ಎಲ್ಲ ವಯೋವರ್ಗದ ಜನರಿಗೆ ತಮ್ಮ ಕಷ್ಟದ ಸಂಪಾದನೆಯ ಸ್ವಲ್ಪಾಂಶವನ್ನು ಉಳಿಸಿ ಅದನ್ನು ಲಾಭದಾಯಕವಾಗಿ, ಸುಭದ್ರ ಮತ್ತು ನಿಶ್ಚಿಂತೆಯಿಂದ ತೊಡಗಿಸಬೇಕು ಎನ್ನುವ ಅಪೇಕ್ಷೆ ಇರುವುದು ಸಹಜ. ಅಂತೆಯೇ ಅವರಿಗೆ ಅಂಚೆ ಇಲಾಖೆಯ ಉಳಿತಾಯ ಮತ್ತು ಹೂಡಿಕೆ ಯೋಜನೆಗಳು ಅತ್ಯಂತ ಪ್ರಶಸ್ತ ಎನ್ನುವುದು ನಿರ್ವಿವಾದ.
ಅಂಚೆ ಇಲಾಖೆಯಲ್ಲಿ ಎಲ್ಲಕ್ಕಿಂತ ನಾವು ಮೊದಲು ಮಾಡಬೇಕಾದದ್ದು ಉಳಿತಾಯ ಖಾತೆಯನ್ನು ತೆರೆಯುವುದು. ಮೊದಲೇ ತಿಳಿಸಿರುವಂತೆ ಅಂಚೆ ಉಳಿತಾಯ ಖಾತೆಗೆ ಶೇ.4ರ ವಾರ್ಷಿಕ ಬಡ್ಡಿ ಇರುತ್ತದೆ. ಇದನ್ನು ಒಂಟಿಯಾಗಿ ಇಲ್ಲವೇ ಜಂಟಿಯಾಗಿ ತೆರೆಯುವುದಕ್ಕೆ ಅವಕಾಶ ಇರುತ್ತದೆ.
ಉಳಿತಾಯ ಖಾತೆ ತೆರೆಯುವಾಗ ಕೆಲವೊಂದು ನಿಯಮಗಳನ್ನು ನಾವು ತಿಳಿದಿರಬೇಕಾಗುತ್ತದೆ. ಅವುಗಳನ್ನು ಹೀಗೆ ಗುರುತಿಸಬಹುದು :
ಖಾತೆಯನ್ನು ನಗದು ಪಾವತಿ ಮೂಲಕವೇ ತೆರೆಯಬೇಕು. ಚೆಕ್ ಸೌಕರ್ಯ ಬೇಡದಿದ್ದಲ್ಲಿ ಖಾತೆಯಲ್ಲಿ ಉಳಿಸಬೇಕಾದ ಕನಿಷ್ಠ ಬ್ಯಾಲನ್ಸ್ 50 ರೂ. ಚೆಕ್ ಸೌಕರ್ಯದ ಉಳಿತಾಯ ಖಾತೆಯ ಮಿನಿಮಮ್ ಬ್ಯಾಲನ್ಸ್ 500 ರೂ. ಈಗಿರುವ ಖಾತೆಗೂ ಚೆಕ್ ಸೌಕರ್ಯ ಪಡೆಯಬಹುದು.
ವರ್ಷಕ್ಕೆ 10,000 ರೂ. ವರೆಗಿನ ಬಡ್ಡಿ ಗಳಿಕೆ ತೆರಿಗೆ ಮುಕ್ತವಾಗಿರುತ್ತದೆ. ಖಾತೆ ತೆರೆಯುವಾಗ ಅಥವಾ ಆ ಬಳಿಕದಲ್ಲೂ ನಾಮಿನೇಶನ್ ಸೌಕರ್ಯ ಇರುತ್ತದೆ. ಅಂಚೆ ಇಲಾಖೆಯಲ್ಲಿನ ಖಾತೆಗಳನ್ನು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ವರ್ಗಾಯಿಸಬಹುದಾಗಿರುತ್ತದೆ. ಒಂದು ಅಂಚೆ ಕಚೇರಿಯಲ್ಲಿ ಒಂದೇ ಖಾತೆಯನ್ನು ತೆರೆಯಬೇಕು.
