ಬೆಳ್ಮಣ್: ಕಾರ್ಕಳ ತಾಲೂಕಿನ ಮುಂಡ್ಕೂರು- ಸಚ್ಚೇರಿಪೇಟೆಯ ಮಧ್ಯ ಭಾಗದಲ್ಲಿ ಸಿಗುವ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂಪರ್ಕ ರಸ್ತೆಯ ಡಾಮರು ಕಿತ್ತು ಹೋಗಿ ಸಂಚಾರಕ್ಕೆ ಅಯೋಗ್ಯವಾಗಿರುವ ಬಗ್ಗೆ ಸಾರ್ವಜನಿಕರಲ್ಲಿ ಭಾರೀ ಅಕ್ರೋಶಕ್ಕೆ ಕಾರಣವಾಗಿದೆ.
ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಈ ಸಂಪರ್ಕ ರಸ್ತೆಯು ದೇಗುಲದ ಭಾಗದಲ್ಲಿ ಕಾಂಕ್ರೀಟೀಕರಣ ಗೊಂಡಿದ್ದರೂ ಮುಂಡ್ಕೂರು- ಸಚ್ಚೇರಿಪೇಟೆಯ ಮುಖ್ಯ ರಸ್ತೆಯಿಂದ ಸುಮಾರು 200 ಮೀಟರ್ ರಸ್ತೆಯು ಇನ್ನೂ ಹಳೆಯ ಡಾಮರಿನಿಂದಲೇ ಕೂಡಿದೆ. ಚರಂಡಿಯಿಲ್ಲದೆ ನಿರಂತರ ಮಳೆಯ ನೀರು ರಸ್ತೆಯಲ್ಲೇ ಹರಿಯುವ ಪರಿಣಾಮ ಡಾಮರು ಸಂಪೂರ್ಣ ಎದ್ದು ಹೋಗಿ ಸಂಚಾರಕ್ಕೆ ಅಯೋಗ್ಯವಾಗಿದೆ.
ಪಾದಚಾರಿಗಳಿಗೆ ಕೆಸರಿನ ಸಿಂಚನ
ಇಲ್ಲಿ ದಿನಕ್ಕೆ ನೂರಾರು ವಾಹನಗಳ ಸಹಿತ ಜನರೂ ಸಂಚರಿಸುತ್ತಿದ್ದು ರಸ್ತೆ ಕೆಸರಿನಿಂದ ತುಂಬಿ ಹೋಗಿ ಪಾದಚಾರಿಗಳಿಗೆ ಕೆಸರಿನ ಸಿಂಚನವಾಗುತ್ತಿದೆ. ಸೋಮವಾರ ದೇವಳಕ್ಕೆ ಬರುವ ಭಕ್ತರು ಹಾಗೂ ವಾಹನಗಳ ಸಂಖ್ಯೆ ಆಧಿಕವಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ಶಾಲೆ, ಕಾಲೆಜುಗಳ ವಿದ್ಯಾರ್ಥಿಗಳು ರಸ್ತೆಯ ಹೊಂಡ ಗುಂಡಿಗಳ ಅರಿವಿಲ್ಲದೆ ಮುಗ್ಗರಿಸಿದ್ದೂ ಇದೆ. ಈ ರಸ್ತೆ ಸಚ್ಚೇರಿಪೇಟೆಯಿಂದ ಮಂಗಳೂರು ತಾಲೂಕಿನ ನಿಡ್ಡೋಡಿ ಹಾಗೂ ಕಟೀಲು ಭಾಗಕ್ಕೆ ಹತ್ತಿರದ ರಸ್ತೆಯಾಗಿದ್ದು ಜನ ಹೆಚ್ಚಾಗಿ ಈ ರಸ್ತೆಯನ್ನೇ ಉಪಯೋಗಿಸುತ್ತಿದ್ದರೂ ಗುಂಡಿಗಳ ಭಯದಿಂದ ದಾರಿ ತಪ್ಪಿಸುವಂತಾಗಿದೆ.
ಮನವಿಗೆ ಬೆಲೆ ಇಲ್ಲ
ಈ ಭಾಗದ ಜನ ಈ ರಸ್ತೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ ಬಾರಿ ಬಾರಿ ಮನವಿ ಮಾಡಿದರೂ ಯಾವುದಕ್ಕೂ ಕವಡೆ ಕಿಮ್ಮತ್ತಿನ ಬೆಲೆ ಇಲ್ಲದಂತಾಗಿದೆ. ಕೆಲವೇ ಮೀಟರ್ ಉದ್ದದ ಈ ಕೊಂಪೆ ರಸ್ತೆಯನ್ನು ಸರಿಪಡಿಸಲು ಮೀನಮೇಷ ಎಣಿಸುತ್ತಿರುವ ಇಲಾಖೆಯ ವಿರುದ್ಧ ಈ ಭಾಗದ ಜನ ಪ್ರತಿಭಟನೆಗೆ ಸಿದ್ಧರಾಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.
ತೇಪೆಯಾದರೂ ಹಾಕಿ
ಈ ಗುಂಡಿಯಲ್ಲಿ ಸಂಚರಿಸುತ್ತಿರುವ ವಾಹನ ಮಾಲಕರು ಹಾಗೂ ಪಾದಚಾರಿಗಳು ರಸ್ತೆಯ ದುರವಸ್ಥೆಯ ಬಗ್ಗೆ ನೊಂದು ಗುಂಡಿಗೆ ಕಲ್ಲು ಹಾಕಿ ಮುಚ್ಚಿ ಅಥವಾ ತೇಪೆಯನ್ನಾದರೂ ಹಾಕಿ ಎಂದು ಗೋಗರೆದಿದ್ದಾರೆ. ಈ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ಕಾರ್ಯೋನ್ಮುಖವಾಗಬೇಕಾಗಿದೆ.
ಕೂಡಲೇ ಸಂದಿಸಿ
ಈ ರಸ್ತೆಯ ಮುಂದಿನ ಭಾಗ ಕಾಂಕ್ರೀಟ್‌ನಿದ ಕೂಡಿದ್ದು ಉತ್ತಮವಾಗಿದೆ.ಅದೇ ರೀತಿ ಸಣ್ಣ ಪ್ರಮಾಣದ ಕೆಲಸ ಬಾಕಿ ಇದ್ದು ಕೂಡಲೇ ಸ್ಪಂದಿಸಿ.
-ಪ್ರಸನ್ನ ಶೆಟ್ಟಿ , ಪೊಸ್ರಾಲು
ಕ್ರಮ ವಹಿಸಲಾಗುವುದು
ಸಂಬಂಧಪಟ್ಟ ಇಲಾಖೆಗೆ , ಜನಪ್ರತಿನಿಧಿಗಳಿಗೆ ಈ ರಸ್ತೆಯ ಬಗ್ಗೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು.
– ಸತೀಶ್, ಪಿಡಿಒ ಮುಂಡ್ಕೂರು ಗ್ರಾ.ಪಂ.
– ಶರತ್ ಶೆಟ್ಟಿ ಮುಂಡ್ಕೂರು