Advertisement

ಪೂಜಾ ಗಾಂಧಿ ಫಿಲ್ಮ್ ಫ್ಯಾಕ್ಟರಿ

11:16 AM Mar 28, 2017 | |

ಪೂಜಾ ಗಾಂಧಿ ಮತ್ತೆ ಸುದ್ದಿಯಲ್ಲಿದ್ದಾರೆ! ಪೂಜಾ ಗಾಂಧಿ ಒಂದು “ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ’ ಎಂಬ ಹೊಸ ಬ್ಯಾನರ್‌ವೊಂದನ್ನು ಶುರುಮಾಡಿದ್ದಾರೆ. ಆ ಮೂಲಕ ಒಂದಷ್ಟು ಹೊಸ ಬಗೆಯ ಚಿತ್ರಗಳನ್ನು ನಿರ್ಮಾಣ ಮಾಡುವುದು ಅವರ ಪರಮ ಉದ್ದೇಶ. ಪೂಜಾಗಾಂಧಿ ಹುಟ್ಟುಹಾಕಿರುವ ಈ ಹೊಸ ಬ್ಯಾನರ್‌ನಲ್ಲಿ ಹೊಸ ಪ್ರತಿಭೆಗಳು ಸೇರಿದಂತೆ ಒಂದಷ್ಟು ಹೊಸತನದ ಕಥೆಗಳನ್ನು ರೆಡಿಮಾಡಿರುವ ನಿರ್ದೇಶಕರೂ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಂದಹಾಗೆ, ಪೂಜಾ ಗಾಂಧಿಯ ಹೊಸ ಫಿಲ್ಮ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿರುವ ಸಿನಿಮಾ ಇತ್ಯಾದಿ ಕುರಿತು “ಚಿಟ್‌ಚಾಟ್‌’ನಲ್ಲಿ ಮಾತಾಡಿದ್ದಾರೆ.

Advertisement

* ಫಿಲ್ಮ್ ಫ್ಯಾಕ್ಟರಿ ಹುಟ್ಟು ಹಾಕಿದ್ದೀರಂತೆ?
– ನನಗೆ ಮೊದಲಿನಿಂದಲೂ ಒಂದು ಆಸೆ ಇತ್ತು. ಕನ್ನಡದಲ್ಲಿ ನನ್ನದೇ ಆದ ಒಂದು ಹೊಸ ಬ್ಯಾನರ್‌ ಹುಟ್ಟು ಹಾಕಬೇಕು. ಆ ಮೂಲಕ ಒಂದಷ್ಟು ಸಿನಿಮಾಗಳನ್ನು ಮಾಡಬೇಕು ಅಂತ. ಹಾಗಾಗಿಯೇ “ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ’ ಶುರುಮಾಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಇದರ ಉದ್ದೇಶವಿಷ್ಟೆ. ಹೊಸ ಪ್ರತಿಭಾವಂತರನ್ನು ಗುರುತಿಸುವುದು, ಒಳ್ಳೆಯ ಸಿನಿಮಾಗಳನ್ನು ಮಾಡುವುದು. ಇನ್ನೊಂದು ವಿಶೇಷವೆಂದರೆ, ತೆಲುಗಿನ ಖ್ಯಾತ ನಟ ಜೆ.ಡಿ.ಚಕ್ರವರ್ತಿ ಅವರ ಸಹಭಾಗಿತ್ವದಲ್ಲಿ ಸಿನಿಮಾಗಳ ನಿರ್ಮಾಣ ಆಗಲಿದೆ.

