Advertisement

ಜನಸಂಖ್ಯೆ ಆಧರಿಸಿ ಲಸಿಕೆ : ಕೇಂದ್ರದಿಂದ ವ್ಯಾಕ್ಸಿನ್‌ ವಿತರಣೆಗೆ ಮಾರ್ಗಸೂಚಿ

08:10 AM Jun 09, 2021 | Team Udayavani |

ಹೊಸದಿಲ್ಲಿ : ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನಸಂಖ್ಯೆ, ಕೊರೊನಾ ಸೋಂಕಿನ ತೀವ್ರತೆ, ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಪ್ರಗತಿ ಮತ್ತು ಲಸಿ ಕೆ ಪೋಲು ಆಧಾರದ ಮೇಲೆ ದೇಶಾದ್ಯಂತ ಲಸಿಕೆಯನ್ನು ಹಂಚಿಕೆ ಮಾಡಲಾಗುತ್ತದೆ.

Advertisement

ಸೋಮವಾರವಷ್ಟೇ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಶೇ. 75ರಷ್ಟು ಲಸಿಕೆಯನ್ನು ಕೇಂದ್ರ ಸರಕಾರವೇ ಖರೀದಿಸಿ ಹಂಚಿಕೆ ಮಾಡಲಿದೆ. ರಾಜ್ಯಗಳು ನೇರವಾಗಿ ಖರೀದಿ ಮಾಡುವಂತಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ.

ಈ ಮಾರ್ಗ ಸೂಚಿಗಳು ಜೂ. 21ರಂದು ಜಾರಿಯಾಗಲಿವೆ. ಸರಕಾರಿ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲೂ ಉಚಿತವಾಗಿ ಲಸಿಕೆ ಸಿಗಲಿದೆ. ಜನತೆ ಕೊ-ವಿನ್‌ ಆ್ಯಪ್‌ ಮೂಲಕ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಸ್ಥಳದಲ್ಲಿಯೇ ನೋಂದಣಿ ಅವಕಾಶವೂ ಇದೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಹೊಸ ಮಾರ್ಗಸೂಚಿ ಪ್ರಕಾರ, ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಹಂಚಿಕೆ ಮಾಡಲಾಗುತ್ತದೆ. ಅಂದರೆ, ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಿಗೆ ಹೆಚ್ಚು ಲಸಿಕೆ ದೊರೆಯಲಿದೆ. ಆದರೆ ಲಸಿಕೆ ವ್ಯರ್ಥ ಮಾಡಿದರೆ ಲಸಿಕೆ ಪೂರೈಕೆಯನ್ನು ಕಡಿತ ಮಾಡಲಾಗುತ್ತದೆ. ಹೀಗಾಗಿ ಲಸಿಕೆಯನ್ನು ಎಚ್ಚರದಿಂದ ಬಳಸಿಕೊಳ್ಳಬೇಕಿದೆ.

ಯಾವ ರಾಜ್ಯಕ್ಕೆ ಎಷ್ಟು ಲಸಿಕೆ ನೀಡಲಾಗುತ್ತದೆ ಎಂಬ ಬಗ್ಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಹೀಗಾಗಿ ಲಭ್ಯತೆಯ ಆಧಾರದಲ್ಲಿ ರಾಜ್ಯ ಸರಕಾರಗಳು ಜನರಿಗೆ ಲಸಿಕೆ ನೀಡಬಹುದು.

Advertisement

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ವರ್ಗಾವಣೆ ರಹಿತ ಎಲೆಕ್ಟ್ರಾನಿಕ್‌ ವೋಚರ್‌ ಬಳಸಲು ಪ್ರೋತ್ಸಾಹಿಸಲಾಗುವುದು ಎಂದು ಕೇಂದ್ರ ಸರಕಾರ ಇದೇ ಮಾರ್ಗಸೂಚಿಯಲ್ಲಿ ತಿಳಿಸಿದೆ. ಈ ವೋಚರ್‌ ಗಳಿಗೆ ಆರ್‌ ಬಿಐ ಒಪ್ಪಿಗೆ ಇರಬೇಕು, ಆರ್ಥಿಕವಾಗಿ ಹಿಂದುಳಿದವರು ಈ ವೋಚರ್‌ ಬಳಸುವಂತೆ ಪ್ರೋತ್ಸಾಹಿಸಲಾಗುವುದು ಎಂದಿದೆ.

