Advertisement
ಜತೆಗೆ, ಖಜಾನೆ ಮೇಲೆ ಹೊರೆಯಾ ಗದ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ ಬೃಹತ್ ಮೊತ್ತದ ಯೋಜನೆಗಳಿಗೆ ಬ್ರೇಕ್ ಹಾಕುವ ಸಾಧ್ಯತೆ ಹೆಚ್ಚಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಹಾಗೂ ಸಹಭಾಗಿತ್ವಕ್ಕೆ ಹೆಚ್ಚು ಒತ್ತು ಕೊಡಲು ಈಗಾಗಲೇ ಹಣಕಾಸು ಇಲಾಖೆಯೂ ಮಾನಸಿಕವಾಗಿ ಸಜ್ಜಾಗಿದೆ.
Related Articles
Advertisement
ಈ ಮಧ್ಯೆ, ಸಾಲ ಮನ್ನಾ ಹೊರೆ, ಪ್ರವಾಹ ಪರಿಹಾರ ಮತ್ತಿತರ ಕಾರಣಗಳಿಂದ ಉಂಟಾದ ಆರ್ಥಿಕ ಸಂಕಷ್ಟದಿಂದಾಗಿ 2019-20ನೇ ಸಾಲಿನ ಬಜೆಟ್‌ನಲ್ಲಿ ಎಲ್ಲ ಇಲಾಖೆಗಳ ಅನುದಾನದಲ್ಲಿ ಶೇ.30ರಷ್ಟು ಕಡಿತ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಕಡಿತದ ನಂತರವೂ ಇಲಾಖಾವಾರು ಸರಾಸರಿ ವೆಚ್ಚ ಶೇ.50ರಷ್ಟು ಮೀರಿಲ್ಲ.
ಇದನ್ನು ಗಮನದಲ್ಲಿಟ್ಟುಕೊಂಡು 2020-21 ಬಜೆಟ್‌ನಲ್ಲಿ ಇಲಾಖಾವಾರು ಅನುದಾನ ನಿಗದಿ ಯಲ್ಲೂ “ಜಿಪುಣತನ’ ತೋರಿ ಕೃಷಿ, ತೋಟಗಾರಿಕೆ, ನೀರಾವರಿ, ಕೈಗಾರಿಕೆ. ನಗರಾಭಿವೃದ್ಧಿ , ಇಂಧನ, ಶಿಕ್ಷಣ, ಲೋಕೋಪಯೋಗಿ, ಆರೋಗ್ಯ ಸೇರಿ ಪ್ರಮುಖ ಅನುದಾನ ಹಂಚಿಕೆ ಮಾಡಿ ಉಳಿದ ಇಲಾಖೆಗಳ ಯೋಜನೆಗಳಿಗೆ ಕತ್ತರಿ ಹಾಕಲಾಗುವುದು ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸುತ್ತವೆ.
2019-20ನೇ ಸಾಲಿನಲ್ಲಿ 2,34,153 ಕೋಟಿ ರೂ. ಗಾತ್ರದ ಬಜೆಟ್ ಮಂಡನೆಯಾಗಿತ್ತು. 2020-21 ನೇ ಸಾಲಿಗೆ 2.55 ಲಕ್ಷ ಕೋಟಿ ರೂ. ಬಜೆಟ್ ಗಾತ್ರ ಆಗುವ ಅಂದಾಜು ಮಾಡಲಾಗಿತ್ತಾದರೂ ಅಂತಿಮವಾಗಿ 2.50 ಲಕ್ಷ ರೂ.ವರೆಗೂ ತಲುಪುವ ನಿರೀಕ್ಷೆಯಿದೆ.
ಕೇಂದ್ರದ ಸಹಭಾಗಿತ್ವ: ಮತ್ತೂಂದೆಡೆ ರಾಜ್ಯದ ಬಜೆಟ್ ಮೇಲೆ ಸುಮಾರು 25 ಸಾವಿರ ಕೋಟಿ ರೂ. ಹೊರೆ ತಗ್ಗಿಸುವ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು ಪೂರೈಕೆ ಸೇರಿ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಸಹಭಾಗಿತ್ವ ಪಡೆದು ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ಜಾರಿಯಿಂದ ಕೇಂದ್ರದಿಂದ ಹೆಚ್ಚು ಅನುದಾನ ಲಭ್ಯವಾಗುವುದರ ಜತೆಗೆ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಕೊರತೆಯೂ ನಿವಾರಣೆಯಾಗಲಿದೆ.
ಗ್ರಾಮೀಣ ಕುಡಿಯುವ ನೀರು, ಅಂತರ್ಜಲ ವೃದ್ಧಿ, ಬಡ ಕುಟುಂಬಗಳಿಗೆ ಆರೋಗ್ಯ ಸೇವೆ, ಉನ್ನತ ಶಿಕ್ಷಣ ಹಾಗೂ ವಸತಿ ಯೋಜನೆಗಳಿಗೆ ಕೇಂದ್ರದಲ್ಲಿ ಹಾಲಿ ಚಾಲ್ತಿಯಲ್ಲಿರುವ ಯೋಜನೆ ಗಳೊಂದಿಗೆ ರಾಜ್ಯ ಸರ್ಕಾರವು ಜತೆಗೂಡಿ ಹೆಚ್ಚಿನ ನೆರವು ಪಡೆಯಲು ತೀರ್ಮಾನಿಸಲಾಗಿದೆ. ಬಜೆಟ್‌ನಲ್ಲಿ ಈ ಕುರಿತು ಪ್ರಸ್ತಾಪಿಸುವ ನಿರೀಕ್ಷೆಯಿದೆ.
ನಿರೀಕ್ಷೆ ಅಪಾರ: ಬಿಎಸ್‌ವೈಗೂ ಸವಾಲು: ಆರ್ಥಿಕ ಸಂಕಷ್ಟದ ನಡುವೆಯೂ ಬಜೆಟ್ ಬಗ್ಗೆ ರಾಜ್ಯದ ಜನತೆ, ರೈತಾಪಿ ಸಮುದಾಯ, ಕೈಗಾರಿಕೆ ಹಾಗೂ ಉದ್ದಿಮೆ ವಲಯ ಸಾಕಷ್ಟು ನಿರೀಕ್ಷೆ ಹೊಂದಿದೆ. ಬಜೆಟ್ ಪೂರ್ವಭಾವಿ ಸಭೆಗಳಲ್ಲೂ ಭಾಗವಹಿಸಿ ತಮ್ಮ ಬೇಡಿಕೆಗಳ ಮಹಾಪೂರವನ್ನೂ ಹರಿಸಿದೆ. ಖುದ್ದು ಬಿಜೆಪಿ ವಲಯ ದಲ್ಲೂ ಬಜೆಟ್ ಕುರಿತ ನಿರೀಕ್ಷೆ ಹೆಚ್ಚಾಗಿದೆ.
ಆದರೆ, 1.20 ಲಕ್ಷ ಕೋಟಿ ರೂ. ಆದಾಯ ಸಂಗ್ರಹ ಅಂದಾಜು, 55 ಸಾವಿರ ಕೋಟಿ ರೂ. ಸಾಲದ ಅವಕಾಶ ಮಿತಿ, ಕೇಂದ್ರದ ಸಹಾಯಹಸ್ತದ ನಿರೀಕ್ಷೆಯೊಂದಿಗೆ ರಾಜಸ್ವ ವೆಚ್ಚ ಸರಿತೂಗಿಸಿ ಜನಪ್ರಿಯ ಕಾರ್ಯಕ್ರಮಗಳ ಘೋಷಣೆ ಹಾಗೂ ಇಲಾಖಾವಾರು ಚಾಲ್ತಿಯಲ್ಲಿರುವ ಯೋಜನೆಗ ಳಿಗೆ ಅನುದಾನ ಹಂಚಿಕೆ ಮಾಡುವ ಸವಾಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿದೆ.
* ಎಸ್. ಲಕ್ಷ್ಮಿನಾರಾಯಣ