Advertisement
ತೇಜಸ್ವಿಗೆ 79 ತುಂಬಿದೆ. ಅವರು ಹೋಗಿ ಹತ್ತು ವರುಷಗಳೇ ಕಳೆದಿವೆ. ದಿವಸ ಕಳೆದಂತೆಲ್ಲ ತೇಜಸ್ವಿಯನ್ನು ಕೇಳಿಕೊಂಡು ನಿರುತ್ತರಕ್ಕೆ ಬರುವವರು ಹೆಚ್ಚುತ್ತಲೇ ಇದ್ದಾರೆ. ಆ ರೀತಿಯ ಸ್ಪಂದನೆ. ತೇಜಸ್ವಿ ಹಾಗೆ ಪ್ರೇರೇಪಿಸಿದ್ದರು. ಇವತ್ತಿಗೂ ಹಾಗೇ ಪ್ರೇರೇಪಿಸುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತೆ. ಸಮಾಜದ ಎಲ್ಲ ಸ್ತರದವರೂ ಬರುತ್ತಾರೆ! ಇದು ವಿಶೇಷ. ಗೃಹಿಣಿಯರು, ವಿದ್ಯಾರ್ಥಿನಿಯರಿರಬಹುದು, ಜಡ್ಜ್ ಗಳಿರಬಹುದು, ಅಡ್ವೊಕೇಟ್, ಆಟೋರಿಕ್ಷಾ ಚಾಲಕ, ಟ್ಯಾಕ್ಸಿ ಡ್ರೈವರ್ (ಇವನೂ ಪುಸ್ತಕ ಕೊಂಡಿರುವನಂತೆ) ಲೈನ್‌ಮ್ಯಾನ್, ಆರ್ಟಿಸ್ಟ್, ಸಂಗೀತಗಾರರು, ಪತ್ರಕರ್ತರು, ಸಾಫ್ಟ್ವೇರ್ ಎಂಜಿನಿಯರ್, ವೈದ್ಯರು, ರೈತರು, ಸಾಹಿತಿಗಳು, ಇತ್ಯಾದಿ, ಇತ್ಯಾದಿ ಎಲ್ಲ ಧರ್ಮೀಯರು ಅಭಿಮಾನದಿಂದ ಇಲ್ಲಿಗೆ ಬರುವವರೇ. ಇಲ್ಲಿ ಇವರೆಲ್ಲರನ್ನು ನಾನು ಬೇಕೆಂದೇ ಹೆಸರಿಸುವೆನು. ತೇಜಸ್ವಿಯವರು ತಮ್ಮ ಸೃಜನಾತ್ಮಕತೆಯಿಂದ ದೊಡ್ಡ ಯುವ ಜನತೆಯನ್ನೇ ಸಿದ್ಧಗೊಳಿಸಿದ್ದರು. ಯುವ ಜನಾಂಗಕ್ಕೇ ಮಾದರಿಯಾಗಿ ದಾರಿ ತೋರಿದ್ದರೆಂದರೂ ಅತಿಶಯೋಕ್ತಿ ಆಗಲಾರದು.