* ಈಗಾಗಲೇ “ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ’ಯಿಂದ 3 ಚಿತ್ರಗಳನ್ನು ಅನೌನ್ಸ್‌ ಮಾಡಿದಂತಿದೆ?
-ಹೌದು, ನನ್ನ ಬ್ಯಾನರ್‌ನಲ್ಲಿ ಹತ್ತು ಚಿತ್ರಗಳನ್ನು ಮಾಡುವ ಗುರಿ ಇದೆ. ಸದ್ಯಕ್ಕೆ ಮೂರು ಚಿತ್ರಗಳನ್ನು ಈಗ ಅನೌನ್ಸ್‌ ಮಾಡಿದ್ದೇನೆ. ಹಂತ ಹಂತವಾಗಿ ಉಳಿದ ಸಿನಿಮಾಗಳನ್ನೂ ಅನೌನ್ಸ್‌ ಮಾಡುತ್ತೇನೆ. ಇದು ಈಗಷ್ಟೇ ಆರಂಭವಾಗಿದೆ. ಮುಂದೆ ಹೋದಂತೆ, ನಿಮಗೆ ನನ್ನ ಬ್ಯಾನರ್‌ನಲ್ಲಿ ಎಂಥೆಂಥಾ ಚಿತ್ರಗಳು ಮೂಡಿಬರುತ್ತವೆ ಎಂಬುದು ಗೊತ್ತಾಗಲಿದೆ.

* ಆ ಮೂರು ಸಿನಿಮಾಗಳ ಬಗ್ಗೆ ಹೇಳಬಹುದಾ?
– ಮೊದಲನೆಯದು “ಬ್ಲಾಕ್‌ ವರ್ಸಸ್‌ ವೈಟ್‌’. ಈ ಸಿನಿಮಾವನ್ನು ಲಕ್ಕಿಶಂಕರ್‌ ನಿರ್ದೇಶಿಸುತ್ತಿದ್ದಾರೆ. ಲೇಡಿ ಲಾಯರ್‌ ಮತ್ತು ಲೇಡಿ ಜರ್ನಲಿಸ್ಟ್‌ ಕುರಿತ ಕಥೆ ಹೊಂದಿದೆ. ಕನ್ನಡಕ್ಕೆ ಹೊಸಬಗೆಯ ಸಿನಿಮಾ ಇದಾಗಲಿದೆ. ಹೊಸ ಪ್ರತಿಭೆಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ. ಜತೆಯಲ್ಲಿ ನಾನೂ ಕೂಡ ನಟಿಸುತ್ತಿದ್ದೇನೆ. ಎರಡನೆಯದು “ಉತಾಹಿ’. ಇದನ್ನು ಜೆ.ಡಿ.ಚಕ್ರವರ್ತಿ ನಿರ್ದೇಶಿಸುತ್ತಿದ್ದಾರೆ. ಇಲ್ಲಿ ನಾನು ಮತ್ತು ಜೆ.ಡಿ.ಚಕ್ರವರ್ತಿ ಇಬ್ಬರೂ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದೇವೆ. ಇನ್ನು ಮೂರನೆಯದು “ಭೂ’. ಇದನ್ನೂ ಜೆ.ಡಿ.ಚಕ್ರವರ್ತಿ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಪೈಕಿ “ಉತಾಹಿ’ ಏಪ್ರಿಲ್‌ ಅಥವಾ ಮೇನಲ್ಲಿ ಶುರುವಾಗಲಿದೆ. “ಭೂ’ ಮತ್ತು “ಉತಾಹಿ’ ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ತಯಾರಾಗಲಿದೆ.

* ನಿಮ್ಮ ಬ್ಯಾನರ್‌ನಲ್ಲಿ ಹೊಸಬರಿಗೂ ಅವಕಾಶ ಕೊಡ್ತೀರ ಅನ್ನಿ?
– ಹೌದು, ಹೊಸತನದ ಕಥೆ ಇದ್ದರೆ, ಅದು ನನಗೆ ಇಷ್ಟವಾದರೆ, ಖಂಡಿತ ಹೊಸಬರಿಗೆ ಅವಕಾಶ ಕೊಡ್ತೀನಿ. ಅಂತಹ ಪ್ರತಿಭೆಗಳಿಗಾಗಿಯೇ ನಾನು “ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ’ ಹುಟ್ಟುಹಾಕಿದ್ದೇನೆ. ಸದ್ಯಕ್ಕೆ ಈ ವರ್ಷದ ಆರಂಭದಲ್ಲಿ ಮೂರು ಸಿನಿಮಾಗಳು ಸೆಟ್ಟೇರುತ್ತಿವೆ. ಹಂತ ಹಂತವಾಗಿ, ಇನ್ನಷ್ಟು ಸಿನಿಮಾಗಳನ್ನು ಅನೌನ್ಸ್‌ ಮಾಡ್ತೀನಿ. ಅವೆಲ್ಲವೂ ಹೊಸಬರದ್ದೇ ಆಗಿರುತ್ತದೆ ಎಂಬುದು ವಿಶೇಷ.

