Advertisement

ಕರಾವಳಿಯಲ್ಲೂ  ಶೀಘ್ರ ಅಂಚೆ ಬ್ಯಾಂಕ್‌ ಕಾರ್ಯಾರಂಭ

02:38 PM Aug 07, 2018 | Team Udayavani |

ಮಂಗಳೂರು: ಅಂಚೆ ಕಚೇರಿಯಲ್ಲಿ ಬ್ಯಾಂಕಿಂಗ್‌ ಸೇವೆ ಸಿಗುವ “ಅಂಚೆ ಬ್ಯಾಂಕ್‌’ ಕರಾವಳಿಯಲ್ಲೂ ಆರಂಭವಾಗಲಿದೆ. ಮೊದಲ ಹಂತದಲ್ಲಿ ನಗರದ ಬಲ್ಮಠ ಹಾಗೂ ಉಡುಪಿ ಪ್ರಧಾನ ಅಂಚೆ ಕಚೇರಿಗಳು ಪ್ರಧಾನ ಶಾಖೆಗಳಾಗಿ  ಕಾರ್ಯ ನಿರ್ವಹಿಸಲಿವೆ. ಎರಡೂ ಕೇಂದ್ರಗಳಿಗೆ ಮ್ಯಾನೇಜರ್‌ ಸಹಿತಹಲವು ಹುದ್ದೆಗಳ ನೇಮಕವಾಗಿದೆ. ಪ್ರತ್ಯೇಕ ಕೊಠಡಿ ಜತೆಗೆ ಕಂಪ್ಯೂಟರ್‌ ಅಳವಡಿಸಲಾಗಿದೆ. ವರ್ಷಾಂತ್ಯದೊಳಗೆ ಎರಡೂ ಜಿಲ್ಲೆಯ ಒಟ್ಟು 803 ಅಂಚೆ ಕಚೇರಿಗಳಲ್ಲಿ ಬ್ಯಾಂಕಿಂಗ್‌ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ. 

Advertisement

ಪ್ರಧಾನಿ ಮೋದಿ ಆ. 21ರಂದು “ಅಂಚೆ ಬ್ಯಾಂಕ್‌’ಗೆ ಚಾಲನೆ ನೀಡುವ ಸಾಧ್ಯತೆಯಿದೆ. ದೇಶದ ಪ್ರತೀ ಜಿಲ್ಲೆಯಲ್ಲಿ ಕನಿಷ್ಠ ಒಂದು ಐಪಿಪಿಬಿ ಶಾಖೆ ಆರಂಭವಾಗಲಿದೆ. ಜತೆಗೆ ತಲಾ ಐದರಂತೆ ಒಟ್ಟು 10 ಅಂಚೆ ಕೇಂದ್ರಗಳಲ್ಲಿಯೂ “ಅಂಚೆ ಬ್ಯಾಂಕ್‌’ ಅದೇ ದಿನ ಚಾಲನೆ ಪಡೆಯಲಿದೆ.  ಜಿಲ್ಲಾ ಕೇಂದ್ರ ಐಪಿಪಿಬಿ ಶಾಖೆ ಮುಂದೆ ಇತರ ಅಂಚೆ ಕಚೇರಿಗಳ ಜತೆಗೆ ಲಿಂಕ್‌ ಆಗಲಿದೆ. ಆ.21ರ ಬಳಿಕ ನಾಲ್ಕು ತಿಂಗಳವರೆಗೆ ಎರಡೂ ಜಿಲ್ಲೆಯ ಎಲ್ಲ ಅಂಚೆ ಕಚೇರಿಗಳಲ್ಲಿ ಬ್ಯಾಂಕಿಂಗ್‌ ಸೇವೆ ಒದಗಿಸಲು ಅಗತ್ಯ ತಾಂತ್ರಿಕ ಸಿದ್ಧತೆಗಳನ್ನು ಈ ಪ್ರಧಾನ ಐಪಿಪಿಬಿ ಶಾಖೆ ನಿರ್ವಹಿಸಲಿದೆ. ಇದಕ್ಕಾಗಿ ಸಿಬಂದಿಗೆ ತರಬೇತಿ ನೀಡಲಾಗಿದೆ. 

