Advertisement

ಕಾಯಕಲ್ಪದ ನಿರೀಕ್ಷೆಯಲ್ಲಿ ಕೋಟ್ಯಂತರ ರೂ. ವ್ಯವಹಾರದ ‘ಬಂದರು’!

11:22 AM Apr 13, 2022 | Team Udayavani |

ಬಂದರು: ಕಿರಿದಾದ ರಸ್ತೆ..ಹಲವು ದಶಕದ ಹಿಂದಿನ ಕಟ್ಟಡಗಳು..ಕಾರ್ಮಿಕರು-ಗ್ರಾಹಕರ ಓಡಾಟ.. ಲಾರಿ ಸಹಿತ ಇತರ ವಾಹನಗಳ ನಿತ್ಯ ದಟ್ಟಣೆ..ರಸ್ತೆ ಬದಿಯಲ್ಲಿಯೇ ವ್ಯಾಪಾರ..ಕೋಟ್ಯಾಂತರ ರೂ ವಹಿವಾಟು!

Advertisement

ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಸನಿಹದ ಸರಿಸುಮಾರು 4 ಕಿ.ಮೀ. ಪರಿಧಿಯ ವಾಣಿಜ್ಯ ಚಟುವಟಿಕೆಯ ಬಹುಮುಖ್ಯ ಕೇಂದ್ರ ಬಂದರು ಪ್ರದೇಶ ಇದೀಗ ಅಭಿವೃದ್ಧಿಯ ಮಹಾ ನಿರೀಕ್ಷೆಯಲ್ಲಿದೆ. ನೂರಾರು ವಾಣಿಜ್ಯ ಕೇಂದ್ರ ಗಳ ಪ್ರಮುಖ ತಾಣವಾಗಿರುವ ಬಂದರು ಪ್ರದೇಶ ದಲ್ಲಿ ಮೂಲ ವ್ಯವಸ್ಥೆಗಳೇ ಇಲ್ಲದೆ ಸ್ಥಳೀಯ ವ್ಯಾಪಾರಿಗಳ ಸಂಕಟ ಹೇಳತೀರ ದಾಗಿದೆ. ಸರಕಾರಕ್ಕೆ ಅತೀ ಹೆಚ್ಚು ಆದಾಯ ಕೊಡುವ ಪ್ರದೇಶವಾದ ಬಂದರು ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ದ.ಕ. ಜಿಲ್ಲಾಡಳಿತ, ಮಂಗಳೂರು ಪಾಲಿಕೆ ನಡೆಸಬೇಕಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಬಂದರು ಪ್ರದೇಶವೆಂದರೆ “ಇಕ್ಕಟ್ಟಾದ ಪ್ರದೇಶ’’ ಎಂಬ ಸಾರ್ವತ್ರಿಕ ಮಾತಿದೆ. ಹೀಗಾಗಿ ಇಲ್ಲಿ ವಾಹನ ಚಲಾಯಿಸುವುದು ಕೂಡ ಅಷ್ಟೇ ಕಷ್ಟ. ಕಿರಿದಾದ ರಸ್ತೆಯಲ್ಲಿ ‘ಬ್ಲಾಕ್‌’ ಸಾಮಾನ್ಯ. ಜತೆಗೆ ರಸ್ತೆಯಲ್ಲೇ ಲೋಡಿಂಗ್‌-ಅನ್‌ಲೋಡಿಂಗ್‌, ವ್ಯಾಪಾರ ವಹಿವಾಟು ನಡೆದು ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಅಂದಹಾಗೆ, ಪಾರ್ಕಿಂಗ್‌ ಜಾಗ ಎಂಬುದು ಇಲ್ಲಿ ಇಲ್ಲವೇ ಇಲ್ಲ!

ಲೋವರ್‌ ಬಂದರ್‌ ಪ್ರದೇಶದ ಕೆಲವು ವ್ಯಾಪ್ತಿಗೆ ಕೆಲವು ತಿಂಗಳಿನಿಂದ ಕುಡಿಯುವ ನೀರೇ ಬರುತ್ತಿಲ್ಲ. ಅಂಗಡಿಯವರು ನೀರಿನ ವ್ಯವಸ್ಥೆಯನ್ನು ಪರ್ಯಾಯವಾಗಿ ಮಾಡಿ ಕೊಂಡಿದ್ದಾರೆ.

