ಮುಂಬಯಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಇಲಾಖೆ ಸೋಮವಾರ ಮುಂಬಯಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಅನ್ವಯ ಗ್ರಾಹಕರಿಗೆ ಜೀವ ವಿಮೆ ಪಾಲಿಸಿಯ ದಾಖಲೆಗಳನ್ನು ಮುದ್ರಿಸಿ, ಕಳುಹಿಸುವ ಹೊಣೆಯನ್ನು ಅಂಚೆ ಇಲಾಖೆ ವಹಿಸಿಕೊಳ್ಳಲಿದೆ.
ಈ ಸಂದರ್ಭದಲ್ಲಿ ಎಲ್‌ಐಸಿಯ ಅಧ್ಯಕ್ಷ ಎಂ.ಆರ್. ಕುಮಾರ್ ಮಾತನಾಡಿ, ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುವುದು ಅತ್ಯಂತ ದೊಡ್ಡ ಹೊಣೆಗಾರಿಕೆಯಾಗಿದೆ. ಅಂಚೆ ಇಲಾಖೆ ತನ್ನ ಸೇವೆಗಳಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಸ ವ್ಯವಸ್ಥೆ ಜಾರಿ ಮಾಡುವ ನಿಟ್ಟಿನಲ್ಲಿ ತೆಲಂಗಾಣ ವಲಯ ಹೊಸ ಹೆಜ್ಜೆಯನ್ನು ಇರಿಸಿದೆ ಎಂದರು. ಎಲ್‌ಐಸಿ ಕೂಡ ಡಿಜಿಟಲ್ ವಲಯದಲ್ಲಿ ಹಲವು ಮೊದಲ ಕ್ರಮಗಳನ್ನು ಕೈಗೊಂಡಿದೆ ಎಂದರು. ಹೊಸದಿಲ್ಲಿಯಲ್ಲಿರುವ ಅಂಚೆ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ
ಅಜಯ ಕುಮಾರ್ ರಾಯ್ ಮಾತನಾಡಿ, “ಅದೇ ದಿನ ಬಟವಾಡೆ ಎನ್ನುವುದೇ ಅಂಚೆ ಇಲಾಖೆಯ ಮೂಲ ಮಂತ್ರ’ ಎಂದರು. ಎಲ್‌ಐಸಿ ಮತ್ತು ಅಂಚೆ ಇಲಾಖೆ ದೀರ್ಘ ಕಾಲದಿಂದ ಬಾಂಧವ್ಯ ಹೊಂದಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಔಷಧ ಪಾರ್ಕ್‌ಗೆ ಭೂಮಿ: ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ
ಎಲ್‌ಐಸಿಯ ವ್ಯವಸ್ಥಾಪಕ ನಿರ್ದೇಶಕರುಗಳಾದ ಮುಕೇಶ್ ಕುಮಾರ್ ಗುಪ್ತಾ, ರಾಜ್‌ಕುಮಾರ್, ಮಿನಿ ಐಪೆ, ಪ್ರವೀಣ್ ಕುಮಾರ್, ಅಂಚೆ ಇಲಾಖೆ ವತಿಯಿಂದ ಪೋಸ್ಟ್ ಮಾಸ್ಟರ್ ಜನರಲ್ ಟಿ.ಎಂ.ಶ್ರೀಲತಾ, ತೆಲಂ ಗಾಣ ವಲಯದ ಅಂಚೆ ನಿರ್ದೇಶಕ ಕೆ.ಎ.ದೇವರಾಜ್, ಮಹಾ ರಾಷ್ಟ್ರ ಸರ್ಕಲ್‌ನ ನವೀ ಮುಂಬಯಿ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಗಣೇಶ್ ವಿ.ಸವಲೇಶ್ವರ್ಕರ್ ಇದ್ದರು.