ಮೈನರ್ ಗಳ ಹೆಸರಿನಲ್ಲೂ ಖಾತೆ ತೆರೆಯಬಹದು; ಹತ್ತು ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮೈನರ್ ಗಳು ತಾವೇ ಖಾತೆಯನ್ನು ಆಪರೇಟ್ ಮಾಡಬಹುದು.
ಇಬ್ಬರು ಅಥವಾ ಮೂವರು ಪ್ರಾಯಪ್ರಬುದ್ಧರು ಜತೆಯಾಗಿ ಜಾಯಿಂಟ್ ಅಕೌಂಟ್ ತೆರೆಯಬಹುದು. ಖಾತೆಯನ್ನು ಜೀವಂತ ಇರಿಸಲು ಮೂರು ಹಣಕಾಸು ವರ್ಷದಲ್ಲಿ ಒಂದು ಬಾರಿಯಾದರೂ ಠೇವಣಿ ಮಾಡುವ ಅಥವಾ ಹಣ ಹಿಂಪಡೆಯುವ ವ್ಯವಹಾರವನ್ನು ಮಾಡಲೇಬೇಕು.
ಸಿಂಗಲ್ ಅಕೌಂಟನ್ನು ಜಾಯಿಂಟ್ ಅಕೌಂಟ್ ಆಗಿ ಪರಿವರ್ತಿಸುವುದಕ್ಕೆ ಅವಕಾಶ ಇರುತ್ತದೆ. ಅಪ್ರಾಪ್ತ ವಯಸ್ಸಿನವರು ತಾವು ಪ್ರಾಪ್ತ ವಯಸ್ಕರಾದಾಗ ಖಾತೆಯನ್ನು ತಮ್ಮ ಹೆಸರಿಗೆ ಪರಿವರ್ತಿಸಬಹುದು.
ಹಣದ ಜಮೆ ಅಥವಾ ಹಿಂಪಡೆಯುವಿಕೆಯನ್ನು ಸಿಬಿಎಸ್ ಪೋಸ್ಟ್ ಆಫೀಸ್ಗಳಲ್ಲಿ ವಿದ್ಯುನ್ಮಾನ ಮಾಧ್ಯಮದ ಮೂಲಕ ಮಾಡಬಹುದಾಗಿರುತ್ತದೆ. ಎಟಿಎಂ ಸೌಕರ್ಯವೂ ಖಾತೆದಾರರಿಗೆ ಇರುತ್ತದೆ.
ಅಂಚೆ ಇಲಾಖೆಯ ಐದು ವರ್ಷ ಅವಧಿಯ ರಿಕರಿಂಗ್ ಡೆಪಾಸಿಟ್ ಖಾತೆ (ಆರ್ ಡಿ ಖಾತೆ) ಅತ್ಯಂತ ಜನಪ್ರಿಯವಾಗಿದೆ. ಇದಕ್ಕೆ ತ್ತೈಮಾಸಿಕ ಚಕ್ರ ಬಡ್ಡಿ ನೆಲೆಯಲ್ಲಿ ವಾರ್ಷಿಕವಾಗಿ ಶೇ.7.3ರ ಬಡ್ಡಿ ಇದೆ. ಇದು 2019ರ ಜನವರಿಯಿಂದ ಅನ್ವಯಗೊಂಡಿದೆ.
ತಿಂಗಳಿಗೆ ಕನಿಷ್ಠ 10 ರೂ. ಗಳ ಆರ್ ಡಿ ಖಾತೆಯ ಅವಧಿ ಮಾಗಿದಾಗ 725.05 ರೂ. ಸಿಗುತ್ತದೆ. ಐದು ವರ್ಷಗಳು ಕೊನೆಗೊಂಡಾಗ ಈ ಖಾತೆಯನ್ನು ವರ್ಷದಿಂದ ವರ್ಷದ ನೆಲೆಯಲ್ಲಿ ಇನ್ನೂ ಐದು ವರ್ಷಗಳ ಅವಧಿಗೆ ಮುಂದುವರಿಸಬಹುದಾಗಿದೆ. ಆರ್ಡಿ ಖಾತೆಯನ್ನು ತಿಂಗಳ 10 ರೂ. ಅಥವಾ ಅದರ 5ರ ಗುಣಾಕಾರ ಯಾವುದೇ ಮೊತ್ತಕ್ಕೆ ತೆರೆಯಬಹುದಾಗಿದೆ.
ಪೋಸ್ಟಲ್ ಆರ್ ಡಿ ಖಾತೆಯ ಮುಖ್ಯ ಗುಣ ಲಕ್ಷಣವೆಂದರೆ ನಾಮಿನೇಶನ್ ಸೌಕರ್ಯ. ಖಾತೆ ತೆರೆಯುವಾಗ ಅಥವಾ ಅನಂತರದಲ್ಲಿ ಇದನ್ನು ಮಾಡಬಹುದಾಗಿದೆ. ಪೋಸ್ಟಲ್ ಆರ್ ಡಿ ಖಾತೆಯನ್ನು ದೇಶದ ಯಾವುದೇ ಅಂಚೆ ಕಚೇರಿಗೆ ವರ್ಗಾಯಿಸಬಹುದಾಗಿದೆ. ಒಬ್ಬ ವ್ಯಕ್ತಿ ಎಷ್ಟೇ ಸಂಖ್ಯೆಯ ಖಾತೆಯನ್ನು ಯಾವುದೇ ಪೋಸ್ಟ್ ಆಫೀಸ್ನಲ್ಲಿ ತೆರೆಯಬಹುದಾಗಿದೆ. ಪ್ರಾಪ್ತ ವಯಸ್ಕರು ಜಾಯಿಂಟ್ ಖಾತೆಯನ್ನು ತೆರಯಬಹುದಾಗಿದೆ.
ಆರ್ ಡಿ ಖಾತೆಯನ್ನು ಒಂದು ಕ್ಯಾಲೆಂಡರ್ ತಿಂಗಳ 15ನೇ ದಿನಾಂಕದಂದು ಮಾಡಿದರೆ, ಮುಂದಿನ ಆರ್ ಡಿ ಕಂತುಗಳನ್ನು ಆಯಾ ತಿಂಗಳ 15ನೇ ತಾರೀಕಿನೊಳಗೆ ಪಾವತಿಸಬೇಕಾಗತ್ತದೆ. ಖಾತೆಯನ್ನು ಒಂದೊಮ್ಮೆ 16ನೇ ತಾರೀಕಿನಂದು ತೆರೆದ ಪಕ್ಷದಲ್ಲಿ ಮುಂದಿನ ಕಂತುಗಳನ್ನು ಕ್ಯಾಲೆಂಡರ್ ತಿಂಗಳ ಕೊನೇ ಕೆಲಸದ ದಿನದೊಳಗೆ ಪಾವತಿಸಬೇಕಾಗುತ್ತದೆ. ಕಂತು ಪಾವತಿಸಲು ತಪ್ಪಿದಲ್ಲಿ ಕಂತು ಮೊತ್ತದ ಪ್ರತೀ ಐದು ರೂಪಾಯಿಗೆ ಶೇ.0.05ರ ದಂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಕನಿಷ್ಠ ಆರು ತಿಂಗಳ ಆರ್ ಡಿ ಕಂತನ್ನು ಮುಂಗಡವಾಗಿ ಕಟ್ಟಿದಲ್ಲಿ ರಿಬೇಟ್ ಸಿಗುತ್ತದೆ. ಖಾತೆ ತೆರೆದ ಒಂದು ವರ್ಷದ ಬಳಿಕ ಜಮೆ ಗೊಂಡಿರುವ ಹಣದ ಶೇ.50ನ್ನು ಹಿಂಪಡೆಯುವುದಕ್ಕೆ ಅವಕಾಶ ಇರುತ್ತದೆ. ಆದರೆ ಹೀಗೆ ಹಿಂಪಡೆದ ಮೊತ್ತವನ್ನು ಖಾತೆಯು ಚಾಲ್ತಿಯಲ್ಲಿರುವ ಅವಧಿಯಲ್ಲಿ ಯಾವಾಗಲಾದರೂ ಬಡ್ಡಿ ಸಹಿತ ಒಂದೆ ಗಂಟಿನಲ್ಲಿ ಮರುಪಾವತಿಸಬೇಕಾಗುತ್ತದೆ.