ಪಣಜಿ: ಪಣಜಿ-ಮಡಗಾಂವ್ ಹೆದ್ದಾರಿ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ಗೋವಾ ಮೆಡಿಕಲ್ ಕಾಲೇಜಿಗೆ (ಬಾಂಬೋಲಿಂ) ಹೋಗುವ ಸರ್ವೀಸ್ ರಸ್ತೆ ಜಲಾವೃತಗೊಂಡಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಸದ್ಯ ಮಳೆ ಕೊಂಚ ಬಿಡುವು ನೀಡಿದ ಬಳಿಕ ಗೋವಾ ವೈದ್ಯಕೀಯ ಮಹಾವಿದ್ಯಾಲಯದ ಸರ್ವಿಸ್ ರಸ್ತೆಯಲ್ಲಿ ನೀರು ಕಡಿಮೆಯಾಗಿ ರಸ್ತೆಯಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿದೆ. ಆದರೆ ಮತ್ತೆ ಮಳೆ ಆರಂಭವಾದರೆ ಅರ್ಧ ಗಂಟೆ ರಸ್ತೆಯಲ್ಲಿ ನೀರು ಹರಿಯುತ್ತದೆ.
ರಸ್ತೆ ಜಲಾವೃತಗೊಂಡು ಆಂಬ್ಯುಲೆನ್ಸ್‍ಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಜತೆಗೆ ದ್ವಿಚಕ್ರ ವಾಹನಗಳ ಸೈಲೆನ್ಸರ್‍ಗಳು ನೀರಿನಿಂದ ಮುಚ್ಚುತ್ತಿವೆ. ಸರ್ಕಾರ ತೆರಿಗೆದಾರರ ಹಣವನ್ನು ಸರಿಯಾಗಿ ಬಳಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೂ, ತೆರಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಂಬೋಲಿಯಲ್ಲಿ ಮುಳುಗಡೆಯಾದ ಸರ್ವೀಸ್ ರಸ್ತೆಯನ್ನು ಶಾಸಕ ವಿರೇಶ್ ಬೋರ್ಕರ್ ಅವರು ಪರಿಶೀಲಿಸಿ, ರಸ್ತೆಯಲ್ಲಿ ನೀರು ಸಂಗ್ರಹಗೊಂಡಿದ್ದು, ಸರ್ಕಾರ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ರಸ್ತೆ ಸಂಚಾರಕ್ಕೆ ಅನುಕೂಲವಾಗುವಂತೆ ಬಾಂಬೋಲಿಂನಲ್ಲಿ ಭೂಗತ ರಸ್ತೆ ನಿರ್ಮಿಸಲಾಗಿದೆ. ಆದರೆ, ಭೂಗತ ರಸ್ತೆಯನ್ನು ಬಳಸದೆ ಸರ್ವಿಸ್ ರಸ್ತೇಯನ್ನೇ ಬಳಸಲಾಗುತ್ತಿದೆ. ಅದೇ ರೀತಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಗೋಮೆಕಾಟ್‍ಗೆ ಭೇಟಿ ನೀಡುತ್ತಾರೆ, ಈ ಭಾಗದಲ್ಲಿ ಸೂಕ್ತ ಬಸ್ ನಿಲ್ದಾಣಗಳ ಅವಶ್ಯಕತೆ ಇದೆ. ರಸ್ತೆ ಮಧ್ಯದಲ್ಲಿಯೇ ಬಸ್ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಕೂಡ ಪ್ರತಿಪಕ್ಷಗಳು ಸರ್ಕಾರವನ್ನು ಆಗ್ರಹಿಸಿವೆ.