Advertisement

ಪಿಒಪಿ ಮೂರ್ತಿ ನಿಷೇಧಕ್ಕಿಲ್ಲವೇ ಬೆಲೆ

11:25 AM Sep 07, 2018 | Team Udayavani |

ಕಲಬುರಗಿ: ರಾಜ್ಯದಲ್ಲಿ ಜಾರಿಯಿರುವ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಮೂರ್ತಿಗಳ ಉತ್ಪಾದನೆ ಮತ್ತು ಮಾರಾಟ ನಿಷೇಧಕ್ಕೆ ಕಲಬುರಗಿಯಲ್ಲಿ ಬೆಲೆಯೇ ಇಲ್ಲದಂತಾಗಿದೆ. ಗಣೇಶೋತ್ಸವಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದ್ದು, ನಗರದ ಎಲ್ಲೆಡೆ ರಾಸಾಯನಿಕಯುಕ್ತ ಬಣ್ಣ-ಬಣ್ಣಗಳ ಗಣೇಶ ಮೂರ್ತಿಗಳ ನಿರ್ಮಾಣ ಭರಾಟೆ ಜೋರಾಗಿದೆ.

Advertisement

ಸೆ.13ರಂದು ಗಣೇಶ ಚತುರ್ಥಿ ನಿಮಿತ್ತ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿವೆ. ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಉಪಯೋಗಿಸುವ ವಿಷಪೂರಿತ ರಾಸಾಯನಿಕ ಬಣ್ಣ, ವಸ್ತುಗಳಿಂದ ನೀರಿನ ಮಾಲಿನ್ಯ ತೀವ್ರವಾಗುತ್ತಿದೆ ಎಂದು
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ಮೂರ್ತಿಗಳ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಆದರೆ,
ಕಲಬುರಗಿಯಲ್ಲಿ ಇದರ ಪಾಲನೆಯೇ ಆಗುತ್ತಿಲ್ಲ. ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ರಾಜಾರೋಷವಾಗಿ ಪಿಒಪಿ
ಮೂರ್ತಿಗಳ ತಯಾರಿಕೆ ನಡೆಯುತ್ತಿದೆ. ಆದರೆ ಇದಕ್ಕೆ ಸಂಬಂಧಪಟ್ಟ ಇಲಾಖೆ ಅಥವಾ ಅಧಿಕಾರಿಗಳಾಗಲಿ ಕಡಿವಾಣ ಹಾಕುವ ಗೋಜಿಗೆ ಮುಂದಾಗಿಲ್ಲ.

ನಗರದ ಕೇಂದ್ರ ಬಸ್‌ ನಿಲ್ದಾಣ ರಸ್ತೆ, ಅಫಜಲಪುರ ರಸ್ತೆಯ ಬಿದ್ದಾಪುರ ಕಾಲೋನಿ ಸೇರಿದಂತೆ ಹಲವು ಕಡೆಗಳಲ್ಲಿ ರಾಜಸ್ಥಾನ ಸೇರಿದಂತೆ ಇನ್ನಿತರ ರಾಜ್ಯಗಳ ಜನತೆ ಅನೇಕ ದಿನಗಳಿಂದ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಹೈದ್ರಾಬಾದ್‌ನಂತಹ ನಗರಗಳಿಂದ ತರಹೇವಾರಿ ಬಣ್ಣಗಳು, ಮಿಂಚು ತಂದು ಗಣಪನ ಮೂರ್ತಿಗಳಿಗೆ ಹಚ್ಚಿ ಸಿದ್ಧಪಡಿಸಿ ಇಟ್ಟಿದ್ದಾರೆ. ಇನ್ನೂರು, ಮುನ್ನೂರು ರೂ. ಗಳಿಂದ ಹಿಡಿದು 50 ಸಾವಿರ ರೂ.ಗೂ ಮೇಲ್ಪಟ್ಟು ವೆಚ್ಚದ ಮೂರ್ತಿಗಳನ್ನು ತಯಾರಿಸಲಾಗಿದೆ.