Advertisement

* ಎಲ್ಲಾ ಸರಿ, “ರಾವಣಿ’ ಅನ್ನೋ ಸಿನಿಮಾ ಏನಾಯ್ತು?
– “ರಾವಣಿ’ ಸಿನಿಮಾ ಕಾರಣಾಂತರದಿಂದ ಆಗಲಿಲ್ಲ. ಆ ನಂತರ ಚಕ್ರವರ್ತಿ ಜೊತೆಗೆ ಒಂದು ಸಿನಿಮಾ ಮಾಡ್ತೀನಿ ಅಂತಾನೂ ಹೇಳಿದ್ದೆ. ಖಂಡಿತವಾಗಿಯೂ ಆ ಸಿನಿಮಾ ಆಗುತ್ತೆ. ಅದಕ್ಕೆ ಈಗಾಗಲೇ ತಯಾರಿಯೂ ನಡೆಯುತ್ತಿದೆ. ಅದೊಂದು ಬಿಗ್‌ ಪ್ರಾಜೆಕ್ಟ್. ನಾಲ್ಕು ಭಾಷೆಯಲ್ಲಿ ತಯರಾಗಬೇಕಿರುವ ಚಿತ್ರ. ಅದರ ರೂಪುರೇಷೆಗೆ ಒಂದು ವರ್ಷ ಹತ್ತು ತಿಂಗಳೇ ಕಳೆದಿದೆ. ಅದಕ್ಕಾಗಿಯೇ 110 ಲೊಕೇಷನ್‌ಗಳನ್ನು ಹುಡುಕಿದ್ದೇವೆ. ಮುಂಬೈನ ತಂತ್ರಜ್ಞರು ಆ ಸಿನಿಮಾಗೆ ಕೆಲಸ ಮಾಡಲಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕಲಾವಿದರು ನಟಿಸಲಿದ್ದಾರೆ. ಅವರೆಲ್ಲರ ಡೇಟ್‌ ನೋಡಿಕೊಂಡು ಆ ಬಿಗ್‌ ಪ್ರಾಜೆಕ್ಟ್ಗೆ ಕೈ ಹಾಕ್ತೀನಿ. ಸದ್ಯಕ್ಕೆ, ಜೆ.ಡಿ.ಚಕ್ರವರ್ತಿ ಅವರು ನನ್ನ “ಎಂಟರ್‌ಟೈನ್‌ಮೆಂಟ್‌ ಫ್ಯಾಕ್ಟರಿ’ ಮೂಲಕ ಎರಡು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

* ಅದ್ಸರಿ ನಿಮ್ಮ ರಾಜಕೀಯ ನಡೆ ಎಲ್ಲಿಗೆ ಬಂತು?
– ಸದ್ಯಕ್ಕೆ ನಾನು ಫ‌ುಲ್‌ ಟೈಮ್‌ ಸಿನಿಮಾಗೇ ಮೀಸಲಿಡುತ್ತೇನೆ. ಹಾಗಂತ ರಾಜಕೀಯ ಬಿಡುವುದಿಲ್ಲ. ನನ್ನ ನಂಬಿದ ಜನರನ್ನೂ ಮರೆಯೋದಿಲ್ಲ. ಎಲ್ಲದ್ದಕ್ಕೂ ಒಳ್ಳೆಯ ಟೈಮ್‌ ಬರಬೇಕಷ್ಟೇ.

* ಮದುವೆ ವಿಷಯ ಎಲ್ಲಿಗೆ ಬಂತು?
– ಹ್ಹ ಹ್ಹ ಹ್ಹಾ … ಅದಕ್ಕಿನ್ನೂ ಸಮಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next