ಬೆಂಗಳೂರು: ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿ ಪೂನಾ ಒಡಂಬಡಿಕೆಗೆ ಸಹಿ ಹಾಕಿದ ಡಾ.ಬಿ.ಆರ್.ಅಂಬೇಡ್ಕರ್, ಆ ದಿನವನ್ನು ತಳ ಸಮುದಾಯಗಳ ಪಾಲಿನ ಕರಾಳ ದಿನ ಎಂದು ಕರೆಯುತ್ತಿದ್ದರು ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ 1932 ಪೂನಾ ಒಡಂಬಡಿಕೆ ಅಂದು-ಇಂದು? ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಳ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ಸವರ್ಣೀಯರಿಗೆ ದ್ವಿಮತದಾನ ಸೇರಿ ಹಲವು ಹಕ್ಕುಗಳಿಗೆ ಬೇಡಿಕೆ ಇಟ್ಟಿದ್ದರು.
ಆದರೆ, ದ್ವಿಮತದಾನದಿಂದ ವ್ಯವಸ್ಥೆಯಲ್ಲಿ ಅಸಮಾನತೆ ಉಂಟಾಗುತ್ತದೆ ಎಂದು ಅಂಬೇಡ್ಕರ್ ಅವರ ಬೇಡಿಕೆಗಳಿಗೆ ಒಪ್ಪದ ಗಾಂಧೀಜಿ, ಉಪವಾಸ ಸತ್ಯಾಗ್ರಹ ಆರಂಭಿಸಿದರು. ಗಾಂಧೀಜಿ ಸತ್ಯಾಗ್ರಹ ತೀವ್ರವಾಗುತ್ತಿದ್ದಂತೆ ಅಂದಿನ ಪ್ರಮುಖ ಮುಖಂಡರು ಬೇಡಿಕೆ ಹಿಂಪಡೆಯಲು ಒತ್ತಡ ಹಾಕಿದರು. ಇದಕ್ಕೆ ಕಟ್ಟುಬಿದ್ದು ಅಂಬೇಡ್ಕರ್ ಒಲ್ಲದ ಮನಸ್ಸಿನಿಂದ ಪೂನಾ ಒಪ್ಪಂದಕ್ಕೆ ಸಹಿ ಹಾಕಿ ನಮ್ಮ ಜನರ ಪಾಲಿನ ಕರಾಳ ದಿನ ಕರೆದಿದ್ದರು ಎಂದು ಹೇಳಿದರು.
ದಲಿತರಿಗೆ ರಾಜಕೀಯ ಸ್ಥಾನಮಾನ ಸಿಕ್ಕರೆ ಮಾತ್ರ ಅಭಿವೃದ್ಧಿ ಸಾಧ್ಯವೆಂದು ತಿಳಿದಿದ್ದ ಅಂಬೇಡ್ಕರ್ ದ್ವಿಮತದಾನಕ್ಕೆ ಬೇಡಿಕೆ ಇಟ್ಟಿದ್ದರು. ಅದು ಸಾಧ್ಯವಾಗದೆ ಕೇವಲ ಚುನಾವಣಾ ಮೀಸಲು ಕ್ಷೇತ್ರ ಅವಕಾಶ ಲಭ್ಯವಾಯಿತು. ಆದರೆ, ಆ ಕ್ಷೇತ್ರಗಳಲ್ಲಿ ಇಂದಿಗೂ ಗೆಲುವು ಸಾಧಿಸಲು ಮೇಲ್ವರ್ಗದವರ ಕೈಚಾಚಬೇಕಿದೆ. ಅವರ ವಿರೋಧ ಕಟ್ಟಿಕೊಂಡು ಗೆದ್ದವರೇ ಇಲ್ಲ.
ಇದಕ್ಕೆ ಮುಖ್ಯಕಾರಣ ಒಗ್ಗಟ್ಟಿನ ಕೊರತೆ. ಇನ್ನು ರಾಜ್ಯದಲ್ಲಿ 36 ಮೀಸಲು ಕ್ಷೇತ್ರಗಳಿದ್ದು, ಅವುಗಳಿಂದ ಆಯ್ಕೆಯಾಗಿ ಬಂದವರು ಒಗ್ಗಟ್ಟಿನಿಂದ ನಿಂತರೆ ತಳ ಸಮುದಾಯಗಳ ಅಭಿವೃದ್ಧಿ ಕಷ್ಟವೇನಲ್ಲ ಎಂದು ಅಭಿಪ್ರಾಯಪಟ್ಟರು. ಭಾರತೀಯ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ಡಾ.ಮನೋಹರ ಯಾದವ್ ಮಾತನಾಡಿ, ಇಂದು ಊರುಗಳಲ್ಲಿ ರಸ್ತೆ, ಮನೆಗಳ ರೂಪ ಬದಲಾಗಿರಬಹುದು ಜಾತಿ ಮನಸ್ಥಿತಿ ಬದಲಾಗಿಲ್ಲ.
ಅದಕ್ಕಾಗಿಯೇ ಕರ್ನಾಟಕದಲ್ಲಿ ಇಂದಿಗೂ ದಲಿತರೊಬ್ಬರು ಮುಖ್ಯಮಂತ್ರಿಯಾಗಲಿಲ್ಲ. ದಲಿತರಿಗಾಗಿ ಒಂದು ಸಹಕಾರಿ ಬ್ಯಾಂಕ್ ಇಲ್ಲ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಬರಹಗಾರ ಸುರೇಶ್ ಗೌತಮ್, ಪತ್ರಕರ್ತೆ ಶಾಂತಕುಮಾರಿ ಉಪಸ್ಥಿತರಿದ್ದರು.