ಕ್ರಮಕ್ಕೆ ಮುಂದಾಗದ ಅಧಿಕಾರಿಗಳು: ನಗರದಲ್ಲಿ ಪಿಒಪಿ ಮೂರ್ತಿಗಳನ್ನು ತಯಾರಿಸುವುದು ಕಂಡುಬರುತ್ತಿರುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೇ ಪಿಒಪಿ ಮೂರ್ತಿಗಳಿಂದ ಆಗುವ ಅನಾಹುತಗಳ ಬಗ್ಗೆ ಸಾರ್ವಜನಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿಲ್ಲ. ಕನಿಷ್ಠ ಪಕ್ಷ ಪಿಒಪಿ ಮೂರ್ತಿ ತಯಾರಿಸುವರ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಪೊಲೀಸ್‌ ಇಲಾಖೆಗೂ ಯಾವುದೇ ರೀತಿಯ ನಿರ್ದೇಶನವನ್ನು ಅಧಿಕಾರಿಗಳು ನೀಡದಿರುವುದನ್ನು ನೋಡಿದರೆ ಪರಿಸರ ಸ್ನೇಹಿ ಗಣೇಶೋತ್ಸವ ಬರೀ ಹೇಳಿಕೆಗೆ ಮಾತ್ರ ಸಿಮೀತ ಎಂಬುದು ಇದು ನಿರೂಪಿಸುತ್ತದೆ.

ಪರಿಸರ ಅಧಿಕಾರಿ ಇಲ್ಲ: ಮಾಲಿನ್ಯ ನಿಯಂತ್ರಣ ಇಲಾಖೆಯ ಜಿಲ್ಲಾ ಪರಿಸರ ಅಧಿಕಾರಿ ಸದ್ಯ ನಗರದಲ್ಲೇ ಇಲ್ಲ. ಕಳೆದ
ಸೋಮವಾರ ಜಿಲ್ಲಾ ಪರಿಸರ ಅಧಿಕಾರಿ ದಿವಾಕರ ಎನ್ನುವರು ವರ್ಗಾವಣೆಗೊಂಡಿದ್ದು, ಇವರ ಸ್ಥಾನಕ್ಕೆ ಮಂಜಪ್ಪ ಎನ್ನುವರು ಬಂದಿದ್ದಾರೆ. ಆದರೆ, ಮಂಜಪ್ಪ ಅವರು ಕೇಂದ್ರ ಸ್ಥಾನದಲ್ಲಿಲ್ಲ ಎಂದು ಕಚೇರಿ ಮೂಲಗಳು ತಿಳಿಸಿವೆ.

Advertisement

ಸ್ವಯಂ ಜಾಗೃತಿ ಅವಶ್ಯಕ: ನಾಗರಿಕರು ಬಣ್ಣ-ಬಣ್ಣದ ಗಣಪನ ಮೂರ್ತಿಗಳಿಗೆ ಜೋತು ಬಿದ್ದು, ವಿಘ್ನನಿವಾರಕನಿಂದಲೇ ಪರಿಸರಕ್ಕೆ ವಿಘ್ನ ತಂದೊದಗಿಸುವ ಬದಲು ಪರಿಸರ ಸ್ನೇಹಿ ಶುದ್ಧ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದು ಹೆಚ್ಚು ಸೂಕ್ತವಾಗಿದೆ. ಈ ಬಗ್ಗೆ ಸಾರ್ವಜನಿಕರು ಸ್ವಯಂ ಜಾಗೃತರಾಗಿ ಮಣ್ಣಿನ ಗಣೇಶನನ್ನು ಪೂಜಿಸಿ, ಆರಾಧಿಸುವ ಮೂಲಕ ಪರಿಸರ ರಕ್ಷಣೆ, ನೀರಿನ ಮಾಲಿನ್ಯವನ್ನು ತಡೆಯುವತ್ತ ಚಿಂತನೆ ಮಾಡುವುದು ಹೆಚ್ಚು ಅವಶ್ಯಕವಾಗಿದೆ

ಪಿಒಪಿ ಮೂರ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಇದುವರೆಗೂ ಸಂಬಂಧಪಟ್ಟ ಪರಿಸರ ಅಧಿಕಾರಿ ಮತ್ತು ನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಯಾರೂ ಪೊಲೀಸ್‌ ಇಲಾಖೆಯನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಈ ಬಗ್ಗೆ ಮಾಹಿತಿ
ನೀಡಿದರೆ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳುತ್ತದೆ.  ಎನ್‌.ಶಶಿಕುಮಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

„ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next