ಹೊಸದಿಲ್ಲಿ: ಕರ್ನಾಟಕದ ನವಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ)ಯಲ್ಲಿ ನೌಕರರು ಯಾವುದೇ ಕೆಲಸ ಮಾಡದೆ ಪ್ರತಿ ತಿಂಗಳು 2.5 ಲಕ್ಷ ರೂ. ಸಂಬಳ ತೆಗೆದುಕೊಳ್ಳುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಮಂಡಳಿ ಹೊಸ ಅಧ್ಯಕ್ಷ ಎಂ.ಟಿ.ಕೃಷ್ಣ ಬಾಬು ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಸಭೆಯ ವೇಳೆ ಈ ಅಂಶ ಗೊತ್ತಾಗಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
2009ರಲ್ಲಿ ಎನ್‌ಎಂಪಿಟಿಯಲ್ಲಿ ಕಾರ್ಗೊ ಹಡಗುಗಳಿಂದ ಸರಕುಗಳನ್ನು ಕ್ಷಿಪ್ರವಾಗಿ ಇಳಿಕೆ ಮಾಡುವ ಹಾರ್ಬರ್ ಮಷಿನ್ ಕ್ರೇನ್ (ಎಚ್‌ಎಂಸಿ) ವ್ಯವಸ್ಥೆ ನಿರ್ವಹಿಸಲು ಕೆಲಸಗಾರರಿಗೆ ಹೆಚ್ಚಿನ ಮೊತ್ತದ ಸಂಭಾವನೆ ನೀಡಲಾಗಿತ್ತು. ಹೀಗಾಗಿ, ವರ್ತಕರು ಬೇರೆ ಬಂದರಿಗೆ ತೆರಳುವ ನಿರ್ಧಾರವನ್ನು ತನ್ನ ಜತೆಗೆ ಹೇಳಿದ್ದಾಗಿ ಮಂಡಳಿ ಅಧ್ಯಕ್ಷ ಎಂ.ಟಿ.ಕೃಷ್ಣ ಬಾಬು ಹೇಳಿದ್ದಾರೆ.
ಕೃಷ್ಣ ಬಾಬು ಹೇಳಿದ ಪ್ರಕಾರ ಪ್ರತಿ ಪಾಳಿ (ಶಿಫ್ಟ್)ಯಲ್ಲಿ 10 ಮಂದಿ ಎಚ್‌ಎಂಸಿ ನಿರ್ವಹಣೆಗೆ ನಿಯೋಜಿತರಾಗಿದ್ದಾರೆ. ಕೆಲಸವಿಲ್ಲದಿದ್ದರೂ ಉದ್ಯೋಗಿಗಳನ್ನು ನಿಯೋಜಿಸಲಾಗುತ್ತದೆ. ಅವರಿಗೆ ಪ್ರತಿ ತಿಂಗಳಿಗೆ 60 ಸಾವಿರ ರೂ.ಗಳಿಂದ 80 ಸಾವಿರ ರೂ. ವರೆಗೆ ಸಂಬಳ ನೀಡಲಾಗುತ್ತದೆ. ಸರಕುಗಳನ್ನು ಹಡಗುಗಳಿಗೆ ತುಂಬಿಸಲು ಮತ್ತು ಅಲ್ಲಿಂದ ತೆಗೆಯಲು ಕೆಲಸಗಾರರಿಗೆ ಪ್ರತಿ ಟನ್‌ಗೆ 3 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಕುತೂಹಲಕಾರಿ ಅಂಶವೆಂದರೆ ಒಂದು ರೂಪಾಯಿ ಮೂವತ್ತು ಪೈಸೆಯನ್ನು ಚೆಕ್ ಮೂಲಕ ನೀಡಿದರೆ, ಬಾಕಿ ಮೊತ್ತವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಆ.1ರಿಂದ ಈ ವ್ಯವಸ್ಥೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿಲ್ಲ’ ಎಂದು ಹೇಳಿದ್ದಾರೆ.
ಎನ್‌ಎಂಪಿಟಿಯಲ್ಲಿನ ವ್ಯವಸ್ಥೆ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ದೇಶದ ಇತರ 11 ಪ್ರಮುಖ ಬಂದರು ಮಂಡಳಿಗಳಲ್ಲಿ ಅದೇ ರೀತಿಯ ವ್ಯವಸ್ಥೆ ಮುಂದುವರಿದೆಯೇ ಎಂದು ಪರಿಶೀಲಿಸಲು ಹಡಗು ಯಾನ ಖಾತೆ ಸಚಿವಾಲಯ ನಿರ್ದೇಶನ ನೀಡಿದೆ.