Related Articles
Advertisement
ತೇಜಸ್ವಿಯವರನ್ನು ಮಾತಾಡಿಸಲೇ ಬೇಕೆಂದು ಹಠ ಮಾಡಿದನಂತೆ. ಅಮ್ಮ ತೇಜಸ್ವಿಯ ಅಭಿಮಾನಿ. ನೀವು ಏನೇನು ಪುಸ್ತಕಗಳನ್ನು ಓದಿಕೊಂಡಿದ್ದೀರಿ, ಹೇಗೆ ಇಷ್ಟೊಂದು ಬರೆಯಲಿಕ್ಕೆ ಸಾಧ್ಯವಾಯ್ತು, ಹೀಗೆ ತಾಯಿ ಮಗನ ಮಾತುಕತೆ ಮುಂದುವರಿಯಿತು. ಆ ಪುಟಾಣಿ ತೇಜಸ್ವಿಗೊಂದು ಪುಟ್ಟ ಉಡುಗೊರೆಯನ್ನೂ ತಂದಿದ್ದ. ಆನೆ ಮೇಲಿನ ಅಂಬಾರಿ! ನನಗಂತೂ ತುಂಬಾ ಆಶ್ಚರ್ಯವಾಯ್ತು. ತೇಜಸ್ವಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಅವನಿಗೆ ಭೇಷ್ ಎಂದು ಬೆನ್ನುತಟ್ಟಿ, ನೀನು ಹೀಗೇ ಓದುತ್ತಾ ಹೋಗು ಮುಂದೆ ನಿನ್ನ ದಾರಿ ನೀನೇ ಕಂಡುಕೊಳ್ಳುವಿ ಎಂದರು.
ಹೀಗೇ ಒಬ್ಬರು ಬೆಂಗಾಲಿ, ಬೆಂಗಳೂರಿನಲ್ಲಿನ ಉದ್ಯೋಗಿ ಬಂದಿದ್ದರು. ಪರಿಸರದ ಕತೆ ಓದುತ್ತಲೇ ಕನ್ನಡ ಕಲಿತೆ. ಆ ಪರಿಸರ ನೋಡಬೇಕೆಂದು ಬಂದೆ ಎಂದವರು ತೋಟ ಪೂರ್ತಿ ಸುತ್ತಾಡಿ ಹೋದರು.
5ನೇ ತರಗತಿಯಲ್ಲಿ ಓದುತ್ತಿರುವ ವನ್ಯಾಳಿಗೆ ಕರ್ವಾಲೋ ಬಾಯಿಪಾಠವಾಗಿದೆಯಂತೆ!ಬಾಲಚಂದ್ರ ಎನ್ನುವವರು ಸಾಫ್ಟ್ವೇರ್ ಎಂಜಿನಿಯರ್. ಜರ್ಮನಿಯಲ್ಲಿ 4 ವರ್ಷ ಪರಿಸರದ ಬಗ್ಗೆ ಎಂ.ಎಸ್ಸಿ ಮಾಡಿಕೊಂಡು ಹಿಂದಿರುಗಿದವರು. ಈಗ ಶಿರಸಿಯಲ್ಲಿ ಜಮೀನು ಮಾಡಿಕೊಂಡಿದ್ದಾರೆ. ಮಗಳಿಗೆ ತಾಯಿ “ಪರಿಸರದ ಕಥೆ’ ಓದಿ ಹೇಳಿದರಂತೆ. ಅಲ್ಲಿಂದ ವನ್ಯ ತೇಜಸ್ವಿ ಪುಸ್ತಕಗಳನ್ನು ಓದಲು ಶುರು. ತೇಜಸ್ವಿಯ ಪಾತ್ರಗಳೆಲ್ಲ ಅವಳನಾಲಿಗೆಯ ಮೇಲೆ ನಲಿದಾಡುತ್ತಿದ್ದವು. ಅದೇನು,ಇದೇನೆಂದು ಕೇಳುವಳು. ಓದಿ ಓದಿ ಅವಳ ಕಣ್ಣುಗಳು ಸುಸ್ತಾದಂತೆ ಕಂಡವು. ಕನ್ನಡ ಮೀಡಿಯಂ ನಲ್ಲಿ ಓದಿದ ಹುಡುಗಿ. ಆಕೆಯ ಮಾತು ಕೇಳಿದರೆ child prodigy ಇರಬಹುದು ಅನ್ನಿಸಿತು. ಆಕೆ ಚಿತ್ರ ಬರೆಯುವುದರಲ್ಲೂ ನಿಪುಣೆ. ಮೂಡಿಗೆರೆಗೆ ಬರುತ್ತಿದ್ದಂತೆ ಜೇನು ಸೊಸೈಟಿ,ಜೇನುಹುಳ ಎದ್ದಿದ್ದು ಎಲ್ಲ ಅವಳ ಬಾಯಲ್ಲಿ! ಬ್ಯಾಂಡು, ಅಸಡಾಬಸಡಾ ಬೂಡ್ಸು ಕಾಲು ಹಾಕಿದ್ದು ಎಲ್ಲನೂ!ಮಲಾಲಳ ಆತ್ಮಚರಿತ್ರೆ ಪುಸ್ತಕವನ್ನು ಅವಳಿಗೆ ಉಡುಗೊರೆಯಾಗಿ ಕೊಟ್ಟೆ. ನೋಡುತ್ತಿದ್ದಂತೆ ಅವಳಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿದಿಯೆಂದಳು. ಕಾರಿನಲ್ಲಿ ಕೂರುತ್ತಿದ್ದಂತೆ ಓದಲು ಶುರು ಮಾಡಿದಳಂತೆ. ನಮ್ಮ ಮೊಮ್ಮಕ್ಕಳ ಕಡೆಗೆ ಬರ್ತೀನಿ. ಮೊದಲ ಮೊಮ್ಮಗಳು ವಿಹಾಳಿಗೆ 2 ವರ್ಷ 4 ತಿಂಗಳು ತೇಜಸ್ವಿ ಹೋದಾಗ. ಇರಾ ಮತ್ತು ಆರ್ಣ (ಸುಸ್ಮಿತಳ ಮಗಳು) ತೇಜಸ್ವಿ ಹೋದ ನಂತರ ಹುಟ್ಟಿದವರು. ತೇಜಸ್ವಿಗೆ ಮಕ್ಕಳ ಸಂಗ ಸ್ವರ್ಗ ಲೋಕ ತೆರೆದಿಡುತ್ತಿತ್ತು. ವಿಹಾಳನ್ನು ಕೆರೆಪಕ್ಕ ಕೂರಿಸಿಕೊಂಡು ಗಾಳ ಹಾಕುವುದೆಂದರೆ ಅತೀ ಪ್ರೀತಿ. ಮೀನಿಗೆ ಮಂಡಕ್ಕಿ ಹಾಕೆಂದು ಕೊಟ್ರೆ ಅವಳೇ ತಿನ್ನುವಳು ಎನ್ನುವರು. “ಆವತ್ತಿನ’ ಹಿಂದಿನ ದಿನ ಎಂದಿನಂತೆ ಅವಳನ್ನು ಕೆರೆಗೆ ಕರೆ ದೊಯ್ಯಲು ಕರೆದರು. ಆದರೆ ಅವಳೊಪ್ಪಲಿಲ್ಲ. ಅವರೇ ಗಾಳ ಹಾಕಿ ದೊಡ್ಡ ಮೀನು ಹಿಡಿದು ಮನೆ ಬಳಿಗೇ ತಂದು ಅವಳ ಕೈಲಿ ಮೀನನ್ನು ಸವರಿಸಿದರು. ಅವಳನ್ನು ಸಂತೆಗೆ ಕರೆದುಕೊಂಡು ಹೋಗಿ ಮೀನಿನ ಅಂಗಡಿ ಸುತ್ತವೇ ಸುತ್ತು ಹೊಡೆಯುವರಂತೆ ಇಬ್ಬರೂ. ಬಲೇ ಮಜವಾಗಿರುತ್ತೆ ಅನ್ನೋವ್ರು ತೇಜಸ್ವಿ. ನೀರಿನಾಳದಲ್ಲಿ ಮೀನುಗಳು ಜೀವಂತ ನೋಡಲು ಅದೇನು ಆನಂದ! ಆ ಕಲ್ಪನೆ. ಒಮ್ಮೆ 9 ವರ್ಷದ ವಿಹಾ, 4 ವರ್ಷದ ತಂಗಿ ಇರಾ ಮತ್ತು ನಾನು ಜೇಜಸ್ವಿ ಕೋಣೆಗೆ ಹೋದೆವು. ಇಬ್ಬರಿಗೂ ಆಶ್ಚರ್ಯ! ಕುತೂಹಲ ! ಯಾಕಜ್ಜಿ ಅಜ್ಜಯ್ಯ ಪುಸ್ತಕ ಇಟ್ಟಿದ್ದಾರೆ? ಇರಾ ಕೇಳಿದಳು. ಅಜ್ಜಯ್ಯ ಓದಿದ್ರ ಅಜ್ಜಿ? ಹೌದು, ನೀವು ಮಕ್ಕಳು ಓದಿ ಅಂತ ತಾವೂ ಓದಿ ಇಟ್ಟಿದ್ದಾರೆ ಎಂದೆ. “ಏಕೆ ಓದಬೇಕು ಅಜ್ಜಿ?’ ಮರು ಪ್ರಶ್ನೆ. ನೀವು ಪುಸ್ತಕ ಓದಿದ್ರೆ ಒಳ್ಳೆಯವರಾಗಿರ್ತೀರಾ ಎಂದೆ ಯಾಕೆ ಒಳ್ಳೆಯವರಾಗಬೇಕು ಅಜ್ಜಿ? ಉತ್ತರ ಕೊಡಲಾಗದೆ ತೇಜಸ್ವಿ ಮಾಡಿಟ್ಟಿದ್ದ ಬಣ್ಣ, ಬಣ್ಣದ ಒಂದು ಕಚಜಿnಠಿಜಿnಜ ತೋರಿಸಿದೆ. ಅವಳ ಕುತೂಹಲಕ್ಕಾಗಿ. “ಅಜ್ಜಯ್ಯ ಇಷ್ಟೊಂದು ಪುಸ್ತಕ ಓದಿದ್ರಾ ಅಜ್ಜಿ?’ ವಿಹಾ ಕೇಳಿದಳು. “ಹೌದು, ನೀನೂ ಓದಬಲ್ಲೆ. ಪುಸ್ತಕಗಳೇ ನಿಮಗೆ ಅತ್ಯುತ್ತಮ ಗೆಳೆಯರು’ ಎಂದೆ. ಇವೆಲ್ಲ ವಿಹಾಳ ಮನಸ್ಸಿಗೆ ಹೇಗೆ ನಾಟಿದೆ ಎಂದ್ರೆ ಈವತ್ತಿಗೆ ಅವಳು ಓದುವ ಚಟಕ್ಕೆ ಬಿದ್ದಿರುವಳು, ಅವಳಿಗೆ ಅದೆಂತಹ ಏಕಾಗ್ರತೆ! ತೇಜಸ್ವಿ, ಕುವೆಂಪುಗೆ ಇರುವಂತೆ! ತಂಗಿಯರು ಸುತ್ತಮುತ್ತ ಏನೇ ಕೂಗಾಡ್ತಾ ಚುಕ್ಕು ಬುಕ್ಕು ರೈಲು ಬಿಟ್ಟುಕೊಂಡು ಓಡ್ತಿದ್ದರೂ ತನ್ನ ಪಾಡಿಗೆ ಓದ್ತಾ ಇರ್ತಾಳೆ. ಇತ್ತೀಚೆಗೆ ಆಸ್ಟ್ರೇಲಿಯಾದ ಬೆಸ್ಟ್ ಸೆಲ್ಲರ್ 300 ಪುಟದ್ದು The happiest Refugee by ANH DO ಒಂದೇ ದಿನದಲ್ಲಿ ಓದಿ ಮುಗಿಸಿದಳು. ಅಷ್ಟೇ ಆಸಕ್ತಿಯಿಂದ ಡೈನಾಸರಸ್ ಬಗ್ಗೆಯೂ ಪರಿಸರ ಇಕಾಲಜಿ ಬಗ್ಗೆಯೂ ಓದುವಳು. ಕಳೆದ ತಿಂಗಳು ಅಥೆನ್ಸ್‌ಗೆ ಹೋಗಿ ಬಂದಳು. ಜಗತ್ತಿನೆಲ್ಲೆಡೆಯಿಂದ 1500 ಮಕ್ಕಳು ವರ್ಲ್ಡ್ ಸ್ಕಾಲರ್ಸ್ ಕಪ್‌ನಲ್ಲಿ ಭಾಗವಹಿಸಲು ಬಂದಿದ್ದರಂತೆ, ಇವಳು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ವೈಯಕ್ತಿಕ ಮೆಡಲನ್ನೂ ಪಡೆದುಕೊಂಡಿದ್ದಲ್ಲದೇ, ಟೀಮ್ ಈವೆಂಟ್‌ನಲ್ಲೂ ಮೆಡಲ್‌ಗಳನ್ನು ಪಡೆದಿರುವಳು. ಇದು, ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ತೀರ ಇತ್ತೀಚೆಗೆ ಒಬ್ಬ ಬಡಪಾಯಿ ಹುಡುಗ ಮನೆಗೆ ಬಂದ. ನಾನು ಹೊಳೇನರಸೀಪುರದವನು, ದೇವೇಗೌಡರ ಊರಿನವನೆಂದು ಪರಿಚಯಿಸಿಕೊಂಡನು. ಈಗಷ್ಟೇ ಎಲೆಕ್ಟ್ರಿಕಲ್ ಡಿಪ್ಲೊಮಾ ಮಾಡ್ಕೊಂಡು ಲೈನ್‌ಮನ್ ಆಗಿರುವೆನೆಂದ. ಇಲ್ಲಿ ತೇಜಸ್ವಿ ಪುಸ್ತಕ ಕೊಳ್ಳಲು ಸಿಗುತ್ತದೆಂದು ಯಾರೋ ಹೇಳಿದ್ದು, ಕೊಳ್ಳಲು ಬಂದಿರುವೆನೆಂದ. “ನೀನು ಇವರ ಪುಸ್ತಕ ಓದಿರುವೆಯಾ?’ ಕೇಳಿದೆ. ಈಗ ಓದಲು ಶುರುಮಾಡಿಕೊಳ್ಳುವೆ. ಅವರ ಬಗ್ಗೆ ನನಗೆ ತುಂಬಾ ಗೊತ್ತು ಎಂದ. “ಅದು ಹೇಗೆ?’ ಅಂದಿದ್ದಕ್ಕೆ, “ನಾವು ವಿದ್ಯಾರ್ಥಿಯಾಗಿದ್ದಾಗ ಬೆಳಗ್ಗಿನ ಹೊತ್ತು ತರಗತಿಯಲ್ಲಿನ ಪಾಠ ಪಠ್ಯಕ್ಕೆ ಗಮನ ಕೊಡಬೇಕಿತ್ತು. ಸಂಜೆಯ ನಂತರ ದೀಪದ ಲೈಟು ಕಂಬದ ಬೆಳಕಿನಡಿಯಲ್ಲಿ ಕಲೆತು ಓಉಖ ಮಾಡಿಕೊಂಡಿದ್ದ ನಮ್ಮ ಉಪಾಧ್ಯಾಯರು ತೇಜಸ್ವಿ ಬಗ್ಗೆ ಸಮಗ್ರವಾಗಿ ಮಾತನಾಡುತ್ತಿದ್ದರು. ಮತ್ತು ಅವರ ಯಾವುದಾದರೂ ಒಂದು ಪುಸ್ತಕ ಓದುತ್ತಿದ್ದರು. ಚಿದಂಬರ ರಹಸ್ಯ ಕೇಳಿಸಿಕೊಂಡಿರುವೆನು. ನಾವು ಸುಮಾರು 27 ಹುಡುಗರು ಅಲ್ಲಿ ಸೇರಿಕೊಳ್ಳುತ್ತಿದ್ದೆವು. ಯಾರು ಬೇಕಾದರೂ ಬರಬಹುದಿತ್ತು ಅಲ್ಲಿಗೆ.’ ಎಂದನು.
