ಬೆಂಗಳೂರು: ಅಣ್ಣತಂಗಿಯರ ಪವಿತ್ರ ಹಬ್ಬ ರಕ್ಷಾ ಬಂಧನ ಸಮೀಪಿಸುತ್ತಿದೆ. ಆದರೇ ಕೋವಿಡ್ 19 ಕಾರಣದಿಂದ ಅಂಗಡಿಗೆ ತೆರಳಿ ತಮಗಿಷ್ಟವಾದ ರಾಖಿ ಖರೀದಿಸಲು ಆಗುವುದಿಲ್ಲ ಆಗುವುದಿಲ್ಲವೆಂದು ತಂಗಿಯಂದಿರು ಚಿಂತಿಸಬೇಕಾದ ಅವಶ್ಯಕತೆಯಿಲ್ಲ. ಯಾಕೆಂದರೇ ಭಾರತೀಯ ಅಂಚೆ ಇಲಾಖೆ ಮನೆಯಲ್ಲಿಯೇ ಕುಳಿತು ಸಹೋದರರಿಗೆ ರಾಖಿ ಕಳುಹಿಸುವ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.
ಹೌದು, ಇದಕ್ಕಾಗಿ ಅಂಚೆ ಇಲಾಖೆ ‘ರಾಖಿ ಪೋಸ್ಟ್’ ಎಂಬ ವಿನೂತನ ಸೇವೆಯನ್ನು ಜಾರಿಗೆ ತಂದಿದ್ದು ದೇಶದ ಯಾವುದೇ ಮೂಲೆಗೆ ಇದರ ಮೂಲಕ ರಾಖಿ ಕಳುಹಿಸಬಹುದಾಗಿದೆ. ಮಾತ್ರವಲ್ಲದೆ ಗಡಿ ಪ್ರದೇಶದಲ್ಲಿರುವ ಸೇನಾ ಯೋಧರಿಗೂ ರಾಖಿ ತಲುಪಿಸುವ ಅವಕಾಶವಿದ್ದು ಅವರಿಗೆಂದೇ ಮುದ್ರಿತ ಸಂದೇಶವನ್ನು ಆಯ್ಕೆ ಮಾಡಿ ರವಾನಿಸಬಹುದಾಗಿದೆ.
www.karnatakapost.gov.in ಮುಖಾಂತರ ಮನೆಯಲ್ಲಿ ಕುಳಿತು ಕರ್ನಾಟಕ ರಾಜ್ಯದೊಳಗಿನ ಗ್ರಾಹಕರು ಭಾರತದ ಯಾವುದೇ ಪ್ರದೇಶಕ್ಕೆ ರಾಖಿಯನ್ನು ತ್ವರಿತ ಅಂಚೆ (ಸ್ಪೀಡ್ ಪೋಸ್ಟ್) ಮುಖಾಂತರ ಬಹು ಸುಲಭವಾಗಿ ಕೇವಲ 100 ರೂಪಾಯಿ ವೆಚ್ಚದಲ್ಲಿ ಕಳುಹಿಸಬಹುದು. ಈ ಬೆಳವಣಿಗೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ದೊರೆಯುತ್ತಿದ್ದು ರಾಖಿ ಲಕೋಟೆಗಳಿಗೆ ಹೊಸ ಆಯಾಮ ದೊರೆತಂತಾಗಿದೆ.
ಆದರೆ ಈ ವಿಧಾನದ ಮೂಲಕ ರಾಖಿ ಕಳುಹಿಸಲು ಜುಲೈ ತಿಂಗಳ 31 ನೇ ತಾರೀಕು ಕೊನೆಯ ದಿನವಾಗಿರುತ್ತದೆ ಎಂದು ಮಂಗಳೂರು ಪೋಸ್ಟಲ್ ವಿಭಾಗದ ಅಧೀಕ್ಷಕ ಎನ್. ಶ್ರೀಹರ್ಷ ಮಾಹಿತಿ ನೀಡಿದ್ದಾರೆ.