್ಚೆತ್ತ ದಿಲ್ಲಿ ಪೊಲೀಸರು ಕೂಡಲೇ ಅವುಗಳನ್ನು ತೆಗೆಸಿದ್ದಾರೆ. ‘ದಲೈ ಲಾಮಾ’ ಅವರ ಹೆಸರಿಗೆ ನಿಕಟವಿರುವ ಪದಗಳನ್ನು ಬಳಸಿಕೊಂಡು “ದ ಲೈ ಲಾಮಾ’ (ಸುಳ್ಳು ಹೇಳುವ ಲಾಮಾ) ಎಂಬ ಕೀಳು ಅರ್ಥದಲ್ಲಿ ಈ ಪೋಸ್ಟರ್‌ ಪದಗಳನ್ನು ಸೃಷ್ಟಿಸಲಾಗಿರುವುದು ಸ್ಪಷ್ಟವಿದೆ. 

ಪ್ರಧಾನಿ ಮೋದಿ ಅವರನ್ನು  “ದ ಲೈ ಲಾಮಾ’ ಎಂದು ಲೇವಡಿ ಮಾಡುವ ಈ ಪೋಸ್ಟರ್‌ಗಳು ದಿಲ್ಲಿಯ ಮಂದಿರ್‌ ಮಾರ್ಗ್‌ನ ಜೆ ಬ್ಲಾಕ್‌ ಪ್ರದೇಶ, ಎನ್‌ಡಿಎಂಸಿ ಪ್ರದೇಶ, ಮಧ್ಯ ದಿಲ್ಲಿಯ ಪಟೇಲ್‌ ನಗರ ಮತ್ತು ಶಂಕರ್‌ ರೋಡ್‌ ಪ್ರದೇಶಗಳಲ್ಲಿನ ಗೋಡೆಗಳಲ್ಲಿ ಕಂಡು ಬಂದಿವೆ. 

ಕೀಳು ಅಭಿರುಚಿಯ, ಕುತ್ಸಿತ ಮನೋಭಾವದ, ಈ ಪೋಸ್ಟರ್‌ ಗಳನ್ನು ಕಂಡ ಬಿಜೆಪಿ ನಾಯಕರು, ಸದಸ್ಯರು ಈ ಕೃತ್ಯವನ್ನು ಆಕ್ಷೇಪಿಸಿ ಪ್ರತಿಭಟಿಸಿದರು. 

ಬೆಳಗ್ಗೆ ಸುಮಾರು 10.15ರ ಹೊತ್ತಿಗೆ ದಿಲ್ಲಿ ಪೊಲೀಸರು ಮಂದಿರ್‌ ಮಾರ್ಗದಲ್ಲಿನ ಗೋಡೆಗಳಲ್ಲಿದ್ದ ಪೋಸ್ಟರ್‌ಗಳನ್ನು ತೆಗೆಸಿ ಅವುಗಳನ್ನು ವಶಕ್ಕೆ ತೆಗೆದುಕೊಂಡರು. 

Advertisement

ಈ ಪೋಸ್ಟರ್‌ ಗಳಲ್ಲಿ ಮುದ್ರಕರ ಅಥವಾ ಮುದ್ರಣಾಲಯದ ಹೆಸರು ಪ್ರಕಟವಾಗಿಲ್ಲ; ಅಂತೆಯೇ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ  “ದಿಲ್ಲಿ ಸಾರ್ವಜನಿಕ ಸೊತ್ತು ವಿರೂಪ ತಡೆ ಕಾಯಿದೆ’ಯಡಿ ಕೇಸು ದಾಖಲಿಸಿಕೊಂಡಿದ್ದಾರೆ.

ಈ ಪೋಸ್ಟರ್‌ಗಳನ್ನು ಹಚ್ಚಿದವರು ಯಾರೆಂದು ಪತ್ತೆ ಹಚ್ಚುವ ಪ್ರಯತ್ನದ ಭಾಗವಾಗಿ ಪೊಲೀಸರು ಆಯಾ ಪ್ರದೇಶಗಳ ಸ್ಥಳೀಯರನ್ನು ಪ್ರಶ್ನಿಸುತ್ತಿದ್ದಾರೆ ಮತ್ತು ಅಲ್ಲಿನ ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೇಠಿಯಲ್ಲಿ ಕಾಂಗ್ರೆಸ್‌ ಮುಖ್ಯಸ್ಥ ರಾಹುಲ್‌ ಗಾಂಧಿ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್‌ ಕಂಡು ಬಂದಿತ್ತು; ಒಂದು ವಾರದ ಬಳಿಕ ರಾಯ್‌ ಬರೇಲಿಯಲ್ಲಿ  ಸೋನಿಯಾ ಗಾಂಧಿ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್‌ ಕಂಡು ಬಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next