“ತೇಜಸ್ವಿಯವರ ಹಲವು ಹವ್ಯಾಸಗಳ ಬಗ್ಗೆಯೂ ನಮ್ಮ ಮೇಷ್ಟ್ರು ಮಾತಾಡಿದ್ದರು. ಫೋಟೋಗ್ರಫಿಯ ಬಗ್ಗೆಯೂ ಹೇಳಿದ್ದರು. ನೀವೂ ತೇಜಸ್ವಿಯವರಂತೆ ಫೋಟೋಗ್ರಾಫರ್ ಆಗಬಹುದು’ ಎಂದಿದ್ದರು! ಅವನ ಈ ಎಲ್ಲಾ ಮಾತುಗಳನ್ನು ಕೇಳಿ ನನ್ನ ಕಣ್ಣು ತುಂಬಿ ಬಂತು. ಕೊನೆಯದಾಗಿ, ಕೃಷಿ ವಿಶ್ವವಿದ್ಯಾಲಯದ ಸುಮಾರು 17 ಪಿ.ಎಚ್.ಡಿ., ವಿದ್ಯಾರ್ಥಿನಿಯರು, ತಮ್ಮ ಪ್ರೊಫೆಸರ್ ಮತ್ತು ಗೈಡ್ ಶ್ರೀ ಬೆಳವಾಡಿಯವರ ಜೊತೆಗೆ ನಮ್ಮಲ್ಲಿಗೆ ಬಂದರು. ಅದೂ ಇದೂ ಮಾತಾಯ್ತು. ನಮ್ಮಲ್ಲಿರುವ ಡೌ ಆರ್ಕಿಡ್, ಬೀ ಆರ್ಕಿಡ್ ಮುಂತಾದ ಅನೇಕ ಅಪರೂಪದ ಸಸ್ಯಗಳನ್ನೂ ನೋಡಿದ್ದಾಯ್ತು. ಇನ್ನೇನು ಹೊರಡುವುದೆಂದು ಅಂಗಳದಲ್ಲಿ ನಿಂತರು. ಬೆಳವಾಡಿಯವರು ನಮ್ಮ ಮನೆ ವರಾಂಡಾದಲ್ಲಿ ನಿಂತು ತೇಜಸ್ವಿಯವರ ಮಾತೊಂದನ್ನು ಹೇಳ್ಬೇಕೆಂದು ಶುರು ಮಾಡಿಕೊಂಡರು.