ಸ್ಥಳೀಯ ವ್ಯಾಪಾರಸ್ಥರೊಬ್ಬರು ‘ಸುದಿನ’ ಜತೆಗೆ ಮಾತನಾಡಿ, ಕೋಟ್ಯಾಂತರ ರೂ. ವ್ಯವಹಾರ ನಡೆಸುವ ಬಂದರು ಪ್ರದೇಶದಲ್ಲಿ ಕಿರಿದಾದ ರಸ್ತೆಯಿಂದ ಎಲ್ಲವೂ ಇಕ್ಕಟ್ಟಿನ ಪರಿಸ್ಥಿತಿ. ರಸ್ತೆಯೊಂದನ್ನು ಅಗೆದು 6 ತಿಂಗಳುಗಳು ಕಳೆದರೂ ಅದನ್ನು ಮುಚ್ಚದೆ ಧೂಳು ತುಂಬಿದ್ದು, ಹೊಂಡಗುಂಡಿಗಳಿಂದ ಕೂಡಿದೆ. ಜನರು ಕೊರೊನಾ ಬದಲಿಗೆ ಧೂಳಿನ ಕಾರಣದಿಂದ ಮಾಸ್ಕ್ ಹಾಕುವ ಪರಿಸ್ಥಿತಿಯಿದೆ. ರಸ್ತೆ ಮಧ್ಯೆಯೇ ವಿದ್ಯುತ್‌ ಕಂಬ ಇದ್ದರೂ ಅದನ್ನು ತೆರವು ಮಾಡುವ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ರಸ್ತೆಯಲ್ಲಿಯೇ ವ್ಯಾಪಾರ ನಡೆಸುವ ಪರಿಣಾಮ ಇಲ್ಲಿ ವಾಹನಗಳು ಕ್ಯೂ ನಿಲ್ಲುವ ಪರಿಸ್ಥಿತಿ ಇದೆ. ಸುದೀರ್ಘ‌ ವರ್ಷದ ಈ ಸಮಸ್ಯೆಗೆ ಇನ್ನೂ ಪರಿಹಾರವೇ ದೊರಕಿಲ್ಲ; ವ್ಯಾಪಾರಿಗಳ ನೋವು ಇಲ್ಲಿ ಕೇಳುವವರೇ ಇಲ್ಲ ಎನ್ನುತ್ತಾರೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ಸದ್ಯ ಬಂದರು ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆತಿದೆ. ಇಲ್ಲಿನ ಚರಂಡಿ, ಒಳಚರಂಡಿ, ರಸ್ತೆ ಹೀಗೆ ಎಲ್ಲ ವಿಧದ ಅಭಿವೃದ್ಧಿ ಚಟುವಟಿಕೆ ನಡೆಯುತ್ತಿದೆ. ಆದರೆ ಇಕ್ಕಟ್ಟಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಒಂದೊಂದು ರಸ್ತೆಯಲ್ಲಿ ಹತ್ತಾರು ಸಮಸ್ಯೆ!

ಬಂದರು ಪ್ರದೇಶವು ಅತ್ಯಂತ ಹೆಚ್ಚು ವಾಣಿಜ್ಯ ಚಟುವಟಿಕೆಯ ತಾಣ. ಮಂಗಳೂರು ಆಸುಪಾಸು ಸಹಿತ ಕಾಸರಗೋಡು, ಕಲ್ಲಿ ಕೋಟೆ, ಕಣ್ಣೂರು ಭಾಗಕ್ಕೆ ಆಹಾರ ಉತ್ಪನ್ನ, ಹಾರ್ಡ್‌ವೇರ್‌, ಕೃಷಿ ಉತ್ಪನ್ನಗಳ ಪ್ರಮುಖ ವ್ಯಾಪಾರ ಕೇಂದ್ರ. ಸುಮಾರು 4 ಕಿ.ಮೀ. ಆಸುಪಾಸಿನಲ್ಲಿ ಎಲ್ಲ ಉತ್ಪನ್ನಗಳ ವ್ಯಾಪಾರ, ಗೋದಾಮು ಇದೆ. ಸ್ಥಳೀಯ ಮಾತ್ರವಲ್ಲದೆ ವಿದೇಶಿ ವ್ಯಾಪಾರವೂ ಇಲ್ಲಿದೆ. ಆಹಾರ ಉತ್ಪನ್ನ, ಹಾರ್ಡ್‌ವೇರ್‌, ಅಡಿಕೆ, ಕೃಷಿ ಉತ್ಪನ್ನ, ಒಣಹುಲ್ಲುಗಳು ಹೀಗೆ ಹಲವು ಬಗೆಯ ಉತ್ಪನ್ನಗಳು ಒಂದೊಂದು ಭಾಗದಲ್ಲಿವೆ. ಸಗಟು ವ್ಯಾಪಾರಿಗಳು ಅಧಿಕವಿದ್ದಾರೆ. ಬಂದರು ಭಾಗದಲ್ಲಿ ಪ್ರಮುಖ 4 ರಸ್ತೆಗಳಿವೆ. ಒಂದೊಂದು ರಸ್ತೆಯಲ್ಲಿ ನೂರೊಂದು ವಿಶೇಷತೆಗಳಿವೆ ಹಾಗೂ ಹತ್ತಾರು ಸಮಸ್ಯೆ-ಸವಾಲುಗಳಿವೆ!

ಬಂದರು ಅಭಿವೃದ್ದಿಗೆ ವಿಸ್ತೃತ ಯೋಜನೆ ಅಗತ್ಯ

ಬಂದರು ಪ್ರದೇಶ ನಿತ್ಯ ವಾಣಿಜ್ಯ ಚಟುವಟಿಕೆಯ ಮುಖ್ಯ ಸ್ಥಳ. ಕೋಟ್ಯಾಂತರ ರೂ. ವ್ಯವಹಾರ ನಡೆಯುವ ಪ್ರದೇಶ. ಆದರೆ ಇಲ್ಲಿ ಮೂಲ ಸೌಕರ್ಯಗಳು ಪರಿಣಾಮಕಾರಿ ರೀತಿಯಲ್ಲಿ ದೊರೆಯಬೇಕಿದೆ. ಸ್ಥಳೀಯ ವ್ಯಾಪಾರ ಚಟುವಟಿಕೆಗೆ ಅನುಕೂಲ ಮಾಡುವ ವ್ಯವಸ್ಥೆ ಕಲ್ಪಿಸಬೇಕಿದೆ. ಸದ್ಯ ಸ್ಮಾರ್ಟ್‌ಸಿಟಿಯಡಿ ಕಾಮಗಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿಸ್ತೃತ ಯೋಜನೆ ರೂಪಿಸುವ ಆವಶ್ಯಕತೆಯಿದೆ. ಶಶಿಧರ ಪೈ ಮಾರೂರು, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next