ಅಂಚೆ ಬ್ಯಾಂಕ್‌: ಲಾಭವೇನು ?
ಸಾಮಾನ್ಯ ಬ್ಯಾಂಕ್‌ಗಳಂತೆ ಅಂಚೆ ಬ್ಯಾಂಕ್‌ನಲ್ಲೂ ಒಬ್ಬ ಗ್ರಾಹಕ 1 ಲಕ್ಷ ರೂ. ವರೆಗೆ ಮಾತ್ರ ಠೇವಣಿ ಇಡಬಹುದು. ಸಾಲ ಹಾಗೂ ಕ್ರೆಡಿಟ್‌ ಕಾರ್ಡ್‌ ಸಿಗುವುದಿಲ್ಲ. ಆದರೆ ಚಾಲ್ತಿ ಖಾತೆ, ಉಳಿತಾಯ ಖಾತೆ ತೆರೆಯಲು ಅವಕಾಶವಿದೆ. ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌, ಎಸ್‌ಎಸ್‌ ಬ್ಯಾಂಕಿಂಗ್‌ ದೊರೆಯಲಿದೆ. ಅಂಚೆ ಉಳಿತಾಯ ಖಾತೆಗಳು ಐಪಿಪಿಬಿ ಖಾತೆಯೊಂದಿಗೆ ವಿಲೀನವಾಗಲಿವೆ. ಆಗ ಗ್ರಾಮೀಣ ಜನರು ಮೊಬೈಲ್‌ ಆ್ಯಪ್‌ ಮೂಲಕ ಅಥವಾ ಅಂಚೆ ಕಚೇರಿಯಿಂದ ಯಾವುದೇ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಬಹುದು. ಗ್ರಾಮೀಣ ಭಾಗದಲ್ಲಿ ಡಿಜಿಟಲ್‌ ಬ್ಯಾಂಕಿಂಗ್‌ ಪ್ರಗತಿಗೆ ಇದು ವೇಗೋತ್ಕರ್ಷ ನೀಡಬಲ್ಲುದು. ಐಪಿಪಿಬಿ ಆ್ಯಪ್‌ ಕೂಡ ಇರಲಿದೆ. ಅದರ ಮೂಲಕ ಮೊಬೈಲ್‌ನಿಂದಲೇ ರಿಚಾರ್ಜ್‌, ವಿದ್ಯುತ್ಛಕ್ತಿ ಬಿಲ್‌, ಡಿಟಿಎಚ್‌ ಪಾವತಿ ಇತ್ಯಾದಿ ಹಲವು ಸೌಲಭ್ಯಗಳು ಸಿಗುತ್ತವೆ. ನರೇಗಾ ಹಣ, ಸಬ್ಸಿಡಿ, ಪಿಂಚಣಿ ಪಾವತಿ ಇತ್ಯಾದಿಯೂ ಈ ಮೂಲಕವೇ ಕಾರ್ಯಾಚರಿಸಲಿವೆ.

ದ.ಕ. 540; ಉಡುಪಿ 263 
ಉಭಯ ಜಿಲ್ಲೆಯಲ್ಲಿ ಮಂಗಳೂರು, ಪುತ್ತೂರು ಹಾಗೂ ಉಡುಪಿ ವಿಭಾಗಗಳಿವೆ. ಈ ಪೈಕಿ ಮಂಗಳೂರು ಹಾಗೂ ಪುತ್ತೂರು ವಿಭಾಗದಲ್ಲಿ ಮುಖ್ಯ ಅಂಚೆ ಕಚೇರಿ, ಉಪ ವಿಭಾಗದ ಅಂಚೆ ಕಚೇರಿ ಹಾಗೂ ಗ್ರಾಮೀಣ ಅಂಚೆ ಕಚೇರಿ ಸೇರಿ ಒಟ್ಟು 540 ಹಾಗೂ ಉಡುಪಿಯಲ್ಲಿ 263 ಕಚೇರಿಗಳು ಸೇರಿ ಒಟ್ಟು 803 ಅಂಚೆ ಸೇವೆ ಲಭ್ಯ. 

ಆ. 21: 10 ಕಡೆ ಚಾಲನೆ
ಮಂಗಳೂರಿನ ಬಲ್ಮಠದ ಅಂಚೆ ಭವನ ಹಾಗೂ ಉಡುಪಿ ಪ್ರಧಾನ ಅಂಚೆ ಕಚೇರಿಯ ಜತೆಗೆ ಮಂಗಳೂರು ಸ್ಟೇಟ್‌ಬ್ಯಾಂಕ್‌ ಪ್ರಧಾನ ಕಚೇರಿ, ಬಲ್ಮಠ, ಕಾಟಿಪಳ್ಳದ ಉಪವಿಭಾಗ ಹಾಗೂ ಕುತ್ತೆತ್ತೂರು ಹಾಗೂ ಸೂರಿಂಜೆ ಶಾಖಾ ಕಚೇರಿಯಲ್ಲಿಯೂ ಮೊದಲ ಹಂತದಲ್ಲಿ ಜಾರಿಗೆ ಬರಲಿದೆ. ಉಡುಪಿಯಲ್ಲಿ ಪ್ರಧಾನ ಅಂಚೆ ಕಚೇರಿ, ಬನ್ನಂಜೆ, ಉಚ್ಚಿಲದ ಉಪ ವಿಭಾಗ, ಬೆಳಪು ಹಾಗೂ ಪಣಿಯೂರು ಶಾಖಾ ಕಚೇರಿಯಲ್ಲಿ ಸಿದ್ಧತೆ ನಡೆಸಲಾಗಿದೆ ಎಂದು ಅಂಚೆ ಇಲಾಖೆಯ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next