ಬೆಳ್ಮಣ್: ಮುಂಡ್ಕೂರು ಗ್ರಾಮದ ಪಂಚಾಯತ್ ರಸ್ತೆಯಿಂದ ಕಜೆ ಮಾರಿಗುಡಿ ರಸ್ತೆಯ ಡಾಮರು ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಮಾರಿಗುಡಿಯ ಸುಮಾರು 3.60 ಮೀ. ಉದ್ದದ ರಸ್ತೆಯ ಅಭಿವೃದ್ದಿಗಾಗಿ ಸುಮಾರು 74.90 ಲಕ್ಷ ರೂ. ಬಿಡುಗಡೆಯಾಗಿದ್ದು
ಕಾಮಗಾರಿ ಭರದಿಂದ ನಡೆಯುತ್ತಿತ್ತು. ಗುರುವಾರ ಕಾಮಗಾರಿ ನಡೆಸುತ್ತಿದ್ದ ರಸ್ತೆಯ ಬಳಿಯ ಗ್ರಾಮಸ್ಥರು ಸೇರಿ ಗುತ್ತಿಗೆದಾರರು ಕಳಪೆ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶವನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ತೆಳುವಾಗಿ ಡಾಮರು ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯವನ್ನು ಗುತ್ತಿಗೆದಾರರು ಮಾಡುತ್ತಿದ್ದು ಕೆಲವೊಂದು ಕಡೆಗಳಲ್ಲಿ ಈ ಹಿಂದೆ ಇದ್ದ ರಸ್ತೆಯ ಡಾಮರೂ ಗೋಚರಿಸುತ್ತದೆ ಹಾಗೂ ರಸ್ತೆಯ ಕಾಮಗಾರಿಯ ವೇಳೆಯಲ್ಲಿ ಯಾವುದೇ ಚರಂಡಿಯನ್ನು ನಿರ್ಮಿಸಲಿಲ್ಲ, ಮೋರಿಗಳನ್ನು ದುರಸ್ಥಿ ಮಾಡದೆ ಕಾಟಾಚಾರಕ್ಕೆ ರಸ್ತೆಯ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಸ್ಥಳೀಯ ಜನಪ್ರತಿನಿ ಧಿಗಳಿಗೂ ಈ ಬಗ್ಗೆ ದೂರನ್ನು ಗ್ರಾಮಸ್ಥರು ನೀಡಿದ್ದಾರೆ. ಈ ರಸ್ತೆಯ ಕಾಮಗಾರಿ ಕಾನೂನು ರೀತಿಯಲ್ಲೇ ನಡೆಯುತ್ತಿದೆ ಯಾವುದೇ ಅನುಮಾನಗಳಿದ್ದರೆ ಕೂಡಲೇ ಕಾಮಗಾರಿಯನ್ನು ನಿಲ್ಲಿಸಿ ಎಂದು ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಎಂಜಿನಿಯರ್ ಹೇಳಿದ್ದಾರೆ.