ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉತ್ತರಪ್ರದೇಶ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರ ನಡೆಸಿರುವ ಆರೋಪವನ್ನು ಎದುರಿಸುತ್ತಿರುವ ಪಾಪ್ಯಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಸಂಘಟನೆ ಮೇಲೆ ಇದೀಗ ಹೊಸತೊಂದು ಆರೋಪ ಕೇಳಿಬಂದಿದೆ.
ಪಿ.ಎಫ್.ಐ. ಸಂಘಟನೆಯ ಚಟುವಟಿಕೆಗಳಿಗಾಗಿ ದೆಹಲಿಯ ಶಹೀನಾಬಾಗ್ ನಲ್ಲಿರುವ ಈ ಸಂಘಟನೆಯ ಪ್ರಧಾನ ಕಛೇರಿಗೆ ಲಕ್ಷಾಂತರ ರೂಪಾಯಿಗಳ ದೇಣಿಗೆ ಹರಿದುಬರುತ್ತಿದೆ ಎಂದು ಜಾರಿ ನಿರ್ದೇಶನಾಲಯದ ಅನಾಮಧೇಯ ಅಧಿಕಾರಿಯೊಬ್ಬರು ಹಿಂದೂಸ್ಥಾನ್ ಟೈಮ್ಸ್ ವೆಬ್ ಸೈಟ್ ಗೆ ಈ ಮಾಹಿತಿಯನ್ನು ನೀಡಿದ್ದಾರೆ.
ದೆಹಲಿ ಪಿ.ಎಫ್.ಐ. ಅಧ್ಯಕ್ಷ ಮಹಮ್ಮದ್ ಫರ್ವೇಝ್ ಅಹಮ್ಮದ್ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ಉದಿತ್ ರಾಜ್ ಸಹಿತ ಹಲವರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಈ ಅಧಿಕಾರಿ ಬಹಿರಂಗಗೊಳಿಸಿದ್ದಾರೆ.
ಶನಿವಾರದಂದು ಮತದಾನ ನಡೆಯಲಿರುವ ದೆಹಲಿಯಲ್ಲಿ ಬಹಿರಂಗ ಪ್ರಚಾರದ ಅಂತಿಮದಿನವಾಗಿರುವ ಇಂದು ಈ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.
ಫರ್ವೇಝ್ ಅಹಮ್ಮದ್ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದುದು ಮಾತ್ರವಲ್ಲದೇ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಇದುವರೆಗಿನ ತನಿಖೆಯಿಂದ ಬಹಿರಂಗಗೊಂಡಿದೆ. ನೇರ ಭೇಟಿ, ದೂರವಾಣಿ ಸಂಪರ್ಕ ಮತ್ತು ವಾಟ್ಸ್ಯಾಪ್ ಚಾಟಿಂಗ್ ಮೂಲಕ ಇವರಿಬ್ಬರು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂಬ ಅಂಶವನ್ನೂ ಸಹ ತನಿಖೆಯ ವೇಳೆ ಕಂಡುಕೊಳ್ಳಲಾಗಿದೆ.
ಇಷ್ಟು ಮಾತ್ರವಲ್ಲದೇ ಪಿ.ಎಫ್.ಐ. ಹಾಗೂ ಇದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಒಟ್ಟು 73 ಬ್ಯಾಂಕ್ ಖಾತೆಗಳಿಗೆ ಸುಮಾರು 120 ಕೋಟಿ ರೂಪಾಯಿಗಳಷ್ಟು ಹಣವನ್ನು ಹಾಕಲಾಗಿದೆ ಎಂಬ ಮಾಹಿತಿಯನ್ನೂ ಸಹ ಈ ಅನಾಮಧೇಯ ಇ.ಡಿ. ಅಧಿಕಾರಿ ಬಹಿರಂಗಗೊಳಿಸಿದ್ದಾರೆ.
ಮತ್ತು ಸಂಘಟನೆಗೆ ಹರಿದು ಬಂದಿರುವ ಒಟ್ಟು ಮೊತ್ತದಲ್ಲಿ ಮೂರನೇ ಒಂದರಷ್ಟನ್ನು ಶಹೀನಾಬಾಗ್ ನಲ್ಲಿರುವ ಸಂಘಟನೆಯ ಪ್ರಧಾನ ಕಛೇರಿಯಲ್ಲಿ ನಗದು ರೂಪದಲ್ಲಿ ಇರಿಸಲಾಗಿದೆ. ದೇಶದ ವಿವಿಧ ಕಡೆಗಳಿಂದ ಸಂಗ್ರಹಿಸಲಾದ ಈ ಮೊತ್ತವನ್ನು ಇಲ್ಲಿಗೆ ತಂದು ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನು ಇ.ಡಿ. ಅಧಿಕಾರಿ ಮಾಡಿದ್ದಾರೆ.