ನಾನೂ ಅಲ್ಲೇ ನಿಂತಿದ್ದೆ. ಬೆಳವಾಡಿಯವರು ಕೀಟ ತಜ್ಞರು, ಸುಮಾರು ವರ್ಷಗಳ ಹಿಂದೆ ಅಗ್ರಿಕಲ್ಚರ್ ಯೂನಿವರ್ಸಿಟಿಗೆ ಸೇರಿರುವ ಮೂಡಿಗೆರೆ ಹ್ಯಾಂಡ್ ಪೋಸ್ಟ್‌ನಲ್ಲಿರುವ ರೀಜನಲ್ ರೀಸರ್ಚ್ ಇನ್‌ಸ್ಟಿಟ್ಯೂಟ್(ಆರ್.ಆರ್.ಎಸ್)ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ತೇಜಸ್ವಿ ಆರ್.ಆರ್.ಎಸ್‌ನಿಂದ ಒಂದಷ್ಟು ಏಲಕ್ಕಿ ಗಿಡಗಳನ್ನು ತಂದು ನಮ್ಮ ತೋಟದಲ್ಲಿ ನೆಟ್ಟಿದ್ದರು. ಕೆಲಸ ಸಮಯದ ನಂತರ ನಿರುತ್ತರ ರಸ್ತೆ ಕಡೆಯಿಂದ ಮೇನ್ ರೋಡಿಗೆ ಸ್ಕೂಟರ್‌ನಲ್ಲಿ ಹೋಗ್ತಾ ತಿರುವು ತಗೊಂಡಾಗ ಬೆಳವಾಡಿಯವರನ್ನು ನೋಡಿ ತೇಜಸ್ವಿ ಗಕ್ಕನೆ ಬ್ರೇಕ್ ಹಾಕಿದ್ರಂತೆ. ರೀ ಬೆಳವಾಡಿ, ನಿಮ್ಮಲ್ಲಿಂದ ತಂದ ಏಲಕ್ಕಿ ಗಿಡಗಳು ನನ್ನವು ಯಾಕೋ Dull ಆಗಿದಾವಲ್ರೀ . ನೀವು
ಹೇಳಿದ್ದಂತೆಯೇ ಎಲ್ಲಾ ಕೆಲಸ ಮಾಡಿದ್ದೀನಿ, ಅಂದ್ರಂತೆ. ಇವರಿಗೆ ಏನಪ್ಪಾ ಉತ್ತರ ಹೇಳ್ಳೋದೆಂದು ಅವರು ಯೋಚನೆ ಮಾಡ್ತಿರುವಾಗ ಆ ಕಡೆಯಿಂದ ಶಾಂತಪ್ಪ ಎನ್ನುವ ತಜ್ಞರು ಬಂದರು. ಅವರೂ ಅಲ್ಲಿ ನಿಂತರು. “ಇವರನ್ನು ಕೇಳಿ ಸಾರ್, ಅದರಲ್ಲೇ ತಜ್ಞರು’ ಎಂದರಂತೆ ಬೆಳವಾಡಿ. “ಅದೇನೂ ಇಲ್ಲ ಸಾರ್, ಏಲಕ್ಕಿ ಬಗ್ಗೆನೇ ನಾನು ಪಿ.ಎಚ್.ಡಿ ಮಾಡಿರೋದು. ನನ್ನ ಪ್ರಾಜೆಕ್ಟ್ ವರ್ಕ್ ಪ್ರಕಟಗೊಂಡಿದೆ. ಆ ಪುಸ್ತಕ ತಂದು ಕೊಡ್ತೀನಿ, ನೀವು ಒಮ್ಮೆ ಓದ್ಕೊಂಡು ಬಿಡಿ ಸಾರ್, ನಿಮ್ಗೆà ಎಲ್ಲಾ ತಿಳಿಯುತ್ತೆ ಸಾರ್’ ಅಂದ್ರಂತೆ.”ಅದು ಸರಿ ಮಿಸ್ಟರ್ ಶಾಂತಪ್ಪ, ಓದಿಕೊಂಡ್ರೆ ನಿಮಗೂ- ನನಗೂ ಅರ್ಥವಾಗುತ್ತೆ, ಆದ್ರೆ ಗಿಡಗಳಿಗೆ ಹೇಗೆ ಸಾರ್ ತಿಳಿಸೋದು?’ ಎಂದು ನಿಧಾನವಾಗಿ ತೇಜಸ್ವಿ ಹೇಳಿದರಂತೆ. ಎಲ್ಲರಿಗೂ ನಗು ತಡೆಯಲಾಗಲಿಲ್ಲ. ನಾನು ಅಡುಗೆ ಮನೆ ಕಡೆ ಹೊರಟೆ. ಅವರೆಲ್ಲಾ ತೋಟಗಾರಿಕಾ ಕಾಲೇಜಿನ ಕಡೆ ಹೊರಟರು.