44 ಕೋಟಿ ಲಸಿಕೆಗೆ ಕೇಂದ್ರ ಬೇಡಿಕೆ
ದೇಶದ 18 ವರ್ಷ ತುಂಬಿದ ಎಲ್ಲರಿಗೂ ಉಚಿತ ಲಸಿಕೆ ಕೊಡುವ ಬಗ್ಗೆ ಘೋಷಿಸಿದ ಕೇಂದ್ರ ಸರಕಾರ, ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಗಾಗಿ ಉತ್ಪಾದಕ ಕಂಪೆನಿಗಳಿಗೆ ಬೇಡಿಕೆ ಸಲ್ಲಿಸಿದೆ. ಕೊವಿಶೀಲ್ಡ್‌ 25 ಕೋಟಿ ಡೋಸ್‌ ಮತ್ತು ಕೊವ್ಯಾಕ್ಸಿನ್‌ 19 ಕೋಟಿ ಡೋಸ್‌ಗೆ ಬೇಡಿಕೆ ಸಲ್ಲಿಸಲಾಗಿದೆ.

ಈ 44 ಕೋಟಿ ಡೋಸ್‌ಗಳನ್ನು ಆಗಸ್ಟ್‌ನಿಂದ ಡಿಸೆಂಬರ್‌ ನಡುವಣ ಅವಧಿಯಲ್ಲಿ ಸಂಸ್ಥೆಗಳು ಪೂರೈಸಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ. ಈಗಾಗಲೇ ಶೇ. 30ರಷ್ಟು ಹಣವನ್ನು ಭಾರತ್‌ ಬಯೊಟೆಕ್‌ ಮತ್ತು ಸೀರಂ ಇಂಟರ್‌ನ್ಯಾಶನಲ್‌ ಕಂಪೆನಿಗಳಿಗೆ ಮುಂಗಡವಾಗಿ ನೀಡಲಾಗಿದೆ ಎಂದೂ ಹೇಳಿದೆ.

ಇದರ ಜತೆಗೆ 30 ಕೋಟಿ ಬಯಾಲಜಿಕಲ್‌ ಇ ಲಸಿಕೆಗೂ ಕೇಂದ್ರ ಸರಕಾರ ಬೇಡಿಕೆ ಸಲ್ಲಿಸಿದ್ದು, ಇದು ಸೆಪ್ಟಂಬರ್‌ ವೇಳೆಗೆ ಲಭ್ಯವಾಗಲಿದೆ.

ಉಚಿತ ಲಸಿಕೆ, ಪಡಿತರ: 1.45 ಲಕ್ಷ ಕೋ.ರೂ. ವೆಚ್ಚ
ಪ್ರಧಾನಿ ಮೋದಿ ಘೋಷಿಸಿದ ಉಚಿತ ಲಸಿಕೆ ಮತ್ತು ನವೆಂಬರ್‌ ವರೆಗೆ ಉಚಿತ ಪಡಿತರ ಯೋಜನೆಯಿಂದಾಗಿ ಕೇಂದ್ರದ ಬೊಕ್ಕಸಕ್ಕೆ 1.45 ಲಕ್ಷ ಕೋ.ರೂ. ಹೊರೆ ಬೀಳಲಿದೆ. ಉಚಿತ ಲಸಿಕೆಗೆ 45 ಸಾವಿರದಿಂದ 50 ಸಾವಿರ ಕೋ.ರೂ. ವೆಚ್ಚವಾಗಲಿದೆ. ದೇಶದ 80 ಕೋಟಿ ಬಡವರಿಗೆ 5 ಕೆ.ಜಿ. ಅಕ್ಕಿ ಅಥವಾ ಗೋಧಿ ಮತ್ತು 1 ಕೆ.ಜಿ. ದ್ವಿದಳ ಧಾನ್ಯ ನೀಡಲು 1.1 ಲಕ್ಷ ಕೋ.ರೂ. ವೆಚ್ಚವಾಗಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next