ಬೆಂಗಳೂರು: ಮೆಟ್ರೋದಲ್ಲಿ ಇನ್ನು ಅಂಚೆ ಸೇವೆಯೂ ಲಭ್ಯ! “ನಮ್ಮ ಮೆಟ್ರೋ’ ಪ್ರಯಾಣಿಕರು ಇನ್ನು ನಿಲ್ದಾಣಗಳಲ್ಲೇ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಕಳುಹಿಸಬಹುದು. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಕಾರ್ಡ್ ಬಳಸಿ, ಮೆಟ್ರೋ ನಿಲ್ದಾಣದಿಂದಲೇ ತಲುಪಿಸಬೇಕಾದ ಸ್ಥಳಕ್ಕೆ ಕಾಗದ ಪತ್ರ ತಲುಪಿಸುವುದು ಸೇರಿದಂತೆ ಅಂಚೆ ಸೇವೆ ಪಡೆಯಬಹುದು.
ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಮೆಟ್ರೋದ ಆಯ್ದ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಅಂಚೆ ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಅತ್ಯಾಧುನಿಕ ವಿಶೇಷ ವಿನ್ಯಾಸದ ಸಾಧನ ಸಹ ಸಿದ್ಧವಾಗಿದೆ. ಸ್ಮಾರ್ಟ್ ಫೋಸ್ಟ್ ಕಿಯೋಸ್ಕ್ ಯಂತ್ರದ ಮೂಲಕ ಅಂಚೆ ಇಲಾಖೆ ಜನರ ಬಳಿಗೆ ಹೋಗುತ್ತಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಕಿಯೋಸ್ಕ್ ಅಳವಡಿಸಿ ಸದ್ಯ ಸ್ಪೀಡ್ ಪೋಸ್ಟ್ ಹಾಗೂ ರಿಜಿಸ್ಟರ್ ಪೋಸ್ಟ್‌ಗಳನ್ನು ಕಳುಹಿಸಬಹುದು.
ಸ್ಪೀಡ್ ಹಾಗೂ ರಿಜಿಸ್ಟರ್ ಪೋಸ್ಟ್‌ಗಳನ್ನು ಎಲ್ಲಿಗೆ ಕಳುಹಿಸಬೇಕೆಂದು ಬಾರ್ ಕೋಡ್ ನಮೂದಿಸಿದರೆ ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಯಂತ್ರದಲ್ಲಿ ಬಾರ್‌ಕೋಡ್ ಬರಲಿದೆ. ಅದನ್ನು ಆ ಲಕೋಟೆ ಮೇಲೆ ಅಂಟಿಸಿ ಬಳಿಕ ತಲುಪಬೇಕಾದ ವಿಳಾಸ ನಮೂದಿಸಬೇಕು. ಅದರ ತೂಕ ಎಷ್ಟಿದೆ ಎಂಬುದರ ಆಧಾರದ ಮೇಲೆ ಶುಲ್ಕ ಪಾವತಿಸಬೇಕು.
ಆಗ ಐಪಿಪಿಬಿ ಕಾರ್ಡ್ ಮೂಲಕ ಹಣ ಪಾವತಿಸಬೇಕು. ಆಗ ನಿಮ್ಮ ಪೋಸ್ಟ್ ರವಾನೆಯಾಗಲಿದೆ. ಸದ್ಯ ಈಗ ಒಂದು ಸ್ಮಾರ್ಟ್ ಪೋಸ್ಟ್ ಕಿಯೋಸ್ಕ್ ಯಂತ್ರವನ್ನು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಇಡಲಾಗಿದ್ದು ಅದನ್ನು ಮೆಟ್ರೋದ ನಿಲ್ದಾಣದಲ್ಲಿ ಅಳವಡಿಸಲಾಗುವುದು ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
* ಶ್ರುತಿ ಮಲೆನಾಡತಿ