ಹೊಸದಿಲ್ಲಿ : ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ 53 ಮೊಬೈಲ್ ಫೋನ್‌ಗಳನ್ನು ಕದ್ದ ಇಬ್ಬರು ಗೋ ಏರ್ ಎಕ್ಸಿಕ್ಯುಟಿವ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಗೋ ಏರ್ ಅಧಿಕಾರಿಗಳನ್ನು ಸಚಿನ್ ಮಾನವ್ (30) ಮತ್ತು ಸತೀಶ್ ಪಾಲ್ (40) ಎಂದು ಗುರುತಿಸಲಾಗಿದೆ. ಸಚಿನ್ ಮಾನವ್ 2011ರಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಗೋ ಏರ್ ಸಂಸ್ಥೆಯ ಹಿರಿಯ ramp ಅಧಿಕಾರಿಯಾಗಿ ದುಡಿಯುತ್ತಿದ್ದರೆ ಸತೀಶ್ ಪಾಲ್ 2015ರಿಂದ ಗೋ ಏರ್ ಅಧಿಕಾರಿಯಾಗಿ ದುಡಿಯುತ್ತಿರುವುದಾಗಿ ತಿಳಿದು ಬಂದಿದೆ.
ಸರಕು ಇಳಿಸುವ ಹೊಣೆಗಾರಿಕೆ ಹೊಂದಿದ್ದ ಈ ಇಬ್ಬರು ಅಧಿಕಾರಿಗಳು ತಾವು ಕದ್ದಿದ್ದ 53 ಮೊಬೈಲ್ ಫೋನ್‌ಗಳನ್ನು ಚೀಲವೊಂದರಲ್ಲಿ ಹಾಕಿ, ಕನ್ವೆಯರ್ ಬೆಲ್ಟ್ ನಲ್ಲಿ ಅದನ್ನು ತಳ್ಳಿ, ಇತರ ಪ್ರಯಾಣಿಕರ ಹಾಗೆ ಆಗಮನ ದ್ವಾರದ ಮೂಲಕ ಬಂದು ಮೊಬೈಲ್ ಫೋನ್ ಚೀಲದೊಂದಿಗೆ ಹೊರ ನಡೆದು ಹೋದರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಸೆ.19ರಂದು ಕಾರ್ಗೋ ಕಂಪೆನಿಯೊಂದರ ಮ್ಯಾನೇಜರ್ ಓರ್ವರು ತಮ್ಮ ಕಂಪೆನಿಗೆ ಸೇರಿದ 53 ಮೊಬೈಲ್ ಫೋನ್‌ಗಳನ್ನು ಒಳಗೊಂಡಿದ್ದ ಸರಕು ಚೀಲ ಕಳವಾಗಿದೆ ಎಂದು ದೂರಿದ್ದರು ಎಂದು ಐಜಿಐ ಏರ್ ಪೋರ್ಟ್ ನ ಡಿಸಿಪಿ ಸಂಜಯ್ ಭಾಟಿಯಾ ಹೇಳಿದರು.
ತಮಗೆ ಕಳುಹಿಸಲಾಗಿದ್ದ ಈ ಸರಕು ಗೋ ಏರ್ ವಿಮಾನ ಜಿ8-229ರ ಮೂಲಕ ಪಟ್ನಾದಿಂದ ದಿಲ್ಲಿ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ಗೆ ಬಂದಿತ್ತು. ಸ್ಥಳಾವಕಾಶದ ಕೊರತೆಯಿಂದಾಗಿ ಈ ಸರಕಿನ ಒಂದು ಭಾಗವನ್ನು ಗೋದಾಮಿಗೆ ಸ್ಥಳಾಂತರಿಸಲಾಗಿತ್ತು. ಗೋದಾಮಿನಲ್ಲಿ ಅನ್‌ಲೋಡ್ ಆದಾಗ ಕೇವಲ 30 ಬ್ಯಾಗುಗಳು ಕಂಡು ಬಂದು 53 ಫೋನ್‌ಗಳಿದ್ದ ಚೀಲ ನಾಪತ್ತೆಯಾಗಿತ್ತು ಎಂದು ಮ್ಯಾನೇಜರ್ ತಮ್ಮ ದೂರಿನಲ್ಲಿ ಹೇಳಿದ್ದರು ಎಂಬುದಾಗಿ ಡಿಸಿಪಿ ತಿಳಿಸಿದರು.
ಸಿಸಿಟಿವಿ ಚಿತ್ರಿಕೆಯಲ್ಲಿ ಕೂಡ 53 ಮೊಬೈಲ್ ಫೋನ್‌ಗಳ ಚೀಲ ಎಲ್ಲಿ ನಾಪತ್ತೆಯಾಯಿತೆಂಬುದು ಗೊತ್ತಾಗಲಿಲ್ಲ. ಅದಾಗಿ ಕೆಲವು ದಿನಗಳ ಬಳಿಕ ನಡೆಸಲಾದ ತಾಂತ್ರಿಕ ಕಣ್ಗಾವಲಿನಲ್ಲಿ ಕಳವಾದ ಮೊಬೈಲ್ ಫೋನ್‌ಗಳ ಸಂಭವನೀಯ ಇರುವಿಕೆ ತಾಣ ಪತ್ತೆಯಾಗಿ ಅಂತಿಮವಾಗಿ ಅವುಗಳನ್ನು ಏರೋಸಿಟಿಯಿಂದ ವಶಪಡಿಸಿಕೊಳ್ಳಲಾಯಿತು.
ಅಂತೆಯೇ ಈ ಸಂಬಂಧ ಬಂಧಿತರಾದ ಇಬ್ಬರು ವ್ಯಕ್ತಿಗಳು ತಾವು ಗೋ ಏರ್ ಸಿಬಂದಿಗಳೆಂಬುದನ್ನು ಒಪ್ಪಿಕೊಂಡರು ಎಂದು ಡಿಸಿಪಿ ಹೇಳಿದರು.