ಬಾಗೇಪಲ್ಲಿ: ತಾಲೂಕಿನ ಚೇಳೂರು ಪಟ್ಟಣದ ಮುಖ್ಯ ರಸ್ತೆಯ ದ್ವಿಪಥ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಅತ್ಯಂತ ಕಳಪೆ ಗುಣಮಟ್ಟದಿಂದ ನಿರ್ವಹಿಸಿದ್ದು, ರಸ್ತೆಗೆ ಹಾಕಿರುವ ಟಾರ್ 5 ದಿನದಲ್ಲೇ ಕಿತ್ತು ಬರುತ್ತಿದ್ದರೂ, ಕಳಪೆ ಕಾಮಗಾರಿ ನಿಯಂತ್ರಿಸಿ ಗುತ್ತಿಗೆದಾರರ ವಿರುದ್ಧ ಕಾನೂನಿನ ಚಾಟಿ ಬೀಸಬೇಕಾಗಿರುವ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೂತನ ತಾಲೂಕುನ್ನಾಗಿ ಘೋಷಣೆ ಮಾಡಿ ನೂತನ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಚೇಳೂರು ಪಟ್ಟಣದಲ್ಲಿ 1 ಕಿ.ಮೀ. ಉದ್ದದ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಸರ್ಕಾರ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕಾಮಗಾರಿಗೆ ಅನುಮೋದನೆ ನೀಡಿದೆ.
ಹಳೆ ರಸ್ತೆಗೆ ಹಾಕಿರುವ ಡಾಂಬರನ್ನು ತೆಗೆದು ಕನಿಷ್ಠ 2 ಅಡಿ ರಸ್ತೆ ಹಗೆದು, ಹಗೆದ ರಸ್ತೆಗೆ ಗುಣಮಟ್ಟದ ಮೆಟ್ಟಲಿಂಗ್ ಮಾಡಿ ನಂತರ ಟಾರ್ ಹಾಕಬೇಕೆಂದು ಕಾಮಗಾರಿ ಎಸ್ಟಿಮೇಟ್‌ನ್ನು ಸಿದ್ಧಪಡಿಸಿ ಗುತ್ತಿಗೆದಾರನಿಗೆ ಟೆಂಡರ್ ನೀಡಲಾಗಿದೆ. ಆದರೆ, ಗುತ್ತಿಗೆದಾರರು ಮಣ್ಣಿನ ರಸ್ತೆ ಮೇಲೆ ಕಪ್ಪು ಬಣ್ಣದ ಲೇಪನವನ್ನು ಹಾಕಿ ಪೇಪರ್ ದಪ್ಪದಷ್ಟು ಟಾರ್ ರಸ್ತೆಗೆ ಹಾಕಿಕೊಂಡು ಕಾಮಗಾರಿಗೆ ಮಾಡಿ ಮುಗಿಸಿದ್ದಾರೆ ಎಂದು ಸ್ಥಳೀಯರು ದೂರಿದರು.
ಕಾಮಗಾರಿ ಕಳಪೆ: ರಾಜ್ಯ ಹೆದ್ದಾರಿ ಗುಣಮಟ್ಟದ ರಸ್ತೆ ಕಾಮಗಾರಿಗೆ ಉಪಯೋಗಿಸುತ್ತಿರುವ ಸಾಮಗ್ರಿಗಳ ಗುಣಮಟ್ಟ, ಟಾರ್ ಮಿಕ್ಸಿಂಗ್ ಪ್ರಮಾಣದ ಗುಣಮಟ್ಟ ಸೇರಿ ಇತರೆ ಸಾಮಗ್ರಿಗಳ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆ ಎಂಜನಿಯರ್‌ಗಳು ಸ್ಥಳದಲ್ಲೇ ಇದ್ದು ಪರಿಶೀಲಿಸಿ ಗುಣಮಟ್ಟದ ಖಾತ್ರಿ ಪಡಿಸಿಕೊಂಡ ನಂತರ ರಸ್ತೆಗೆ ಟಾರ್ ಹಾಕುವುದು ಇಲಾಖೆ ನಿಯಮವಾಗಿದೆ. ಆದರೆ, ಸ್ಥಳದಲ್ಲಿ ಗುಣಮಟ್ಟ ಖಾತ್ರಿ ಪಡಿಸಿಕೊಳ್ಳುವ ಎಂಜನಿಯರ್, ಗುತ್ತಿಗೆದಾರರು ಇಲ್ಲದಿದ್ದರೂ ಕೂಲಿ ಕಾರ್ಮಿಕರೇ ತಮಗೆ ಇಷ್ಟ ಬಂದಂತೆ ಟಾರ್ ಹಾಕಿಕೊಂಡು ಕಾಮಗಾರಿ ಮಾಡುತ್ತಿದ್ದಾರೆ. ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಕಾರಣ ಹಲವು ಕಡೆ ಈಗಾಗಲೇ ಕಿತ್ತು ಬರುತ್ತಿದ್ದು, ಮಳೆಗಾಲ ಪ್ರಾರಂಭವಾದರೆ ರಸ್ತೆಗೆ ಹಾಕಿರುವ ಟಾರ್ ಸಂಪೂರ್ಣ ಕಿತ್ತು ಬರುವುದರಲ್ಲಿ ಅನುಮಾನ ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಯಾವುದೇ ಪ್ರಯೋಜನವಿಲ್ಲ: ಚೇಳೂರು ಗ್ರಾಪಂ ಮಾಜಿ ಅಧ್ಯಕ್ಷ ಕರೆ ಶ್ರೀರಾಮಪ್ಪ ಮಾತನಾಡಿ, ದ್ವಿಪಥ ರಸ್ತೆಗೆ ಎಸ್ಟಿಮೇಟ್‌ನಲ್ಲಿ ಸೂಚಿರುವ ಆಳತೆಯಂತೆ ಜಲ್ಲಿ ಮತ್ತು ಟಾರ್ ಹಾಕಿಲ್ಲ, ಮಣ್ಣಿನ ರಸ್ತೆಯ ಮೇಲೆ ಪೇಪರ್ ದಪ್ಪದಷ್ಟು ಮಾತ್ರ ಟಾರ್ ಹಾಕಿದ್ದಾರೆ. ಕಳೆಪೆ ಕಾಮಗಾರಿ ಬಗ್ಗೆ ದಾಖಲೆ ಸಮೇತ ಲೋಕೋಪಯೋಗಿ ಇಲಾಖೆಯಲ್ಲಿ ದೂರು ಸಲ್ಲಿಸಿ, ಅಧಿಕಾರಿಗಳ ಗಮನಕ್ಕೆ ತಂದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿಲ್ಲ. ಕಳಪೆ ಕಾಮಗಾರಿ ಭ್ರಷ್ಟಾಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ತಲೆಕೆಡಿಸಿಕೊಂಡಿಲ್ಲ. ರಸ್ತೆ ಕಾಮಗಾರಿ ಅನುದಾನ ಜನಪ್ರತಿನಿಧಿಗಳ, ಗುತ್ತಿಗೆದಾರರ, ಇಲಾಖೆ ಅಧಿಕಾರಿಗಳ ಜೇಬು ತುಂಬಲಿದ್ದು, ಕಾಮಗಾರಿಯಿಂದ ಭ್ರಷ್ಟರಿಗೆ ಅನುಕೂಲವೇ ಹೊರತು ನಾಗರಿಕರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಆರೋಪಿಸಿದರು.