Advertisement

ಇದು ಒಂದು ರೂಪಾಯಿ ಕ್ರಾಂತಿಯ ಕಥೆ

04:15 AM Jun 23, 2018 | Karthik A |

ಮಂಗಳೂರು: ಇದು ಒಂದು ಮೊಟ್ಟೆಯ ಕಥೆಯಲ್ಲ; ಬದಲಿಗೆ ಒಂದು ರೂಪಾಯಿ ನಾಣ್ಯದ ಕ್ರಾಂತಿಯ ಕಥೆ! ಅಷ್ಟೇ ಅಲ್ಲ; ಒಂದು ರೂಪಾಯಿಯಲ್ಲಿ ಏನಿದೆ ಎಂಬಷ್ಟು ಅಪಮೌಲ್ಯಗೊಂಡಿರುವ ಸಂದರ್ಭದಲ್ಲಿ ಮೌಲ್ಯ ತಂದುಕೊಟ್ಟ ಪ್ರಯತ್ನ. ಕಷ್ಟದಲ್ಲೇ ಉಳಿದವರಿಗೆ ಸಹಾಯ ಮಾಡುವ ಆದರ್ಶಕ್ಕೆ ಉದಾಹರಣೆ. ಹಗಲು ದುಡಿತ; ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. ದುಡಿದು ಪಡೆದ ಸಂಬಳದಲ್ಲಿ ಒಂದಿಷ್ಟು ಬಡ ವಿದ್ಯಾರ್ಥಿಗಳಿಗೆ ದೇಣಿಗೆ, ಗ್ರಾಮಾಭ್ಯುದಯಕ್ಕೂ ವಿನಿಯೋಗ. ಇದು ಒಂದು ರೂಪಾಯಿ ನಾಣ್ಯದ ಕ್ರಾಂತಿ ಎಂಬ ವಿಶಿಷ್ಟ ಯೋಜನೆಯ ವಿವರ. ನಗರದ ಸಂತ ಅಲೋಶಿಯಸ್‌ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳು ಸಂಗ್ರಹಿಸುವ ರೂಪಾಯಿ ದೇಣಿಗೆ ವರ್ಷಕ್ಕೆ ದೊಡ್ಡ ಮೊತ್ತವಾಗಿ ಹಲವರಿಗೆ ಆಸರೆಯಾಗುತ್ತಿದೆ. ದುಡಿತದಿಂದ ಓದು – ಮನೆ ಖರ್ಚು ಎರಡನ್ನೂ ನಿರ್ವಹಿಸುತ್ತಲೇ ವಿದ್ಯಾರ್ಥಿಗಳು ಸಮಾಜಮುಖೀಯಾಗಿರುವುದು ವಿಶೇಷ.

Advertisement

ಯೋಜನೆಯ ವಿಶೇಷ
2016ರಲ್ಲಿ ಕಾಲೇಜು ಸುವರ್ಣ ಮಹೋತ್ಸವ ಆಚರಿಸಿದಾಗ ಈ ಯೋಜನೆ ಹುಟ್ಟಿಕೊಂಡಿತು. ಉತ್ಸುಕ ವಿದ್ಯಾರ್ಥಿಗಳು ಪ್ರತಿ ದಿನ ಅಥವಾ ವಾರಕ್ಕೆ 2-3 ಬಾರಿ ಒಂದು ರೂ. ನಾಣ್ಯವನ್ನು ಅದಕ್ಕೆಂದೇ ಮೀಸಲಾದ ಕಾಯಿನ್‌ ಬಾಕ್ಸ್‌ಗೆ ಹಾಕುತ್ತಾರೆ. ಕಾಲೇಜು ಆಡಳಿತ ಮಂಡಳಿಯ ಸಹಕಾರದೊಂದಿಗೆ 3 ವರ್ಷಗಳಿಂದ ನಡೆಯುತ್ತಿರುವ ಆದರ್ಶಗಾಥೆಯಿದು.


ಕಡುಬಡವರ ಶುಲ್ಕ ಪಾವತಿ

ಸುಮಾರು ಒಂದು ಲಕ್ಷ ರೂ. ನಲ್ಲಿ ಹತ್ತು ಮಂದಿ ಬಡ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಪಾವತಿ, ಕೆಲಸ ಮಾಡಿ ಬರುವ ಹತ್ತು ವಿದ್ಯಾರ್ಥಿಗಳಿಗೆ ಸಂಜೆ ಉಪಾಹಾರ ವ್ಯವಸ್ಥೆ, ಅನಾಥಾಲಯವೊಂದರ ಕಟ್ಟಡ ನಿರ್ಮಾಣಕ್ಕೆ ದೇಣಿಗೆ – ಇವು ಪ್ರಮುಖ. ಇವುಗಳಲ್ಲದೆ ಗ್ರಾಮ ಅಭ್ಯುದಯದ ಹೆಸರಿನಲ್ಲಿ ಗುರುಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಕುರಿತೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎನ್ನುತ್ತಾರೆ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಮನೋಹರ ಸೆರಾವೋ. 

