Advertisement

ಶಿಕ್ಷಣ ಸಚಿವರ ಜಿಲ್ಲೆಯಲ್ಲೇ ಶಾಲಾ ಕಟ್ಟಡ ಶಿಥಿಲ : ದುರಸ್ತಿಗೊಳಿಸಲು ಗ್ರಾಮಸ್ಥರ ಆಗ್ರಹ

04:42 PM Dec 09, 2021 | Team Udayavani |

ಹುಳಿಯಾರು : ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ತವರು ಜಿಲ್ಲೆಯ ಸರ್ಕಾರಿ ಶಾಲಾ ಕಟ್ಟಡದ ದುಸ್ಥಿತಿ ಹೇಳ ತೀರದಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಸರ್ಕಾರಿ ಶಾಲೆಗಳು ದುರಸ್ತಿಗೆ ಕಾಯುತ್ತಿವೆ. ಅದರಲ್ಲೂ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಕೆಂಕೆರೆ-ಗೊಲ್ಲರ ಹಟ್ಟಿಯ ಶಾಲೆ ದುರಸ್ತಿ ಮಾಡಲಾಗದಂತಹ ಸ್ಥಿತಿಗೆ ತಲುಪಿದೆ. ಆದರೂ ಶಿಕ್ಷಣ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ.

Advertisement

ಹೌದು, ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಹಳ್ಳಿ-ಹಳ್ಳಿಗೂ ಶಾಲೆಗಳನ್ನು ನೀಡಿದಂತೆ ಕೆಂಕೆರೆ-ಗೊಲ್ಲರಹಟ್ಟಿಗೂ ಪ್ರಾಥಮಿಕ ಶಾಲೆ ನೀಡಿದೆ. ಆದರೆ, ಶಾಲೆ ಆರಂಭಿಸಿ ಹೋದ ಅಧಿಕಾರಿಗಳು, ಜನಪ್ರತಿನಿಧಿಗಳು ಪುನಃ ಅತ್ತ ತಿರುಗಿಯೂ ನೋಡಿಲ್ಲ. ಶಾಲೆಗಳ ಕೊಠಡಿಗಳು ದನ-ಕುರಿಗಳನ್ನೂ ಕಟ್ಟಲೂ ಆಗದಂತಹ ದುಸ್ಥಿತಿಗೆ ತಲುಪಿವೆ. ಯಾವ ಕ್ಷಣದಲ್ಲಿಯಾದರೂ ಬೀಳುವ ಹಂತದಲ್ಲಿರುವ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಹೆದರುತ್ತಿದ್ದು, ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ.

32 ವಿದ್ಯಾರ್ಥಿಗಳು ಅಭ್ಯಾಸ: ಈ ಶಾಲೆಯಲ್ಲಿ 1ರಿಂದ 5 ನೇ ತರಗತಿಯ 32 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಗೊಲ್ಲಹಟ್ಟಿ ಸೇರಿದಂತೆ ಅಕ್ಕಪಕ್ಕದ ತೋಟದ ಮನೆಗಳ ಮಕ್ಕಳೂ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 1 ರಿಂದ 5 ನೇ ತರಗತಿಗೆ ಇರೋದೆ ಎರಡು ಕೊಠಡಿಗಳು. ಅವೂ ಕೂಡ ಶಿಥಿಲಾವಸ್ಥೆಗೆ ತಲುಪಿವೆ. ಪರಿಣಾಮ ಗ್ರಂಥಾಲಯ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದ
ರಾದರೂ, ಅದು ಸಹ ಶಿಥಿಲವಾಗಿದೆ. ಅಷ್ಟೇ ಅಲ್ಲ ಬಿಸಿಯೂಟದ ಅಡುಗೆ ಕೋಣೆ ಸಹ ಶಿಥಿಲವಾಗಿದೆ. ಸಣ್ಣ ಮಳೆಯಾದರೂ ಸೋರುತ್ತವೆ. ಚಾವಣಿ ಒಳಮೈ ಉದುರಿ ಬೀಳುತ್ತಿದೆ. ಕೊಠಡಿಗಳ ಕಿಟಕಿಗಳು ಮುರಿದು ಹೋಗಿವೆ. ಹೆಂಚುಗಳು ಹೊಡೆದಿವೆ. ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯಾರ್ಥಿಗಳು, ಅಡುಗೆಯವರು, ಶಿಕ್ಷಕರು ಕಟ್ಟಡ ಕುಸಿಯುವ ಭೀತಿ ಎದುರಿಸುತ್ತಿದ್ದಾರೆ.

