ಮೈಸೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಗರದ ಪ್ರಧಾನ ಅಂಚೆ ಕಚೇರಿ ಬಳಿ ಪೋರ್ಸ್‌ಕಾರ್ಡ್ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಕಾರ್ಮಿಕರ ಪರವಾದ ಕಾಯ್ದೆಗಳನ್ನು ಮೊಟಕುಗೊಳಿಸಿ ಕಾರ್ಪೊರೇಟರ್ ಪರವಾಗಿ ಕಾಯಿದೆ ರೂಪಿಸುತ್ತಿದೆ ಎಂದು ಆರೋಪಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಕೇಂದ್ರದ ಕಾರ್ಮಿಕ ವಿರೋಧಿ ನೀತಿಯಿಂದ ಕೋಟ್ಯಂತರ ಕಟ್ಟಡ ಕಾರ್ಮಿಕರು ಬೀದಿಗೆ ಬೀಳುವಂತಾಗಲಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರ ಕೂಡಲೆ ಮಸೂದೆಯನ್ನು ವಾಪಾಸ್ ಪಡೆದುಕೊಳ್ಳುವಂತೆ ಪ್ರಧಾನಮಂತ್ರಿಗೆ ಪೋಸ್ಟ್‌ಕಾರ್ಡ್ ಮೂಲಕ ಲಿಖೀತ ಮನವಿ ಸಲ್ಲಿಸಿ, ಅಂಚೆ ಪತ್ರ ಚಳವಳಿ ನಡೆಸಿದರು.
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ಕಾರ್ಮಿಕರ ನಿಧಿಯನ್ನು ಗುಳಂ ಮಾಡುವ ಹಿನ್ನೆಲೆಯಲ್ಲಿ ಸಾಮಾಜಿಕ ಸುರಕ್ಷತಾ ಮಸೂದೆ 2018 ಅನ್ನು ಜಾರಿ ಮಾಡಲು ಮುಂದಾಗಿದೆ. ಈಗಾಗಲೇ ವೃತ್ತಿ ಆಧಾರಿತ ಸುರಕ್ಷಾ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕುರಿತಾದ ಮಸೂದನೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದಿದೆ. ಇದರಿಂದ 4 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರು ಈಗ ಪಡೆಯುತ್ತಿರುವ ಹಲವು ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದರು.
1996ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳೆರಡು ರದ್ದಾಗುತ್ತದೆ. ಈಗಾಗಲೇ ನೋಂದಣೆಯಾಗಿರುವ ದೇಶದ 4 ಕೋಟಿ ನೋಂದಾಯಿತ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಗಳು ರದ್ದಾಗುತ್ತವೆ. ಅಂದರೆ ಈಗ ಕರ್ನಾಟಕದ ನೋಂದಾಯಿತ ಸುಮಾರು 6 ಲಕ್ಷ ಜನರು ವಿವಿಧ ಕಲ್ಯಾಣ ಸೌಲಭ್ಯಗಳಿಗೆ ಅರ್ಜಿ ಹಾಕಿದ್ದಾರೆ. ಅವರೆಲ್ಲರೂ 14 ಸೌಲಭ್ಯಗಳನ್ನು ಪಡೆಯಲು ಅರ್ಹರಿದ್ದಾರೆ. ಈ ಹೊಸ ಕಾನೂನು ಜಾರಿಯಾದರೆ ಸೇವೆಗಳಿಂದ ವಂಚಿತರಾಗುತ್ತಾರೆ ಎಂದರು.
ನೂತನವಾಗಿ ಪ್ರಾರಂಭವಾಗುವ ಸಲಹಾ ಮಂಡಳಿಗಳಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಗಳಿಗೆ ಹೆಚ್ಚಿನ ಪ್ರಾತಿನಿಧ್ಯತೆ ಇರುವುದಿಲ್ಲ. ಕಲ್ಯಾಣ ಮಂಡಳಿಗಳಲ್ಲಿ ಶೇಖರಿಸಲ್ಪಟ್ಟ 70 ಸಾವಿರ ಕೋಟಿ ಹಣ ಕೇಂದ್ರ ಸರ್ಕಾರ ವಶವಾಗಲಿದೆ. ಕಾರ್ಮಿಕರ ನೋಂದಣಿ ನವೀಕರಣ ಹಾಗೂ ಸೌಲಭ್ಯಗಳ ವಿತರಣೆ ಖಾಸಗಿಯವರ ಕೈಗೆ ವಹಿಸಿ ಅವರಿಗೆ ಅನುಕೂಲ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಕಟ್ಟಡ ಕಾರ್ಮಿಕ ಕಾನೂನು-1996 ಉಳಿಸಿ-ಕಟ್ಟಡ ಕಾರ್ಮಿಕ ಮಂಡಳಿ ರಕ್ಷಿಸುವಂತೆ ಚುನಾವಣೆ ಪೂರ್ವದಲ್ಲಿ ಸಂಸದರ ಮನೆ ಎದುರು ಪ್ರತಿಭಟನೆ ನಡೆಸಿದ್ದವು. ಈಗ ಸೆ. 19ರಂದು ಬೆಂಗಳೂರಿನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಎಐಟಿಯುಸಿ ಉಪ ಪ್ರಧಾನ ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ, ಉಪಾಧ್ಯಕ್ಷ ಡಿ.ಜಗನ್ನಾಥ್, ಕಟ್ಟಡ ನಿರ್ಮಾಣ ಸಂಘಟನೆ ಅಧ್ಯಕ್ಷ ಕೆ.ಎಸ್.ರೇವಣ್ಣ, ಸಿದ್ದರಾಜು, ಶಿವಣ್ಣ, ವೈ.ಮಹದೇವಯ್ಯ, ಎಂ.ಮಂಜುನಾಥ್, ಸಿದ್ದೇಗೌಡ, ಜಿ.ಜಯರಾಂ ಇತರರಿದ್ದರು.