ಕೋಲ್ಕತಾ ಕಾಲೇಜು ಪ್ರೇರಣೆ
ಬೆಂಗಳೂರಿನಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ಪ್ರಾಂಶುಪಾಲರು ಭಾಗವಹಿಸಿದ್ದರು. ಅಲ್ಲಿ ಕೋಲ್ಕತಾ ಸೈಂಟ್‌ ಕ್ಸೇವಿಯರ್ ಕಾಲೇಜು ಪ್ರಾಧ್ಯಾಪಕರೊಬ್ಬರು ತಮ್ಮ ಕಾಲೇಜಿನ ಒಂದು ರೂಪಾಯಿ ನಾಣ್ಯ ಕ್ರಾಂತಿಯ ಯಶೋಗಾಥೆ ತಿಳಿಸಿದರು. ಇದರಿಂದ ಪ್ರೇರಣೆ ಪಡೆದ ಮನೋಹರ ಸೆರಾವೊ ಕಾಲೇಜಿನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ  ವಿವರಿಸಿದ್ದರು.

ಕಡ್ಡಾಯವಲ್ಲ
ಪ್ರತಿದಿನ ಮಕ್ಕಳು ಎಷ್ಟೋ ಖರ್ಚು ಮಾಡುತ್ತಾರೆ. ಅದರಲ್ಲಿ ಒಂದು ರೂ. ಉಳಿಸಿಕೊಂಡರೆ ಅದೇ ಲಕ್ಷಕ್ಕೆ ದಾರಿ. ಇದು ಸ್ವಯಂಪ್ರೇರಿತ ಮಾತ್ರ. 2015ರಿಂದ 3 ವರ್ಷಗಳಲ್ಲಿ ವಿದ್ಯಾರ್ಥಿಗಳ ದೇಣಿಗೆ, ಶಿಕ್ಷಕರು, ದಾನಿಗಳ ಕೊಡುಗೆ ಒಟ್ಟು ಸೇರಿ 3,75,242 ರೂ. ಸಂಗ್ರಹವಾಗಿದೆ. ಹಣ ಸಂಗ್ರಹ, ಬಳಕೆ, ಲೆಕ್ಕಪತ್ರ- ಹೀಗೆ ಎಲ್ಲ ನಿರ್ವಹಣೆ ವಿದ್ಯಾರ್ಥಿ ಸಂಘಗಳದ್ದೇ. ಸಂಧ್ಯಾ ಕಾಲೇಜಿನಲ್ಲಿ ದುಡಿದು ಬಂದು ಓದುವವರೇ ಹೆಚ್ಚು. 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 105 ಮಂದಿ ಯೋಜನೆಯ ಫ‌ಲಾನುಭವಿಗಳು. ಆಶ್ರಮಗಳಿಗೆ ಹಣ ಸಹಾಯ, ರೋಗಿಗಳಿಗೆ ಹಣ್ಣು ಹಂಪಲು ನೀಡಿಕೆ ಇತ್ಯಾದಿ ಸಮಾಜಮುಖಿ ಕೆಲಸಗಳಿಗೆ ಬಳಸುತ್ತಿದ್ದೇವೆ. ಇನ್ನಷ್ಟು ಸಹಾಯ ಮಾಡುವ ಹಂಬಲವಿದೆ ಎನ್ನುತ್ತಾರೆ ವಿದ್ಯಾರ್ಥಿ ಸಂಘದ ಪದಾಧಿಕಾರಿ ಸುದೇಶ್‌ ಮಾಣಿಲ.

Advertisement

ಬಡ ವಿದ್ಯಾರ್ಥಿಗಳೇ ಸ್ಫೂರ್ತಿ
ಕಳೆದ ವರ್ಷದಿಂದ ಸಂತ ಅಲೋಶಿಯಸ್‌ ಪದವಿ ಕಾಲೇಜಿನಲ್ಲೂ ಆರಂಭಿಸಲಾಗಿದೆ. ಕಾಲೇಜಿನ ಸಾಮಾಜಿಕ ಕಳಕಳಿ ವಿಭಾಗ, ಆಡಳಿತ ಮಂಡಳಿ ಸಹಾಯ ಮಾಡುತ್ತಿದೆ. ಕೋಟೆಕಾರು ಬಳಿಯ ಒಲವಿನಹಳ್ಳಿಯಲ್ಲಿ ಮೂಲ ಸೌಕರ್ಯ ಒದಗಿಸಲು ಚಿಂತನೆ ನಡೆದಿದೆ.
– ಡಾ| ಫಾ| ಪ್ರವೀಣ್‌ ಮಾರ್ಟಿಸ್‌, ಪ್ರಾಂಶುಪಾಲರು, ಸಂತ ಅಲೋಶಿಯಸ್‌ ಕಾಲೇಜು ಮಂಗಳೂರು

— ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next