ಇದನ್ನೂ ಓದಿ : ಜಾಗತಿಕ ಟ್ರೆಂಡ್:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 157 ಅಂಕ ಏರಿಕೆ, 17,000 ಗಡಿದಾಟಿದ ನಿಫ್ಟಿ

ಭಯದ ವಾತವರಣದಲ್ಲೇ ಬೋಧನೆ: ಮಳೆಗಾಲ ದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ತರಗತಿಯಲ್ಲಿ ನೀರು ಸೋರುತ್ತದೆ. ಮಳೆ ನಿಲ್ಲುವವರೆಗೆ ಅಲ್ಪ-ಸ್ವಲ್ಪ ಸೋರದೆ ಇರುವ ಕೋಣೆಯ ಯಾವುದಾದ ರೊಂದು ಮೂಲೆಯಲ್ಲಿ ಮಕ್ಕಳು ಪುಸ್ತಕ, ಚೀಲಗಳನ್ನು ಹಿಡಿದು ನಿಲ್ಲಬೇಕಾಗಿದೆ. ಒಟ್ಟಾರೆ, ಶಾಲೆಯ ಎಲ್ಲ ಕೋಣೆಗಳು ಸಂಪೂರ್ಣ ಶಿಥಿಲಗೊಂಡು ತರಗತಿ ನಡೆಸಲು ಯೋಗ್ಯವಾಗಿರದಿದ್ದರೂ ಅನಿವಾರ್ಯ ವಾಗಿ ಭಯದ ವಾತವರಣದಲ್ಲೇ ಮಕ್ಕಳಿಗೆ ಬೋಧನೆ ನಡೆಯುತ್ತಿದೆ. ಈ ಬಗ್ಗೆ ಪ್ರತಿವರ್ಷ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಶಿಥಿಲಗೊಂಡ ಶಾಲೆಯ ಕಟ್ಟಡ ನೆಲಸಮಗೊಳಿಸಿ ಪ್ರಸ್ತುತ ಇರುವ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಬೇಕಿದೆ. ಇದಕ್ಕೆ ಶಿಕ್ಷಣ ಸಚಿವರು
ಮುಂದಾಗುವರೇ ಕಾದು ನೋಡಬೇಕಿದೆ..

Advertisement

ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಸರ್ಕಾರ ಬೊಬ್ಬೆಯೊಡೆಯು ತ್ತದೆ. ಆದರೆ, ಶಾಲೆಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸದೆ ಕಡೆಗಡಿಸುತ್ತದೆ. ಖಾಸಗಿ ಶಾಲೆಗೆ ಕಳುಹಿಸುವ ಸಾಮರ್ಥ್ಯವಿದ್ದರೂ, ಸರ್ಕಾರಿ ಶಾಲೆಯ ಅಭಿಮಾನದಿಂದ ನನ್ನ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದೇನೆ. ಆದರೆ, ಇಲ್ಲಿನ ಪರಿಸ್ಥಿತಿ ನೋಡಿದರೆ ಯಾಕಾದ್ರೂ ಕಳುಹಿಸುತ್ತಿದ್ದೇನೋ
ಎನ್ನುವಂತ್ತಾಗುತ್ತಿದೆ.
– ಎಂ.ಜಿ.ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next