ಲಿಸ್ಬನ್: ಭಾರತೀಯ ಪ್ರವಾಸಿ ಮಹಿಳೆಯೊಬ್ಬರು ಆ್ಯಂಬುಲೆನ್ಸ್ ನಲ್ಲಿ ನಿಧನ ಹೊಂದಿದ ಬಳಿಕ ನೈತಿಕ ಹೊಣೆ ಹೊತ್ತು ಪೋರ್ಚುಗಲ್ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ.
ನಿಯೋನಾಟಾಲಜಿ ಸೇವೆ ಸಿಗದ ಕಾರಣ ಸಾಂತ ಮಾರಿಯಾ ಆಸ್ಪತ್ರೆಯಿಂದ ಲಿಸ್ಬನ್ ನ ಮತ್ತೊಂದು ಆಸ್ಪತ್ರೆಗೆ ಆಂಬ್ಯುಲೆನ್ಸ್ ಗೆ ಸಾಗಿಸುವ ಸಮಯದಲ್ಲಿ 34 ವರ್ಷದ ಗರ್ಭಿಣಿ ಭಾರತೀಯ ಪ್ರವಾಸಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ತುರ್ತು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದ್ದು, ಮಹಿಳೆಯ ಸಾವಿನ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದೇಶದ ಲಸಿಕೆ ರೋಲ್‌ಔಟನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾರ್ಟಾ ಟೆಮಿಡೊ, ವೈದ್ಯರ ಕೊರತೆಯಿಂದಾಗಿ ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ನಿರ್ಧಾರಕ್ಕೆ ಭಾರೀ ಟೀಕೆ ಎದುರಿಸಿದರು. ಮಾರ್ಟಾ ಟೆಮಿಡೊ ರಾಜೀನಾಮೆಯನ್ನು ಪ್ರಧಾನಿ ಅಂಟಾನಿಯೋ ಕೊಸ್ಟಾ ಅಂಗೀಕರಿಸಿದ್ದು, ಆಕೆಯ ಸೇವೆಗಾಗಿ ಧನ್ಯವಾದ ಸೂಚಿಸಿದ್ದಾರೆ.
ಇದನ್ನೂ ಓದಿ:‘ಬಿಜೆಪಿ-ಮುಕ್ತ ಭಾರತ’ಕ್ಕೆ ಕರೆ ನೀಡಿದ ಕೆಸಿಆರ್-ನಿತೀಶ್ ಕುಮಾರ್ ಭೇಟಿ: ಏನಿದು ಪ್ರಮುಖ ರಂಗ?
ಇತ್ತೀಚಿನ ತಿಂಗಳುಗಳಲ್ಲಿ ಪೋರ್ಚುಗಲ್‌ನಾದ್ಯಂತ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು. ಇದರಲ್ಲಿ ಎರಡು ಶಿಶುಗಳು ಸಾವನ್ನಪ್ಪಿದವು. ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಈ ಘಟನೆಗಳು ನಡೆದಿದ್ದವು.
ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಪರಿಣತಿ ಹೊಂದಿರುವ ಆರೋಗ್ಯ ಸಿಬ್ಬಂದಿಗಳ ಕೊರತೆಯ ಕಾರಣದಿಂದ ಪೋರ್ಚುಗಲ್ ನಲ್ಲಿ ಹೆರಿಗೆ ಘಟಕಗಳು ತುಂಬಿ ತುಳುಕುತ್ತಿರುವ ಕಾರಣ ಮಹಿಳೆಯರು ಗಂಟೆಗಟ್ಟಲೆ ಕಾಯಬೇಕಾಗಿತ್ತು. ಇದರಿಂದಾಗಿ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಭಾರಿ ವಿರೋಧ ಎದುರಿಸಿದ್ದರು.